ಬೆಳಗಾವಿ : ಪಂಢರಪುರಕ್ಕೆ ಹೋಗಿದ್ದ ಬೆಳಗಾವಿಯ ವಿಠಲ ಭಕ್ತರಿಗೆ ಮಹಾರಾಷ್ಟ್ರದಲ್ಲಿ ಥಳಿಸಲಾಗಿದೆ. ಆಷಾಡ ಏಕಾದಶಿ ಪ್ರಯುಕ್ತ ಬೆಳಗಾವಿಯ ವಿಠಲ ದೇವರ ಭಕ್ತರು ದೇವರ ದರ್ಶನಕ್ಕೆ ಪಂಢರಾಪುರಕ್ಕೆ ತೆರಳಿದ್ದರು. ಆದರೆ, ಅಮಾನುಷವಾಗಿ ಹಲ್ಲೆಗೈದ ಪರಿಣಾಮ ಮೂವರು ಗಾಯಗೊಂಡ ಘಟನೆ ನಡೆದಿದೆ.
ತುರಮುರಿ ಗ್ರಾಮದ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ಸುರೇಶ ರಾಜುಕರ (ವಯಸ್ಸು 52), ಪರಶುರಾಮ ಜಾಧವ (45) ಮತ್ತು ಟ್ರಕ್ ಚಾಲಕ ಶ್ರೀಕಾಂತ ಮನ್ವಾಡಕರ್ (50) ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಪರಶುರಾಮ್ ಜಾಧವ್ ಪ್ರಜ್ಞಾಹೀನನಾಗಿದ್ದು, ಮೀರಜ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರಮುರಿ ಗ್ರಾಮದ ಸುಮಾರು 35 ವಾರಕರಿ (ವಿಠ್ಠಲ ಭಕ್ತರು)ಆಷಾಢ ವಾರಿಗೆ ಪಂಢರಪುರಕ್ಕೆ ತೆರಳಿದ್ದರು. ವಾರಿ ದಾಟಿ ನಾಗಪುರ-ರತ್ನಗಿರಿ ರಾಷ್ಟ್ರೀಯ ಹೆದ್ದಾರಿ ಮೂಲಕ ಮೀರಜ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸುತ್ತಿದ್ದರು. ಆದರೆ, ಮೀರಜ್‌ಗೆ ಬರುತ್ತಿದ್ದಾಗ, ತಪ್ಪಿಸಿಕೊಂಡಿದ್ದರಿಂದ, ಮೀರಜ್ ತಾಲೂಕಿನ ಮಳಗಾಂವ್ ಗ್ರಾಮದ ಮೂಲಕ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಗ್ರಾಮದ ಬಳಿ ರಸ್ತೆ ಮೇಲೆ ಕಾರು ನಿಂತಿದ್ದ ಕಾರು ತೆಗೆಯುವಂತೆ ಮನವಿ ಮಾಡಿದಾಗ ಕಾರಿನವರು ಜಗಳಕ್ಕೀಳಿದಿದ್ದಾರೆ. ಕೊನೆಗೆ ಲಾರಿ ಚಾಲಕ ಪ್ರಯಾಸ ಪಟ್ಟು ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಆದರೆ ಕಾರಿನಲ್ಲಿದ್ದವರು ಲಾರಿಯನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.