ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ಬಿರಾದಾರ ಪಾಟೀಲ, ಕಲಬುರಗಿಯ ನಗರ ಹಾಗೂ ಗ್ರಾಮೀಣ ಯೋಜನಾ ಜಂಟಿ ನಿರ್ದೇಶಕ ಅಪ್ಪಾಸಾಬ್ ಕಾಂಬಳೆ ಅವರ ಮನೆಗಳ ಮೇಲೆ ಸೋಮವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 1.35 ಕೋ.ರೂ.ಗಳ ಮೌಲ್ಯದ ಆಸ್ತಿ ಹಾಗೂ 250 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ವರಿಷ್ಠಾಧಿಕಾರಿ ಹನುಮಂತರಾಯ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಜೆ.ರಘು ಅವರ ತಂಡವು ಬಿರಾದಾರ ಅವರು ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟ್ಮೆಂಟ್ನಲ್ಲಿ ಮನೆ, ಕಿತ್ತೂರು ಮತ್ತು ಖಾನಾಪುರದಲ್ಲಿರುವ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಮನೆಯಲ್ಲಿ ₹1.35 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಆದಾಯಕ್ಕಿಂತ ಹೆಚ್ಚಾದ ಎಲ್ಲವನ್ನೂ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬೆಳಗಾವಿ ಮೂಲದವರಾದ ಸದ್ಯ ಕಲಬುರಗಿಯ ನಗರ ಹಾಗೂ ಗ್ರಾಮೀಣ ಯೋಜನಾ ಜಂಟಿ ನಿರ್ದೇಶಕರಾಗಿರುವ ಅಪ್ಪಾಸಾಬ್ ಕಾಂಬಳೆ ಅವರ ರಾಮತೀರ್ಥ ನಗರದಲ್ಲಿರುವ ಅವರ ಹಳೆಯ ಮನೆ, ಆಟೊ ನಗರದ ಕಾರ್ಖಾನೆ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ 250 ಗ್ರಾಂ ಚಿನ್ನಾಭರಣ, ಅಪಾರ ಹಣ ಹಾಗೂ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಎಂ.ಎಸ್.ಬಿರಾದಾರ ಪಾಟೀಲ 2023ರ ಫೆಬ್ರುವರಿ 16ರಂದು ಕೂಡ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿದ್ದರು. ₹2 ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿ ಮುಗಿಸಿದ ಗುತ್ತಿಗೆದಾರರ ಬಿಲ್ಗೆ ಸಹಿ ಮಾಡಲು ₹5 ಸಾವಿರ ಲಂಚ ಕೇಳಿದ್ದರು. ಇಲ್ಲಿನ ಶಹಾಪುರದಲ್ಲಿರುವ ಅವರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆಯೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.