ಬೆಳಗಾವಿ,: ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿರುವ ರಾಣಿ ಚೆನ್ನಭೈರಾದೇವಿ ದೇವಿ ಮಹಿಳಾ ಬಜಾರ ಅಥವಾ ತಿನಿಸು ಕಟ್ಟೆಯ ಅಂಗಡಿಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಲೋಕೋಪಯೋಗಿ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು. ಖಾವು ಕಟ್ಟಾದಲ್ಲಿರುವ 56 ಅಂಗಡಿಗಳಿಗೆ ಭೇಟಿ ನೀಡಿ ಟ್ರೇಡ್ ಲೈಸನ್ಸ್, ಗುತ್ತಿಗೆ ಒಪ್ಪಂದ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿತು.
ಈ ಅಂಗಡಿಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವುದನ್ನು ಘಟನಾ ಸ್ಥಳದಲ್ಲಿದ್ದ, ರಾಜೀವ್ ಟೋಪ್ಪಣ್ಣವರ್ ಅವರು, ಒಬ್ಬರಿಗೆ ಅಂಗಡಿ ಮಂಜೂರು ಮಾಡಲಾಗಿದ್ದು, ಇನ್ನೊಬ್ಬರ ಹೆಸರಿನಲ್ಲಿ ಟ್ರೇಡ್ ಲೈಸೆನ್ಸ್ ನೋಂದಣಿಯಾಗಿದೆ. ಆದರೆ ಮೂರನೇ ವ್ಯಕ್ತಿ ಅಂಗಡಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ತಂಡವು ಪರಿಶೀಲನೆಗೆ ಆಗಮಿಸಿದ್ದನ್ನು ತಿಳಿದ ಶಾಸಕ ಅಭಯ ಪಾಟೀಲ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಉದ್ವಿಗ್ನತೆ ಉಂಟಾಯಿತು. ಪೊಲೀಸರ ಮಧ್ಯಪ್ರವೇಶಿಸಿ ಗೊಂದಲವನ್ನು ತಿಳಿಗೊಳಿಸಿದರು.
ನಾಲಾ ಪಕ್ಕದಲ್ಲಿದ್ದು ನೀರು ಸರಾಗವಾಗಿ ಸಾಗಲು ಸ್ಥಳಾವಕಾಶ ಬಿಡದೇ ಅದರ ಮೇಲೆಯೇ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವದು ಕಂಡು ಬಂದಿದೆ. ಲೋಕೋಪಯೋಗಿ ಇಲಾಖೆಯು ನಿರ್ಮಿಸಿರುವ ಈ ಕಟ್ಟಡವು ಕಾನೂನಿನ ಪ್ರಕಾರ ವಿಧವೆಯರು, ಬಡವರು ಮತ್ತು ತೆರಿಗೆ ಪಾವತಿಸದವರಿಗೆ ಪ್ರತ್ಯೇಕವಾಗಿ ಅಂಗಡಿಗಳನ್ನು ನೀಡಬೇಕಾಗಿತ್ತು. ಆದರೆ ಇದನ್ನೆಲ್ಲ ಗಾಳಿಗೆ ತೂರಿ ಅಂಗಡಿಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪರಿಣಾಮವಾಗಿ, ಈ ಕುರಿತು ತನಿಖೆಗಾಗಿ ಸರ್ಕಾರವು ಲೋಕೋಪಯೋಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಅದಕ್ಕನುಗುಣವಾಗಿ ಅಧಿಕಾರಿಗಳು ಕಟ್ಟಡದ ಪ್ರತಿ ಅಂಗಡಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.
ಕುತೂಹಲಕಾರಿ ಸಂಗತಿಯೆಂದರೆ, ತಿನಿಸು ಕಟ್ಟೆಯ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ಗುತ್ತಿಗೆದಾರನ ಪತ್ನಿ ಹೆಸರಿನಲ್ಲಿ ಅಂಗಡಿಗಳಿರುವದು ಗಮನಕ್ಕೆ ಬಂದಿದೆ. ಈ ಕಟ್ಟಡವನ್ನು ಸರಕಾರವೇ ನಿರ್ಮಿಸಿರುವುದರಿಂದ ಸರಕಾರದ ಹೆಸರನ್ನೇ ಇಡಬೇಕು. ಸ್ಥಳೀಯ ಶಾಸಕ ಅಭಯ ಪಾಟೀಲ ಎಂಬುವವರ ನಾಮಫಲಕ ಇರುವುದಕ್ಕೆ ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
