ಬೆಳಗಾವಿ: ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಕಿಡಿಗೇಡಿಗಳು ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿಂದು ನಡೆದಿದೆ.
ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್ನಲ್ಲಿ ಗಲಾಟೆ ನಡೆದಿದ್ದು, ಈ ಬಸ್ನ ನಿರ್ವಾಹಕ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ (51) ಹಲ್ಲೆಗೊಳಗಾದವರು. ಮಾಧ್ಯಮಗಳ ಮುಂದೆ ಗಾಯಾಳು ನಿರ್ವಾಹಕ ಕಣ್ಣೀರು ಹಾಕಿ ಘಟನೆಯನ್ನು ವಿವರಿಸಿದ್ದಾರೆ.
ಅದೇ ರೀತಿ ಬಸ್ ಚಾಲಕ ಕತಾಲ್ ಸಾಬ್ ಮೊಮಿನ್ ಅವರ ಮೇಲೂ ಕಿಡಿಗೇಡಿಗಳು ಹಲ್ಲೆ ಮಾಡಿದ್ದು, ಅವರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದರು.
ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಬಿಕೆ ಬಾಳೇಕುಂದ್ರಿಗೆ ಸಿಬಿಟಿಯಿಂದ ಯುವಕ-ಯುವತಿ ಬಸ್ ಹತ್ತಿದ್ದರು. ಇಬ್ಬರದ್ದೂ ಫ್ರೀ ಟಿಕೇಟ್ ತೆಗೆದುಕೊಂಡಳು. ನಾನು ಟಿಕೇಟ್ ಕೊಟ್ಟು ಬಿಟ್ಟಿದ್ದೆ. ಬೇರೆ ಪ್ರಯಾಣಿಕರು ಹೇಳಿದಾಗ ಆ ಯುವಕನ ಟಿಕೇಟ್ ದುಡ್ಡು ಕೊಟ್ಟಿರಲಿಲ್ಲ ಎಂಬುದು ಗೊತ್ತಾಯಿತು. ಆಗ ಈ ರೀತಿ ಮಾಡಬಾರದು. ನೀನು ಶಾನ್ಯಾ ಅದಿಯೋ, ಹುಚ್ಚಿ ಅದಿಯೋ ಅಂತಾ ಅಷ್ಟೇ ಹೇಳಿದೆ. ಅದಕ್ಕೆ ಆ ಯುವತಿ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದು ನನಗೆ ಮರಾಠಿಯಲ್ಲೆ ಬೈದಳು. ಮುಂದೆ ಬಾಳೇಕುಂದ್ರಿ ಕೆಎಚ್ ಬರುತ್ತಿದ್ದಂತೆ ಅವರ ಕಡೆಯ 20 ಜನರು ನನಗೆ ಹೊಡೆಯಲು ಬಂದರು. ತಲೆ, ಮೈ, ಕೈಯಿಗೆ ಹೊಡೆದಿದ್ದಾರೆ. ನಾನು ಪೊಲೀಸರಿಗೆ ದೂರು ಕೊಡುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿರಿ ಎಂದು ಒತ್ತಾಯಿಸಿದರು.
ಡಿಸಿಪಿ ರೋಹನ್ ಜಗದೀಶ ಮಾತನಾಡಿ,
ಕನ್ನಡ ಮಾತಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಕಂಡಕ್ಟರ್ ತಿಳಿಸಿದ್ದಾರೆ. ಅವರ ಹೇಳಿಕೆ ಮೇಲೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಹಲ್ಲೆ ಮಾಡಿದ ಯುವಕರನ್ನು ವಶಕ್ಕೆ ಪಡೆದು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಂಡಕ್ಟರ್ ಗೆ ಹೆಚ್ಚು ಗಾಯವಾಗಿದ್ದು, ಚಾಲಕನಿಗೂ ಸ್ವಲ್ಪ ಗಾಯವಾಗಿದೆ. ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ಪೊಲೀಸರು ರಾಜಿ ಸಂಧಾನ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಂಡಕ್ಟರ್ ಹೇಳಿದ್ದು, ಅದನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗಿದೆ. ಅದನ್ನು ಪೊಲೀಸ್ ಆಯುಕ್ತರಿಗೆ ಒಪ್ಪಿಸುತ್ತೇವೆ. ತಪ್ಪು ಏನಾದರೂ ಕಂಡು ಬಂದರೆ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ಬೆಳಗಾವಿಯಲ್ಲಿ ಕೆಲ ಗೂಂಡಾಗಳು ಕನ್ನಡ ಮಾತಾಡಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಪದೇ ಪದೇ ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದರೆ, ಕನ್ನಡ ಮಾತನಾಡಿದರೆ ಹೊಡೆಯುತ್ತಾರೆ. ಹೀಗಾಗಿ, ನಾವು ನಮ್ಮ ರಾಜ್ಯದಲ್ಲಿ ಇದ್ದೇವೋ ಅಥವಾ ಬೇರೆ ರಾಜ್ಯದಲ್ಲಿ ಇದ್ದೇವೋ ಎಂಬ ಅನುಮಾನ ಕಾಡುತ್ತಿದೆ. ಪೋಲಿಸ್ ಇಲಾಖೆ ಇಂಥ ಗೂಂಡಾಗಳ ಮೇಲೆ ಯಾಕೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಬಾರಿ ಇಂಥ ಘಟನೆಗಳು ನಡೆದಾಗ ಸುಮ್ಮನೆ ರಾಜಿ ಸಂಧಾನ ಮಾಡಿ ಕಳಿಸುತ್ತಿದ್ದಾರೆ. ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಾವೇ ಹಲ್ಲೆ ಮಾಡಿದವರನ್ನು ವಿಚಾರಿಸಬೇಕಾಗುತ್ತದೆ. ಅದಕ್ಕೂ ಮೊದಲು ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಬೇಕು. ಅವರನ್ನು ಗಡಿ ಪಾರು ಮಾಡಬೇಕು. ಅಲ್ಲದೇ ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ದೀಪಕ್ ಗುಡಗನಟ್ಟಿ ಒತ್ತಾಯಿಸಿದರು.