ಬೆಳಗಾವಿ :ಬೆಳಗಾವಿಯಲ್ಲಿ ನೂತನವಾಗಿ ಇಎಸ್ಐ ಆಸ್ಪತ್ರೆ ನಿರ್ಮಾಣದ ಕುರಿತು ನಾನೇ ಮುತುವರ್ಜಿ ವಹಿಸಿ ಆ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇನೆ ಅಲ್ಲದೇ ಶೀಘ್ರದಲ್ಲಿಯೇ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಂದಿಲ್ಲಿ ಭರವಸೆ ನೀಡಿದರು.

ರವಿವಾರ ಬೆಳಗಾವಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬೆಂಗಳೂರು ನಂತರ ಅತ್ಯಂತ ಹೆಚ್ಚು ವಿಮಾ ಕಾರ್ಮಿಕರನ್ನು ಹೊಂದಿರುವ ನಗರ ಬೆಳಗಾವಿ. ಬೆಳಗಾವಿಯಲ್ಲಿ ಅತ್ಯಂತ ದೊಡ್ಡ ದೊಡ್ಡ ಕೈಗಾರಿಕೆಗಳು ಇವೆ. ಕೈಗಾರಿಕಾ ಪ್ರದೇಶ ಅತ್ಯಂತ ವಿಸ್ತಾರವಾಗಿದೆ. ಇದು ಕರ್ನಾಟಕ ಮಾತ್ರವಲ್ಲ. ಮಹಾರಾಷ್ಟ್ರದ ಪುಣೆ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಗೆ ತನ್ನ ಉತ್ಪಾದನೆಯನ್ನು ಕಳಿಸಿಕೊಡುವ ನಗರವಾಗಿ ಗುರುತಿಸಿಕೊಂಡಿದೆ. ಸುಮಾರು ಮೂರೂವರೆ ಲಕ್ಷದಷ್ಟು ವಿಮಾ ಕಾರ್ಡುದಾರರು ಬೆಳಗಾವಿಯಲ್ಲಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದು ಸಚಿವರು ಹೇಳಿದರು.
ಬೆಳಗಾವಿಯಲ್ಲಿ 1998 ರಲ್ಲಿ ಕಟ್ಟಿದ ಇಎಸ್ಐ ಆಸ್ಪತ್ರೆ ಇದೆ. ಸುಮಾರು 25 ರಿಂದ 26 ವರ್ಷಗಳ ಹಳೆಯ ಕಟ್ಟಡ ಈಗ ಶಿಥಿಲಾವಸ್ತೆಗೆ ತಲುಪಿದೆ. ಹೀಗಾಗಿ ಹೊಸ ಕಟ್ಟಡ ಕಟ್ಟಲು ಈಗಾಗಲೇ ಟೆಂಡರ್ ಆಗಿದೆ. ಈಗ ಇರುವ 50 ಹಾಸಿಗೆಗಳ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಿ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ನಿರ್ಮಿಸಲಾಗುವುದು. ಈಗಾಗಲೇ 152 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ. ಈಗಿರುವ ಕಟ್ಟಡವಿದ್ದ ಜಾಗವು ಮೂರುವರೆ ಎಕರೆ ಜಮೀನು ಇದೆ. ಆದರೆ, ಸ್ಥಳೀಯ ಶಾಸಕರು ಕೈಗಾರಿಕೆಗಳು ಇರುವ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣದ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅಲ್ಲಿ ಜಾಗ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಾನು ದೆಹಲಿಗೆ ಹೋದ ನಂತರ ಪರಿಶೀಲನೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ಈಗ ಇರುವ ಇಎಸ್ಐ ಆಸ್ಪತ್ರೆ ಕೇವಲ ಸಲಹಾ ಕೇಂದ್ರವಾಗಿ ಉಳಿದುಕೊಂಡಿದೆ. ಹೊಸ ಸ್ಥಳದಲ್ಲಿ ನೀರು, ಸಾರಿಗೆ, ವಾಹನ ನಿಲುಗಡೆ, ಸಿಬ್ಬಂದಿಗೆ ವಸತಿ ಸೌಲಭ್ಯ ಸೇರಿದಂತೆ ಆಧುನಿಕವಾಗಿ ಸಿಗುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಯೋಜನೆ ಇದ್ದು ಇ ಎಸ್ ಐ ಕಾರ್ಡ್ ಗಳನ್ನು ಆಯುಷ್ಮಾನ್ ಕಾರ್ಡ್ ಗಳ ಜೊತೆ ಜೋಡಿಸುವ ಕಾರ್ಯ ಆಗಬೇಕು. ಇಎಸ್ಐ ಉಚಿತವಾಗಿ ಔಷಧಗಳನ್ನು ವಿತರಿಸುವ ಆಸ್ಪತ್ರೆಯಾಗಿದೆ. ಅದರ ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಆದರೆ, ಉತ್ತಮ ವೈದ್ಯರ ಕೊರತೆ ಕಾರಣಕ್ಕೆ ಜನರು ಇಎಸ್ ಐ ಆಸ್ಪತ್ರೆಗಳಿಗೆ ಬರುತ್ತಿಲ್ಲ. ಆಯುಷ್ಮಾನ್ ಕಾರ್ಡಿನ ಜೊತೆ ಇಎಸ್ಐ ವಿಮಾ ಕಾರ್ಡುದಾರರನ್ನು ಜೋಡಿಸುವ ಮೂಲಕ ಅವರಿಗೆ ತಮ್ಮ ವೈದ್ಯಕೀಯ ವ್ಯವಸ್ಥೆ ನೀಡುವ ಹಲವಾರು ಚಿಂತನೆ ನಮ್ಮ ಮುಂದಿದೆ. ಜೊತೆಗೆ ಎಸ್ ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಮುಂದಾಗಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇಂಥ ಆಸ್ಪತ್ರೆಗಳನ್ನು ಮಠಗಳು ಅಥವಾ ದಾನಿಗಳು ಇದ್ದರೆ ಅವರ ಮೂಲಕ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕೇಂದ್ರ ಸರಕಾರ ದೇಶದ ವಿವಿಧ ಭಾಗಗಳಲ್ಲಿ ಇಂತಹ ಆಸ್ಪತ್ರೆಗಳನ್ನು ನಿರ್ಮಿಸಿ ಜನರಿಗೆ ಉತ್ತಮ ವೈದ್ಯಕೀಯ ನೆರವು ನೀಡುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದರು.
ಇಎಸ್ಐ ಮಾತ್ರವಲ್ಲ, ದೇಶದಲ್ಲಿ ಏಮ್ಸ್ ಬಿಟ್ಟರೆ ಇತರ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಈ ಕೊರತೆ ನೀಗಿಸಲು ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.