ಬೆಳಗಾವಿ : ಬೆಳಗಾವಿಯ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಕಾಕತಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಸ್ವಾಮಿಜಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.   

ಮೃತಪಟ್ಟವರನ್ನು ಮಹಾರಾಷ್ಟ್ರ ಮೂಲದ ಪಾಂಡುರಂಗ ಜಾಧವ್​(76), ಹಾಗೂ ಹುಕ್ಕೇರಿಯ ಕಾರು ಚಾಲಕ ಪಂಚಾಕ್ಷರಿ ಹಿರೇಮಠ ಎಂದು ಗುರುತಿಸಲಾಗಿದೆ. ಸ್ವಾ,ಮೀಜಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ರದ್ಧತಿ ಖಂಡಿಸಿ ಶನಿವಾರ ಬೆಳಗಾವಿಯಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಆ ಹೋರಾಟದಲ್ಲಿ ಭಾಗಿಯಾಗಲು ತೆರಳುತ್ತಿದ್ದ, ವೇಳೆ ಘಟನೆ ಸಂಭವಿಸಿದೆ.

ಕಾರಿನ ಮುಂಬದಿಯಲ್ಲಿದ್ದ ಲಾರಿ ಚಾಲಕ ಬ್ರೇಕ್​ ಹಾಕಿದಾಗ ಹಿಂಬದಿ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಹಿಂದಿರುವ ಮತ್ತೊಂದು ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ನಡುವೆ ಸಿಲುಕಿ ಕಾರ್​ ಜಖಂಗೊಂಡಿದೆ.

ಕಾರು ಚಾಲಕ ಪಂಚಾಕ್ಷರಿ ಹಾಗೂ ಪಾಂಡುರಂಗ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿಯಲ್ಲಿದ್ದ ಸ್ವಾಮೀಜಿಗೆ ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.