ಬೆಳಗಾವಿ : ಇತಿಹಾಸವನ್ನು ಒಮ್ಮೆ ನೋಡಿದರೆ ಭಾರತವು ಸಾಂಸ್ಕೃತಿಕ, ಕಲೆ, ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿತ್ತು. ಭಾರತವು ಪ್ರಾಚೀನ ಕಾಲದಿಂದಲೂ ಜಾತ್ಯಾತೀತ ದೇಶವಾಗಿದೆ. ಹಲವಾರು ಧರ್ಮ ಪ್ರಚಾರಕರು ಇಲ್ಲಿಗೆ ಭೇಟಿ ನೀಡಿ ತಮ್ಮ ಗ್ರಂಥಗಳಲ್ಲಿ ಭಾರತದ ವೈಶಿಷ್ಟ್ಯದ ಕುರಿತು ಉಲ್ಲೇಖಿಸಿರುವುದನ್ನ ಕಾಣುತ್ತವೆ. ಜ್ಞಾನದ ಆಗರವಾಗಿದ್ದ ಅಂದಿನ ಭಾರತ ಇಂದಿಗೂ ಹಲವಾರು ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಇಂತಹ ಅಚ್ಚರಿ‌ ಮಾಹಿತಿಯೊಂದು ನಿಮ್ಮಗೆ ತಿಳಿವುದೇ ನಮ್ಮ‌ ತಂಡದ ಪ್ರಯತ್ನ.
ಗ್ರಾಮವೊಂದರ ಸರಕಾರಿ ಶಾಲಾ ಕಟ್ಟಡಕ್ಕಾಗಿ ಅಡಿಪಾಯ ಅಗೆಯುವ ವೇಳೆ ಭೂ ಗರ್ಭದಲ್ಲೊಂದು ಮೂರ್ತಿ ದೊರೆಕಿದೆ. ಜೈನ್ ಧರ್ಮದ 23 ನೇ ತೀರ್ಥಂಕರ ಪಾರ್ಶ್ವನಾಥ ಭಗವಾನರ ಈ ಶಿಲೆಯು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಹೌದು ‌ಸುಮಾರು ಕ್ರಿ. ಶ. 11 ನೇ ಶತಮಾನದ ಪಾರ್ಶ್ವನಾಥ ತೀರ್ಥಂಕರರ‌ ಶಿಲ್ಪ ಕಲೆಯೊಂದು ಭೂ ಗರ್ಭದಲ್ಲಿ ದೊರೆತು ವಿಜ್ಞಾನಕ್ಕೆ ಸವಾಲಾಗುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೂರ್ತಿಯು ದಿನಕ್ಕೆ ಮೂರು ಬಣ್ಣಗಳಾಗಿ ಪರಿವರ್ತನೆ ಹೊಂದುವುದು ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ, ಮತ್ತು ನಮ್ಮ ಪೂರ್ವಜರ ಶಿಲ್ಪಕಲಾ ಜ್ಞಾನದ ಕುರಿತು ಅತೀವ ಹೆಮ್ಮೆ ಎನಿಸುತ್ತದೆ. ಕಪ್ಪು ಮಿಶ್ರಿತ ನೀಲಿ ಛಾಯೆಯ ಶಿಲೆಯಲ್ಲಿ ಕೆತ್ತಲ್ಪಟ್ಟ ಮೂರ್ತಿ ಇದಾಗಿದೆ. ಪ್ರತಿಮೆಯು 115 ಸೆಂ. ಮೀ. ಎತ್ತರ, 47 ಸೆಂ.ಮೀ. ಅಗಲವಾಗಿದೆ. ಮೂರ್ತಿಯ ಹಿಂಭಾಗದಲ್ಲಿ ಬಲ ಪಾದದಡಿಯಿಂದ ತಲೆಯ ಮೇಲ್ಬಾಗದ ವರೆಗೂ ಅಂಕುಡೊಂಕಾಗಿ ಸುರುಳಿಗೊಂಡಿರುವ ಏಳು ಹೆಡೆಯ ಸರ್ಪವಿದೆ. ಇನ್ನೂ ತಲೆಯ ಮೇಲ್ಬಾಗ ಕೊಡೆಯಾಕಾರದಲ್ಲಿ ಸರ್ಪವು ಹೆಡೆ ಬಿಚ್ಚಿ ನಿಂತಿದೆ.
ಹೆಡೆಗಳ ಮೇಲೆ ರತ್ನತ್ರಯ ಪ್ರತೀಕವಾದ ಮುಕ್ಕೊಡೆಯಿದೆ. ಸರ್ಪದ ಎಡ ಬಲಕ್ಕೆ ಎರಡು ಹಿಡಿಸಹಿತ ಚಾಮರಗಳಿವೆ. ಪಾರ್ಶ್ವನಾಥನ ಶೀರೋಭಾಗದ ಹಿಂಭಾಗದಲ್ಲಿ ಪ್ರಭಾಮಂಡಲವಿದೆ. ಕಾಲುಗಳ ಬಲಭಾಗದಲ್ಲಿ ಧರಣೇಂದ್ರ ಯಕ್ಷ, ಎಡಭಾಗದಲ್ಲಿ ಪದ್ಮಾವತಿ ಯಕ್ಷಿ ಇದ್ದಾರೆ. ಶಿಲ್ಪಫಲಕದ ಮೇಲರ್ಧ ಭಾಗ ಮಕರ ತೋರಣದಿಂದ ಬಳ್ಳಿಯ ಅಲಂಕೃತದ ಪ್ರಭಾವಳಿ ಇದೆ. ಮೇಲ್ಭಾಗದಲ್ಲಿ ಕೀರ್ತಿ ಮುಖದ ಅಲಂಕಾರವಿದೆ.
ಒಂದೆ ಶಿಲೆಯಲ್ಲಿ ಕೆತ್ತಲ್ಪಟ್ಟ ಈ ಮೂರ್ತಿ ಧಾನ್ಯ ಮುದ್ರೆಯ ಮುಖಭಾವ ಹೊಂದಿದೆ. ಸರ್ಪದ ವಿನಯತೆ, ಮತ್ತು ಯಕ್ಷ ಯಕ್ಷಿಯರ ಆಯುಧ, ಆಭರಣಾದಿಗಳನ್ನು ಕೆತ್ತಿರುವುದು ಶಿಲ್ಪಿಯ ಕಲಾ ಚಾತುರ್ಯ ಅಮೋಘ. ಅಷ್ಟಕ್ಕೂ ಈ ಮೂರ್ತಿ ದೊರೆತದ್ದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಸಮಳಗಿ ಎಂಬ ಗ್ರಾಮದಲ್ಲಿ. ಮೂಲಸಂಘದ ಬಳಗಾರಗಣದ ಕೇಶಮರ್ಣಗೆ ಗ್ರಾಮದ ಬಸದಿಯ ಆಚಾರ್ಯ ತ್ರಿಭುವನಚಂದ್ರ ಭಟ್ಟಾರಕ ದೇವರ ಶಿಷ್ಯನಾದ ಕೈಹಮಶೆಟ್ಟಿ ಎಂಬಾತ ಈ ಪ್ರತಿಮೆಯನ್ನು ಕೆತ್ತಿಸಿದ್ದಾನೆ ಎಂದು ಮೂರ್ತಿಯ ಪೀಠದ ಮೇಲೆ ಕನ್ನಡ ಲೀಪಿಯ ಶಾಸನವಿದೆ.