ಮೂಡಲಗಿ: ಇತ್ತಿಚೆಗೆ ಲಿಂಗೈಕ್ಯರಾದ ಮೂಡಲಗಿ ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಪುಣ್ಯಾರಣ್ಯ ಮಠದ 11ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮಿಗಳ ಕೃಪಾಬೆಳಗಿನಲ್ಲಿ ಹಾಗೂ ಹರಗುರು ಚರಮೂರ್ತಿಗಳ, ಭಕ್ತರ ಆಶಯದಂತೆ 12ನೇ ಪೀಠಾಧಿಪತಿಯಾಗಿ ಶ್ರೀ.ಮ.ನಿ.ಪ್ರ. ಸ್ವರೂಪಿ ಶ್ರೀ ಗುರುಬಸವಲಿಂಗ ಸ್ವಾಮಿಗಳ ಪೀಠಾರೋಹಣ ಸಮಾರಂಭವು ಇಂದು ಅರಭಾವಿ ಮಠದಲ್ಲಿ ಜರುಗಿತು.
ಪೀಠಾರೋಹಣ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ, ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ದುರದುಂಡೀಶ್ವರರ ಕೃಪಾಶೀರ್ವಾದ ಫಲವಾಗಿ ಅರಭಾವಿ ದುರದುಂಡೀಶ್ವರ ಪುಣ್ಯಾರಣ್ಯ ಮಠವು ಧಾರ್ಮಿಕ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆದು ಭಕ್ತರ ಹೃದಯಲ್ಲಿ ನೆಲೆಸಿದೆ. ಹಿಂದಿನ ಪೀಠಾಧಿಪತಿ ಲಿಂ. ಸಿದ್ಧಲಿಂಗ ಸ್ವಾಮಿಗಳ ಆಶಯ, ಪರಂಪರೆಯನ್ನು ಶ್ರೀಮಠದ ಅಭಿವೃದ್ಧಿಗಾಗಿ ಮಠದ ನೂತನ ಪೀಠಾಧಿಪತಿಯಾಗಿರುವ ಗುರುಬಸವಲಿಂಗ ಸ್ವಾಮಿಗಳು ಮುನ್ನಡೆಸುತ್ತಾರೆ ಎನ್ನುವ ಭರವಸೆ ನಮಗೆ ಇದೆ’ ಎಂದು ನುಡಿದರು.
ದುರದುಂಡೀಶ್ವರ ಮಠ ಮತ್ತು ನಿಡಸೋಸಿ ಮಠಗಳ ಅವಿನಾಭಾವ ಸಂಬಂಧವಿದ್ದು ಮತ್ತು ತಮ್ಮದೆಯಾದ ಭವ್ಯವಾದ ಇತಿಹಾಸಗಳನ್ನು ಹೊಂದಿವೆ. ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದ ಪ್ರಗತಿಗಾಗಿ ಕಳೆದ ನಾಲ್ಕೈದು ದಶಕದಿಂದ ಅವಿರತವಾಗಿ ಶ್ರಮಿಸಿದ್ದರು. ಸರಳ, ಶಿಸ್ತಿನ ವ್ಯಕ್ತಿಯಾಗಿದ್ದ ಅವರು ಬಿಟ್ಟು ಹೋದ ಆಚಾರ, ವಿಚಾರ ಹಾಗೂ ಸಂಸ್ಕೃಗಳನ್ನು ಈಗಿರುವ ಹೊಸ ಪೀಠಾಧಿಪತಿಗಳು ಅಳವಡಿಸಿಕೊಂಡು ಶ್ರೀಮಠವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು. ಲಿಂ.ಸಿದ್ಧಲಿಂಗ ಮಹಾಸ್ವಾಮಿಗಳಿಗೆ ನೀಡಿರುವ ತನು, ಮನ, ಧನ ಸೇವೆಯನ್ನು ನೂತನ ಪೀಠಾಧಿಪತಿ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಸಕಲ ಸದ್ಭಕ್ತರು ನೀಡಲಿ ಎಂದು ಹೇಳಿದರು.
