ಬೆಳಗಾವಿ: ಖಾನಾಪುರ ತಾಲೂಕಿನ ಆಮಗಾಂವ ಗ್ರಾಮದ ಮಹಿಳೆಯೊಬ್ಬರು ತೀವ್ರ ಅನಾರೋಗ್ಯ ಪೀಡಿತರಾದರು. ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೇ ಅವರನ್ನು ಜೋಲಿ ಮಾಡಿ ಹೊತ್ತು ತಂದು ಆಸ್ಪತ್ರೆಗೆ ಸೇರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಖಾನಾಪುರ ತಾಲೂಕಿನಲ್ಲಿ ಇದೀಗ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಶುಕ್ರವಾರ ಖಾನಾಪುರ ತಾಲೂಕಿನ ಆಮಗಾಂವ ಗ್ರಾಮದ ಹರ್ಷದಾ ಹರಿಶ್ಚಂದ್ರ ಘಾಡಿ (38) ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಜೊತೆಗೆ ತಲೆ ಸುತ್ತು ಆರಂಭವಾಗಿದೆ. ಗ್ರಾಮಸ್ಥರು ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ರಸ್ತೆ ಸಂಪರ್ಕ ಇರಲಿಲ್ಲ. ವಾಹನ ವ್ಯವಸ್ಥೆ ಸಹಾ ಇಲ್ಲದ ಕಾರಣ ಗ್ರಾಮದ ಜನತೆಗೆ ದಿಕ್ಕು ತೋಚದಂತಾಯಿತು.
ಕೊನೆಗೆ ಗ್ರಾಮದ ಕನ್ನಡ ಶಾಲೆಯ ಶಿಕ್ಷಕ ಬಾಳೆಕುಂದ್ರಿ ಅವರು 108 ಅಂಬುಲೆನ್ಸ್ ಗೆ ಕರೆ ಮಾಡಿ ನದಿಯ ತೀರಕ್ಕೆ ಬರುವಂತೆ ಮನವಿ ಮಾಡಿದರು. ಬಳಿಕ ಗ್ರಾಮದ ಸುಮಾರು 20 ರಿಂದ 25 ಜನ ಸೇರಿ ಹರ್ಷದಾ ಹರಿಶ್ಚಂದ್ರ ಘಾಡಿ ಅವರನ್ನು ಜೋಲಿ ಮಾಡಿ ನದಿ ದಡದವರೆಗೆ ಸರದಿಯಂತೆ ಹೊತ್ತು ಕರೆ ತಂದರು. ಅಂಬುಲೆನ್ಸ್ ನದಿಯ ಇನ್ನೊಂದು ಬದಿಯಲ್ಲಿ ಬಂದು ನಿಂತಿತು. ಬಳಿಕ ಅವರನ್ನು ಆಂಬುಲೆನ್ಸ್ ನಲ್ಲಿ ಖಾನಾಪುರ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ತೀವ್ರ ಎದೆನೋವಿನಿಂದ ಬಳಲುತ್ತಿರುವ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಖಾನಾಪುರ ತಾಲೂಕು ದಟ್ಟ ಅರಣ್ಯಗಳಿಂದ ಕೂಡಿರುವ ತಾಲೂಕು. ಆರೋಗ್ಯ ಸೌಲಭ್ಯಗಳು ವಂಚಿತಗೊಂಡಿರುವ ಈ ತಾಲೂಕಿನತ್ತ ಜಿಲ್ಲಾ ಆಡಳಿತ ಹಾಗೂ ಸರಕಾರ ಹೆಚ್ಚಿನ ಗಮನಹರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ತೀವ್ರ ಎದೆನೋವು : ಜೋಳಿಗೆಯಲ್ಲಿ ಹೊತ್ತು 5 ಕಿ.ಮೀ. ನಡೆದ ಗ್ರಾಮಸ್ಥರು
