ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನವನ್ನು ಅಲಂಕರಿಸಿದ್ದು, ಚೀನಾವನ್ನು ಹಿಂದಿಕ್ಕಿ 142.86 ಕೋಟಿ ಜನಸಂಖ್ಯೆಯುಳ್ಳ ದೇಶವಾಗಿ ಹೊರಹೊಮ್ಮಿದೆ. ಚೀನಾದ ಜನಸಂಖ್ಯೆ 142.57 ಕೋಟಿ ಇದೆ. ಇನ್ನೂ ಮೂರು ದಶಕಗಳ ಕಾಲ ಭಾರತದ ಜನಸಂಖ್ಯೆ ಏರುಗತಿಯಲ್ಲಿಯೇ ಸಾಗಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ವಿಶ್ವಸಂಸ್ಥೆಯು ಬುಧವಾರ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಈ ಮಾಹಿತಿ ಇದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಚೀನಾದ ಜನಸಂಖ್ಯೆ 142.57 ಕೋಟಿ ಇದ್ದರೆ, ಭಾರತದ ಜನಸಂಖ್ಯೆ 142.86 ಕೋಟಿ ದಾಟಿದೆ. 1950ರಲ್ಲಿ ವಿಶ್ವಸಂಸ್ಥೆಯು ಜಗತ್ತಿನ ಜನಸಂಖ್ಯೆಯ ದತ್ತಾಂಶಗಳನ್ನು ಸಂಗ್ರಹಿಸಲು ಆರಂಭಿಸಿದ ಬಳಿಕ, ಅತ್ಯಂತ ಜನಸಂಖ್ಯೆಯುಳ್ಳ ದೇಶಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಪ್ರಥಮ ಸ್ಥಾನ ಪಡೆದಿದೆ. 1960ರ ನಂತರ ಮೊದಲ ಸಲ ಚೀನಾದ ಜನಸಂಖ್ಯೆಯು ಕಳೆದ ವರ್ಷ ಕುಸಿತ ಕಂಡಿತ್ತು. ಮಾಜಿ ನಾಯಕ ಮಾವೋ ಜೆಡಾಂಗ್ ಅವರ ಅನಾಹುತಕಾರಿ ಕೃಷಿ ನೀತಿಗಳಿಂದಾಗಿ ಲಕ್ಷಾಂತರ ಜನರು 1960ರ ದಶಕದಲ್ಲಿ ಹಸಿವಿನಿಂದ ಸಾವಿಗೀಡಾಗಿದ್ದರು.
ಒಂದೇ ಮಗು ನೀತಿಯಿಂದಾಗಿ ಚೀನಾದ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಒಂದೆರಡು ದಶಕಗಳಲ್ಲಿನ ಜನನ ನಿಯಂತ್ರಣವು ಈಗ ಅದಕ್ಕೆ ಮಾನವ ಸಂಪನ್ಮೂಲದ ಕೊರತೆ ಉಂಟಾಗಲು ಕಾರಣವಾಗಿದೆ. ಕೆಲವು ಪ್ರದೇಶಗಳು ಈಗಾಗಲೇ ಜನನ ಪ್ರಮಾಣ ಹೆಚ್ಚಿಸಲು ಯೋಜನೆಗಳನ್ನು ಪ್ರಕಟಿಸಿವೆ. ಆದರೆ ಜನಸಂಖ್ಯಾ ಕುಸಿತದ ಸನ್ನಿವೇಶವನ್ನು ತಡೆಯುವುದು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಭಾರತವು 2011ರ ಬಳಿಕ ಮತ್ತೆ ಜನಗಣತಿ ನಡೆಸಿಲ್ಲ. ಹೀಗಾಗಿ ಭಾರತದಲ್ಲಿ ಇರುವ ಜನಸಂಖ್ಯೆ ಎಷ್ಟು ಎಂಬ ಬಗ್ಗೆ ಅದರ ಬಳಿ ಯಾವುದೇ ನಿರ್ದಿಷ್ಟ ಅಧಿಕೃತ ದತ್ತಾಂಶ ಇಲ್ಲ. ಭಾರತದಲ್ಲಿ ಪ್ರತಿ ದಶಕಕ್ಕೆ ಒಮ್ಮೆ ಜನಗಣತಿ ನಡೆಸುವುದು ವಾಡಿಕೆ. ಆದರೆ 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಅದು ವಿಳಂಬವಾಗಿತ್ತು.
ಕೇರಳ ಅಧಿಕ ವೃದ್ಧರು : ಭಾರತದ ಜನಸಂಖ್ಯೆಯಲ್ಲಿ 4ನೇ 1 ಭಾಗದಷ್ಟು ಜನ 14 ವರ್ಷಕ್ಕಿಂತ ಕೆಳಗಿನವರಾಗಿದ್ದು, ಶೇ 68ರಷ್ಟು ಜನಸಂಖ್ಯೆ 15 ರಿಂದ 64 ವರ್ಷ ಹಾಗೂ ಶೇ 7ರಷ್ಟು ಜನರು 65 ವರ್ಷ ದಾಟಿದವರಾಗಿದ್ದಾರೆ. ಕೇರಳ ಮತ್ತು ಪಂಜಾಬ್‌ನಲ್ಲಿ ವಯಸ್ಕರ ಸಂಖ್ಯೆ ಅಧಿಕವಾಗಿದ್ದರೆ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಕಿರಿಯರ ಸಂಖ್ಯೆ ಹೆಚ್ಚಾಗಿದೆ. ಭಾರತದ ಜನಸಂಖ್ಯೆಯು ಮೂರು ದಶಕಗಳಲ್ಲಿ 165 ಕೋಟಿಯ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಬಳಿಕ ಅದು ಕುಸಿತ ಕಾಣತೊಡಗಲಿದೆ ಎಂದು ಹೇಳಲಾಗಿದೆ.
2023ರ ಮಧ್ಯಭಾಗದ ವೇಳೆಗೆ ಜಾಗತಿಕ ಜನಸಂಖ್ಯೆಯು 8.045 ಬಿಲಿಯನ್‌ಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯು ಅಂದಾಜಿಸಿದೆ. ಮುಖ್ಯವಾಗಿ ಯುರೋಪ್ ಹಾಗೂ ಏಷ್ಯಾದಲ್ಲಿ ಜನಸಂಖ್ಯೆಯು ಮುಂದಿನ ದಶಕಗಳಲ್ಲಿ ಇಳಿಕೆಯ ಹಾದಿಯಲ್ಲಿ ಸಾಗಲಿದೆ ಎಂದು ಕಳೆದ ವರ್ಷದ ಜುಲೈನಲ್ಲಿ ಪ್ರಕಟವಾದ ವಿಶ್ವಸಂಸ್ಥೆ ವರದಿ ಹೇಳಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಜಗತ್ತಿನ ಜನಸಂಖ್ಯೆ 800 ಕೋಟಿ ಗಡಿ ಕ್ರಮಿಸಿತ್ತು. 2030ರಲ್ಲಿ ಜನಸಂಖ್ಯೆಯು 850 ಕೋಟಿ ತಲುಪಲಿದೆ.