ಬೆಳಗಾವಿ, :ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಕಟ್ಟಲು ಏಳು ದಿನಗಳ ಕಾಲಾವಕಾಶ ನೀಡಬೇಕು. ಇದಾದ ಬಳಿಕ ನ್ಯಾಯಾಲಯದಿಂದ ಸಮನ್ಸ್ ಹೋಗಬೇಕು; ದಂಡ ಕಟ್ಟದಿದ್ದರೆ ಅಥವಾ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ವಾಹನ ಸೀಜ್ ಮಾಡಬೇಕು ಎಂದು ಗೃಹ ಸಚಿವ ಪರಮೇಶ್ವರ್ ಅವರಿಂದಿಲ್ಲಿ ಸೂಚಿಸಿದರು.
ನಗರ ಪೊಲೀಸ ಕಮಿಶನರ ಕಚೇರಿಗೆ ಭೇಟಿ ನೀಡಿದ ಅವರು, ಸಂಚಾರ ನಿಯಮ ಉಲ್ಲಂಘನೆ ದಂಡ ವಿಧಿಸುವ ವಿಧಾನ, ಚಲನ್ ಜನರೇಟ್ ಮಾಡುವ ವಿಧಾನವನ್ನು ಪರಿಶೀಲಿಸಿದರು.
ಸಿಸಿಟಿವಿ ದೃಶ್ಯಾವಳಿ ವೀಕ್ಷಣೆ: ಬೆಳಗಾವಿ ನಗರದ ವಿವಿಧ ವೃತ್ತಗಳು ಹಾಗೂ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಗೃಹಸಚಿವ ಜಿ.ಪರಮೇಶ್ಚರ ವೀಕ್ಷಿಸಿದರು.
ಸಿಸಿಟಿವಿ ಮೇಲೆ ನಿಗಾವಹಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತಿಯೊಂದು ಕ್ಯಾಮೆರಾ ಅಳವಡಿಸಿರುವ ವೃತ್ತ ಮತ್ತು ರಸ್ತೆ ಕುರಿತು ಸಂಪೂರ್ಣ ಮಾಹಿತಿ ಇರಬೇಕು.
ಇದಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಮೇಲೆ ಕೂಡ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಪೊಲಿಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಅವರು, ವಿವಿಧ ಘಟಕಗಳ ಕಾರ್ಯನಿರ್ವಹಣೆ ಕುರಿತು ವಿವರಿಸಿದರು.
ಸಾಮಾಜಿಕ ಜಾಲತಾಣ ನಿಗಾ ಘಟಕವು ಕ್ರಿಯಾಶೀಲವಾಗಿದ್ದು, ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ. ಇತ್ತೀಚೆಗೆ ಪ್ರಕರಣಗಳನ್ನು ಕೂಡ ದಾಖಲಿಸಲಾಗಿದೆ ಎಂದರು.
ಇದಲ್ಲದೇ ಅಧಿವೇಶನ ಸಂದರ್ಭದಲ್ಲೂ ಯಾವುದೇ ರೀತಿಯ ಅಹಿತಕರ ಘಟನೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರಾದ ಸಿದ್ದರಾಮಪ್ಪ ತಿಳಿಸಿದರು.
ನಗರದಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ಪೋಸ್ಟ್ ಗಳು, ಕೋಮುಭಾವನೆ ಕೆರಳಿಸುವ ಪೋಸ್ಟ್, ಪ್ರಚೋದಾತ್ಮಕ ಹೇಳಿಕೆ, ಘಟನೆಗಳು ಕಂಡುಬಂದರೆ ಕೂಡಲೇ ಐಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಡಿಸಿಪಿ ರೋಹನ್ ಜಗದೀಶ್ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧೀಕ್ಷಕ ಡಾ.ರವೀಂದ್ರ ಗಡಾದಿ, ಬೆಳಗಾವಿ ನಗರ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಸ್ನೇಹಾ ಸೇರಿದಂತೆ ಪೊಲೀಸ್ ಆಯುಕ್ತಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.