ಬೆಂಗಳೂರು,: ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇಂದು ದ್ವಿತೀಯ ಪಿಯುಸಿ ಪರೀಕ್ಷಾ-1 ರ ಫಲಿತಾಂಶ ಪ್ರಕಟಿಸಿದ್ದು, ಪ್ರಸಕ್ತ ವರ್ಷದ ಪರೀಕ್ಷೆ 1 ದ್ವಿತೀಯ ಪಿಯುಸಿ ಫಲಿತಾಂಶ ಶೇ.73.45 ದಾಖಲಾಗಿದೆ. ಕಲಾ ವಿಭಾಗದಲ್ಲಿ ಶೇ. 53.29 ಫಲಿತಾಂಶ, ವಾಣಿಜ್ಯ ಶೇ.76.07 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.82.54 ಫಲಿತಾಂಶ ಬಂದಿದೆ. ರ‍್ಯಾಂಕ ಪಟ್ಟಿಯಲ್ಲಿ ವಿಜಯನಗರ ಜಿಲ್ಲೆ ಕ್ರಮವಾಗಿ ಮೊದಲ ಎರಡು ರ‍್ಯಾಂಕಗಳನ್ನು ಗಳಿಸಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪದವಿಪೂರ್ವ ಮಹಾವಿದ್ಯಾಲಯ ಮತ್ತೆ ಮೊದಲ ಸ್ಥಾನ ಗಳಿಸಿದ್ದು, ವಿದ್ಯಾರ್ಥಿನಿ ಸಂಜನಾಬಾಯಿ ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹೊಸಪೇಟೆ ತಾಲೂಕಿನ ಗುಂಡಾ ಸ್ಟೇಶನ್ ಗ್ರಾಮದ ನಿವಾಸಿಯಾದ ವಿದ್ಯಾರ್ಥಿಯ ತಂದೆ ರಾಮಾ ನಾಯಕ ವೃತ್ತಿಯಲ್ಲಿ ಲಾರಿ ಚಾಲಕ. ಇದೇ ಜಿಲ್ಲೆಯ ಹಡಗಲಿ ತಾಲೂಕಿನ ಇಟಗಿಯ ಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ 600ಕ್ಕೆ 596 ಅಂಕಗಳಿಸಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸತತವಾಗಿ ಅಂಕಗಳಿಕೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ದೀಕ್ಷಾ ಆರ್. 600 ಕ್ಕೆ 599 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ಗೋಗಟೆ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ತನ್ವಿ ಹೇಮಂತ ಪಾಟೀಲ ಅವರು 600 ಅಂಕಗಳಿಗೆ 597 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ. ಇಂಗ್ಲೀಷ 97, ಹಿಂದಿ 100, ಅರ್ಥಶಾಸ್ತ್ರ 100, ಲೆಕ್ಕಶಾಸ್ತ್ರ 100, ವ್ಯವಹಾರ ಅಧ್ಯಯನ 100, ಸಂಖ್ಯಾಶಾಸ್ತ್ರ 100 ಅಂಕ ಗಳಿಸಿದ್ದಾರೆ.
ಕನ್ನಡದಲ್ಲಿ 100ಕ್ಕೆ 100 ಅಂಕ: ಈ ವರ್ಷದ ಪಿಯು ಫಲಿತಾಂಶದಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕಗಳಿಸಿದವರು 5,414 ವಿದ್ಯಾರ್ಥಿಗಳು. ಹಾಗೆಯೇ ಇಂಗ್ಲಿಷ್ ವಿಷಯದಲ್ಲಿ 11 ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು, ಗಣಿತದಲ್ಲಿ 4,038 ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು, ಭೌತಶಾಸ್ತ್ರದಲ್ಲಿ 496 ವಿದ್ಯಾರ್ಥಿಗಳು, ಇತಿಹಾಸದಲ್ಲಿ 958 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 613 ವಿದ್ಯಾರ್ಥಿಗಳು, ಗಣಕ ವಿಜ್ಞಾನದಲ್ಲಿ 1137 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಶೇ. 85 ಕ್ಕಿಂತ ಹೆಚ್ಚು ಅಂಕ: ಪರೀಕ್ಷೆ ಬರೆದ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ 1,00,571 ವಿದ್ಯಾರ್ಥಿಗಳು ಶೇಕಡ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಹಾಗೆಯೇ ಪ್ರಥಮ ದರ್ಜೆಯಲ್ಲಿ 2,78,054 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 70,969 ವಿದ್ಯಾರ್ಥಿಗಳು, ತೃತೀಯ ದರ್ಜೆಯಲ್ಲಿ 18,845 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ hಣಣಠಿs://ಞಚಿಡಿಡಿesuಟಣs.ಟಿiಛಿ.iಟಿ ವೆಬ್‌ಸೈಟಗೆ ಭೇಟಿ ನೀಡಬಹುದು. 2025ರ ದ್ವಿತೀಯ ಪಿಯುಸಿ ಪರೀಕ್ಷೆ 2 ಅನ್ನು 24-04-2025 ರಿಂದ 08-05-2025 ರವರೆಗೆ ನಡೆಸಲಿದ್ದು, ಅನುತ್ತೀರ್ಣರಾದವರು, ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. 2025ರ ದ್ವಿತೀಯ ಪಿಯುಸಿ ಪರೀಕ್ಷೆ 2/ ಪರೀಕ್ಷೆ 3 ಎಲ್ಲಾ ವರ್ಗದ ಬಾಲಕಿಯರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವರ್ಗ-1 ರ ಬಾಲಕರಿಗೆ ಪುನರಾವರ್ತಿತ / ಅಪೂರ್ಣ ಅಭ್ಯರ್ಥಿಗಳಿಗಾಗಿ ನೋಂದಾಯಿಸಿಕೊಳ್ಳಲು ಪರೀಕ್ಷಾ ಶುಲ್ಕ ಇರುವುದಿಲ್ಲ.
ನಿರೀಕ್ಷೆಯಂತೆ ಉಡುಪಿ ಮೊದಲ ಸ್ಥಾನ(ಶೇ.93.90 )ಗಳಿಸಿದ್ದು, 65.37 ಫಲಿತಾಂಶ ಪಡೆಯುವ ಮೂಲಕ ಬೆಳಗಾವಿ ಜಿಲ್ಲೆ 26ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಯಾದಗಿರಿ (ಶೇ.48.45) ಕೊನೆಯ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ(93.57) ದ್ವಿತೀಯ ಸ್ಥಾನ ಗಳಿಸಿದೆ.