ಬೆಳಗಾವಿ,: ಉದ್ಯಮಿದಾರರಿಗೆ ಸುವರ್ಣಾವಕಾಶ ನೀಡುತ್ತಿರುವ ಚಿನ್ನದ ಭೂಮಿಯಾದ ದುಬೈನಲ್ಲಿ ಭಾರತೀಯರು ಉದ್ಯಮ ಸ್ಥಾಪಿಸಲು ಮುಂದೆ ಬಂದರೆ ಅವರಿಗೆ ಸಕಲ ಸೌಲಭ್ಯಗಳನ್ನು ನೀಡಿ ಸ್ವಾಗತಿಸಲಾಗುತ್ತದೆ. ಕೇವಲ ಉದ್ಯಮವಲ್ಲದೇ ಸೇವಾ ವಲಯದಲ್ಲಿ ಗುರುತಿಸಿಕೊಳ್ಳುವವರಿಗೂ ಅವಕಾಶದ ಬಾಗಿಲು ಸದಾ ತೆರೆದಿದ್ದು, ಸಕಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಬೆಳಗಾವಿ ಮೂಲದ ಸದ್ಯ ದುಬೈನ ವಿದ್ಯುತ್ ಮತ್ತು ಜಲಮಂಡಳಿಯ ಯೋಜನಾ ಸಲಹೆಗಾರರಾದ ಸೋಮನಾಥ ಪಾಟೀಲ ಅವರು ಹೇಳಿದರು.
ಬೆಳಗಾವಿಯ ಲಿಂಗಾಯತ ಬಿಸಿನೆಸ್ ಫೊರಮ್ ಏರ್ಪಡಿಸಿದ್ದ 53 ನೇ ಮಾಸಿಕ ಸಾಮಾನ್ಯ ಸಭೆ ಹಾಗೂ ಉದ್ಯಮಿ ನಾಯಕತ್ವ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅವರು, ವಾಸ್ತವವಾಗಿ ಆರೋಗ್ಯ ರಕ್ಷಣೆ, ಶಿಕ್ಷಣಕ್ಕೆ ಸಾಕಷ್ಟು ಅವಕಾಶವಿದೆ. ದುಬೈ ಬೆಳೆಯುತ್ತಿರುವ ದೇಶವಾಗಿದ್ದು, ಜನಸಂಖ್ಯೆ ಏರುಗತಿಯಲ್ಲಿದೆ. ಆದ್ದರಿಂದ ಮುಖ್ಯವಾಗಿ ಆರೋಗ್ಯ ಸೇವೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸದ್ಯಕ್ಕೆ 20 ಮಿಲಿಯನಗಿಂತ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ 78 ಮಿಲಿಯನ್ ತಲುಪಬಹುದು ಎಂದು ಅಂದಾಜಿಸಲಾಗಿದೆ. ಯಾವ ವಲಯದಲ್ಲಿ ಪರಿಣಿತಿ ಹೊಂದಿಲ್ಲದಿದ್ದರೂ ಅದನ್ನು ನೀವು ಸಾಧಿಸಲು ನಾಯಕತ್ವ ಮತ್ತು ನಿರ್ವಹಣೆ ನಮ್ಮ ಮುಖ್ಯ ಧ್ಯೇಯವಾಗಿರಬೇಕು ಎಂದು ತಿಳಿಸಿದರು.
