ಬೆಳಗಾವಿ: ಸಿನಿಮೀಯ ರೀತಿಯಲ್ಲಿ ವ್ಯಕ್ತಿಯನ್ನು ಅಪಹರಿಸಿರುವ ದುಷ್ಕರ್ಮಿಗಳು 5 ಕೋಟಿ ರೂ. ಬೇಡಿಕೆ ಇಟ್ಟಿದ್ದು, ಅಪಹರಣಕಾರರ ಜಾಡು ಹಿಡಿದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ನೀಲಪ್ಪ ಅಂಬಿ(48) ಎಂಬ ವ್ಯಕ್ತಿಯನ್ನು ಅಪಹರಿಸಲಾಗಿದೆ. ಇವರ ಪತ್ನಿ ಶೋಭಾ ಬಸವರಾಜ ಅಂಬಿ ಅವರಿಗೆ ಬೆದರಿಕೆ ಕರೆ ಮಾಡಿರುವ ಅಪಹರಣಕಾರರು 5 ಕೋಟಿ ರೂ. ಕೊಟ್ಟರೆ ಗಂಡನನ್ನು ಜೀವಂತವಾಗಿ ಬಿಡುತ್ತೇವೆ. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ.

ಬಸವರಾಜ ಅವರ ಪುತ್ರ ಸೇರಿದಂತೆ ಕೆಲವರು ಒಂದಿಷ್ಟು ಹಣ ತೆಗೆದುಕೊಂಡು ಹೋದಾಗ ದೂರದಿಂದ ನೋಡಿದ ಕಿರಾತಕರು, ಹಣ ಕೊಡಲು ಇಷ್ಟೊಂದು ಜನ ಬರಬಾರದು. ಒಬ್ಬರೇ ಬಂದು ನಮ್ಮ ಹಣ ಕೊಡಬೇಕು. ಇಲ್ಲದಿದ್ದರೆ ಬಸವರಾಜನನ್ನು ಕೊಲೆ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಇದರಿಂದ ಆತಂಕಗೊಂಡ ಶೋಭಾ ಅವರು ಘಟಪ್ರಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಪಹರಣಕಾರರು ಮೊಬೈಲ್‌ದಿಂದ ಕರೆ ಮಾಡಿದ್ದನ್ನು ಪೊಲೀಸರು ಜಾಡು ಹಿಡಿದು ತನಿಖೆ ತೀವ್ರಗೊಳಿಸಿದ್ದಾರೆ.