ಲಿಂ. ಸಿದ್ಧಲಿಂಗ ಸ್ವಾಮಿಗಳ ಸಂಕಲ್ಪದಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ತಾಯಿ–ತಂದೆಯವರ ಸ್ಮರಣೆಗಾಗಿ ಶ್ರೀಮಠದಲ್ಲಿ ಸುಸಜ್ಜಿತವಾದ ಸಭಾಭವವನ್ನು ನಿರ್ಮಿಸಿದ್ದಾರೆ. ಇದು ಅವರ ದೈವಭಕ್ತಿಗೆ ಸಾಕ್ಷಿಯಾಗಿದೆ. ಜಾರಕಿಹೊಳಿ ಕುಟುಂಬದವರು ಹಲವು ದಶಕಗಳಿಂದ ಶ್ರೀಮಠದ ಏಳ್ಗೆಗಾಗಿ ಸ್ಪಂದಿಸುತ್ತಿರುವುದನ್ನು ಸ್ಮರಿಸಿಕೊಂಡರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ’ಲಿಂ. ಸಿದ್ಧಲಿಂಗ ಸ್ವಾಮಿಗಳು ನಮ್ಮ ಮಧ್ಯವಿಲ್ಲದಿದ್ದರೂ ಇಂದಿನ ಪೀಠಾರೋಹಣದ ಸಮಾರಂಭದಲ್ಲಿ ಸೇರಿದ ಭಕ್ತರ ಸಂಗಮದಲ್ಲಿ ಪ್ರತಿಯೊಬ್ಬರ ಹೃದಯಲ್ಲಿ ನೆಲೆಸಿದ್ದಾರೆ. ಶ್ರೀಮಠದ ಅಭಿವೃದ್ಧಿಗಾಗಿ ತಾವು ಸದಾ ಬದ್ಧರಿದ್ದೇವೆ. ನೂತನ ಶ್ರೀಗಳ ಎಲ್ಲ ಆಶಗಳಿಗೆ ನಮ್ಮ ಭಕ್ತಿ ಸೇವೆಯ ಸ್ಪಂದನೆ ಸದಾ ಇರುತ್ತದೆ’ ಎಂದರು.
ಶ್ರೀಮಠದ 12ನೇ ಪೀಠಾಧಿಪತಿಯಾಗಿ ಪೀಠಾರೋಹಣ ಮಾಡಿದ ಗುರುಬಸವಲಿಂಗ ಸ್ವಾಮಿಗಳು ಲಿಂ. ಸಿದ್ಧಲಿಂಗ ಸ್ವಾಮಿಗಳನ್ನು ನೆನೆದು ಭಾವುಕರಾಗಿ ಮಾತನಾಡಿ, ‘ದುರುದುಂಡೀಶ್ವರ ಮಠದ ಪೀಠಾರೋಹಣ ಮಾಡುತ್ತೇನೆ ಎನ್ನುವುದು ಕನಸು ಮನಸ್ಸಿನಲ್ಲಿಯೂ ಇರಲಿಲ್ಲ. ಲಿಂ. ಸಿದ್ಧಲಿಂಗ ಸ್ವಾಮಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸದ ಫಲವಾಗಿ ಅಂಥ ಸೌಭಾಗ್ಯವು ನನ್ನದಾಗಿದೆ. ಪೂಜ್ಯರ ಆಶಯ ಮತ್ತು ಹರಗುರು ಚರಮೂರ್ತಿಗಳು ಇಟ್ಟಂತ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಶ್ರೀಮಠದ ಪರಂಪರೆಯನ್ನು ಮುಂದುವರಿಸುವೆ’ ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಹಂದಿಗುಂದ–ಆಡಿ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮಿಗಳು, ಅಥಣಿಯ ಮೋಠಗಿಮಠದ ಪ್ರಭು ಚನ್ನಬಸವ ಸ್ವಾಮಿಗಳು, ಶೇಗುಣಸಿಯ ಡಾ. ಮಹಾಂತ ಸ್ವಾಮಿಗಳು ಮಾತನಾಡಿದರು.
ನೇತೃತ್ವವನ್ನು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು, ಹುಬ್ಬಳ್ಳಿಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಯಮಕನಮರಡಿಯ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು, ರಾಮದುರ್ಗದ ಶ್ರೀ ಶಾಂತವೀರ ಮಹಾಸ್ವಾಮಿಗಳು, ನಿಚ್ಚಣಿಕೆ ಪಂಚಾಕ್ಷರಿ ಮಹಾಸ್ವಾಮಿಗಳು, ಬಬಲಾದಿ ಮಠದ ಕರಿಗಿರೇಶ್ವರ ಸಂಗಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಚನ್ನಮ್ಮ ಕಿತ್ತೂರಿನ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ಶೇಗುಣಸಿಯ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಸೇರಿದಂತೆ ಅನೇಕ ಪೂಜ್ಯರು ಉಪಸ್ಥಿತರಿದ್ದರು.
ಬೈಲಹೊಂಗಲದ ಶಾಸಕ ಮಹಾಂತೇಶ ಕೌಜಲಗಿ, ಪೃಥ್ವಿ ಕತ್ತಿ, ನಿವೃತ್ತ ಪ್ರಾದೇಶಿಕ ಅಯಕ್ತ ಡಾ. ಮಹಾಂತೇಶ ಹಿರೇಮಠ, ಅಶೋಕ ಪೂಜಾರಿ ಮಾತನಾಡಿದರು.