ದುಬೈನಲ್ಲಿರುವ ಜನರು ನಿಮ್ಮ ಪಾಲುದಾರರಾಗಲು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಆದರೆ ನೀವು ಅವರೊಂದಿಗೆ ಜೊತೆಗೂಡಿ ಉದ್ಯಮ ಸ್ಥಾಪಿಸಬೇಕು. ದುಬೈನಲ್ಲಿ ವೆಚ್ಚ ಅಧಿಕವಾಗಿದ್ದರೆ, ನೀವು ಶಾರ್ಜಾದಲ್ಲಿ ಕಡಿಮೆ ವೆಚ್ಚದಲ್ಲಿ ಉದ್ಯಮ ಸ್ಥಾಪಿಸಬಹುದು. ಅಲ್ಲಿ ಸಾಕಷ್ಟು ಅವಕಾಶಗಳಿವೆ. ದುಬೈ ಆಧುನಿಕತೆಯೊಂದಿಗೆ ಬೆರೆತುಕೊಂಡಿದ್ದು, ಮುಂಬೈನಂತೆ ಭಾಸವಾಗುವ ಸುರಕ್ಷಿತ ತಾಣ, ಅಲ್ಲಿ ನೀವು ಎಲ್ಲ ರೀತಿಯ ಉದ್ಯಮವನ್ನು ಸ್ಥಾಪಿಸಲು ಅವಕಾಶವಿದೆ. ಮುಂದಿನ 10 ವರ್ಷಗಳ ಗುರಿಯನ್ನು ಇಟ್ಟುಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಶಿಸ್ತನ್ನು ಪಾಲಿಸುವ ಆ ದೇಶದಲ್ಲಿ ಸಮಸ್ಯೆ ಅತ್ಯಲ್ಪ. ಕಾರು ಅಪಘಾತವಾದರೂ ಕೂಡ ಆತನ ವಿರುದ್ದ ಧ್ವನಿ ಎತ್ತಲು ಸಾಧ್ಯವಿಲ್ಲ. ಎಲ್ಲವೂ ಡಿಜಿಟಲ ಆಗಿದ್ದು, ಕೇವಲ ಬೆರಳ ತುದಿಯಲ್ಲಿ ಕಾರ್ಯಗಳು ನಡೆಯುತ್ತವೆ. ವಿಸಾ ಪಡೆಯುವದಕ್ಕಾಗಿ ಅತ್ಯಂತ ಸರಳ ವಿಧಾನವಿದ್ದು, ನೀವು ಯಾವ ಉದ್ದೇಶಕ್ಕೆ ಭೇಟಿ ನೀಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಂಡರೆ ಕೆಲವೇ ದಿನಗಳಲ್ಲಿ ನಿಮಗೆ ಅವಕಾಶ ನೀಡಲಾಗುತ್ತದೆ. ಸೇವೆ ಮತ್ತು ಪೂರೈಕೆ ಭಾಗದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದ ಅವರು, ಹೂಡಿಕೆದಾರರು ಅವಕಾಶವನ್ನು ಸೃಷ್ಟಿಸುತ್ತಾರೆ. ಸ್ಟಾರ್ಟ್ಗೆ ಅಪ್ಪ ಗೆ ಹೆಚ್ಚಿನ ಅವಕಾಶವಿದೆ. ಈಗಾಗಲೇ ಉದ್ಯಮ ಸ್ಥಾಪಿಸಿದ್ದರೆ ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಗುರುತಿಸಕೊಳ್ಳುತ್ತೀರಿ. ನಿಮ್ಮ ಸಾಮರ್ಥ್ಯ ಹಾಗೂ ಕಠಿಣ ಪರಿಶ್ರಮ ಆಧರಿಸಿ ಉದ್ಯಮದ ಅಭಿವೃದ್ದಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಎಲ್.ಬಿ . ಎಫ್. ನ ಅಧ್ಯಕ್ಷ ಕಿರಣ ಅಗಡಿ, ಉಪಾಧ್ಯಕ್ಷ ರಾಜಶೇಖರ ಶೀಲವಂತ , ಕಾರ್ಯದರ್ಶಿ ಸಚಿನ ಬೈಲವಾಡ, ಖಜಾಂಚಿ ಶ್ರೀಮತಿ ಜ್ಯೋತಿ ನಿಂಬಾಳ, ಕಾರ್ಯಾಧ್ಯಕ್ಷ ಲಿಂಗರಾಜ ಜಗಜಂಪಿ, ಸದಸ್ಯ ಅಧ್ಯಕ್ಷ ಮಹಾಂತೇಶ ಪುರಾಣಿಕ, ಈರಣ್ಣ ದೇಯಣ್ಣವರ, ಮಲ್ಲಿಕಾರ್ಜುನ ಮುದನೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಎಲ್. ಬಿ. ಎಫ್ ನ ನವೀನ ಮತ್ತು ಸೃಜನಾತ್ಮಕ ಕಾರ್ಯಕ್ಕೆ ಸರ್ವರಿಂದ ಮೆಚ್ಚುಗೆ ವ್ಯಕ್ತವಾಯಿತು.