ಬೆಳಗಾವಿ : ಮಗಳಿಗೆ ಸಂಕ್ರಾಂತಿ ಹಬ್ಬದ ಅಡುಗೆ ಕೊಡಲು ಬೀಗರ ಮನೆಗೆ ಬಂದಿದ್ದ ಮಹಿಳಯೋರ್ವಳನ್ನು ಅಳಿಯ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಶಹಾಪುರದ ರೈತಗಲ್ಲಿಯಲ್ಲಿಂದು ನಡೆದಿದೆ.
ಕಲ್ಯಾಣ ನಗರದ ನಿವಾಸಿ ರೇಣುಕಾ ಪದ್ಮುಕಿ (43) ಕೊಲೆಯಾದ ದುರ್ದೈವಿಯಾಗಿದ್ದಾರೆ.
ಅಳಿಯನಾದ (ಮಗಳ ಗಂಡ) ಶುಭಮ್ ದತ್ತ ಬಿರ್ಜೆ (24) ಕೊಲೆಮಾಡಿದ ಆರೋಪಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆತನ ತಾಯಿ ಸುಜಾತಾ ಬಿರ್ಜೆ ಮತ್ತು ತಂದೆ ದತ್ತ ಬಿರ್ಜೆ ಅವರನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖಾ ಮಾಹಿತಿಯ ಪ್ರಕಾರ, ಶುಭಮನಿಗೆ ಕನ್ಯಾದಾನ ಮಾಡಿ 7 ತಿಂಗಳ ಹಿಂದೆ ಮದುವೆ ಮಾಡಲಾಗಿತ್ತು. ಆರೋಪಿಯ ಪತ್ನಿ 3 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಆರೈಕೆ ಮತ್ತು ಚಿಕಿತ್ಸೆಗಾಗಿ ಅವಕಾಶ ಕಲ್ಪಿಸಬೇಕೆಂದು ಅತ್ತೆ ಕೋರಿದ್ದರು. ಇದೇ ವಿಷಯಕ್ಕೆ ಆತನ ಕುಟುಂಬ ಮತ್ತು ಹುಡುಗಿಯ ಕುಟುಂಬಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸಂಕ್ರಾಂತಿ ಹಬ್ಬಕ್ಕೆ ಭೋಜನ ಕೊಡಲು ಬಂದ ಅತ್ತೆಗೆ ಶುಭಂ ನಮ್ಮ ಮನೆಗೆ ಏಕೆ ಬರ್ತೀಯಾ ಎಂದು ಜಗಳ ಮಾಡುತ್ತಲೇ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಶಹಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.