ಬೆಳಗಾವಿ, ಅ, 15: ಬೆಳಗಾವಿ ತಾಲ್ಲೂಕನ್ನು ವಿಭಜಿಸಿ ಇನ್ನೊಂದು ಹೊಸ ತಾಲ್ಲೂಕು ರಚನೆ ಮಾಡಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿಯೇ ಸರಕಾರದಿಂದ ಅಧಿಕೃತ ಘೋಷಣೆಯಾಗಲಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದರು.   77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಮಂಗಳವಾರ (ಆ.15) ಜಿಲ್ಲಾ ಕ್ರೀಡಂಗಣದಲ್ಲಿ ರಾಷ್ಟ್ರ ಧ್ವಜಾರೋಹನ ನೆರವೇರಿಸಿ ಮಾತನಾಡಿದ ಅವರು, ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಹತ್ತಾರು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾಲಮಿತಿಯೊಳಗೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಬೆಳಗಾವಿ ನಗರಕ್ಕೆ ಹೊಸ ಯೋಜನೆಗಳು: ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವುದರ ಜತೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ 350 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-48 (ಗಾಂಧಿ ನಗರ) ರಿಂದ ಆರ್.ಎಲ್.ಎಸ್. ಕಾಲೇಜ್‌ವರೆಗೆ ಮೇಲ್ಸೇತುವೆ ನಿರ್ಮಿಸಲಾಗುವುದು. ಈ ಮೇಲ್ಸೇತುವೆ ಮೂಲಕ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲು ಅವಕಾಶವಿರುತ್ತದೆ ಎಂದು ವಿವರಿಸಿದರು.   ಪ್ರಸ್ತುತ ಬೆಳಗಾವಿ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಇತರೆ ಕಛೇರಿಗಳ ಸ್ಥಳದಲ್ಲಿ ಒಟ್ಟು 52,800 ಚ. ಮೀ. (5,68,334 ಚ.ಅಡಿ) ವಿಸ್ತೀರ್ಣ ಹೊಂದಿದ 2 ತಳಮಹಡಿ ಸೇರಿ ಒಟ್ಟು 6 ಮಹಡಿಗಳ ಹೊಸದಾಗಿ ಜಿಲ್ಲಾ ಕಛೇರಿಗಳ ಸಂಕೀರ್ಣವನ್ನು 300 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ನೂತನ ಕಟ್ಟಡ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ಒಟ್ಟು 31 ಕಛೇರಿಗಳಿಗೆ ಸ್ಥಳಾವಕಾಶವನ್ನು ಕಲ್ಪಿಸಲಾಗುತ್ತದೆ ಎಂದ ಅವರು, ಪಾರ್ಕಿಂಗ್ ಸಮಸ್ಯೆಗೂ ಪರಿಹಾರ ದೊರಕಲಿದೆ. ನಗರಕ್ಕೆ ಹೊಂದಿಕೊಂಡಿರುವ ನೂತನ ರಿಂಗ್ ರಸ್ತೆಯ ಅಕ್ಕಪಕ್ಕದ ಜಮೀನನ್ನು ಕೈಗಾರಿಕೆ ಸ್ಥಾಪನೆಗೆ ಮೀಸಲಿಡಲಾಗುವುದು ಎಂದು ತಿಳಿಸಿದರು.   ಬೆಳಗಾವಿ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಉದ್ದೇಶಿಸಿದ್ದು, ವಿಶ್ವ ಬ್ಯಾಂಕಿನ ಧನ ಸಹಾಯದ ನೆರವಿನೊಂದಿಗೆ ಬೆಳಗಾವಿ ನಗರದಲ್ಲಿ 24×7 ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಮೃತ ಯೋಜನೆ ಅಡಿಯಲ್ಲಿ ಬೆಳಗಾವಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆ ರೂ. 157.56 ಕೋ.ರೂ.ಗಳಿಗೆ ತಾಂತ್ರಿಕ ಅನುಮೋದನೆ ದೊರೆತಿರುತ್ತದೆ ಎಂದರು.   ಬೆಳಗಾವಿ ಮಹಾನಗರ ಪಾಲಿಕೆಯ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ರೂ 125 ಕೋಟಿಗಳ ಅನುದಾನದಡಿಯಲ್ಲಿ ಒಟ್ಟು 90 ಕಾಮಗಾರಿಗಳು ಮಂಜೂರಾಗಿದ್ದು, ಇದರಲ್ಲಿ ಈಗಾಗಲೇ 38 ಕಾಮಗಾರಿಗಳು ಪೂರ್ಣಗೊಂಡಿದ್ದು, 52 ಕಾಮಗಾರಿಗಳು ಪ್ರಗತಿಯಲ್ಲಿವೆ.   ಬೆಳಗಾವಿ ‘ಸ್ಮಾರ್ಟ್ ಸಿಟಿ’ ಯೋಜನೆ’ಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 50:50 ಅನುಪಾತದಲ್ಲಿ ಒಟ್ಟು ರೂ.1000 ಕೋಟಿ ಅನುದಾನ ಒದಗಿಸುತ್ತಿವೆ. ಈ ವರೆಗೆ ಒಟ್ಟು ರೂ.854 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ರೂ. 804.91 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು 102 ಕಾಮಗಾರಿಗಳಲ್ಲಿ 96 ಕಾಮಗಾರಿಗಳು ಪೂರ್ಣಗೊಂಡಿದ್ದು, 06 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.    ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಜೂನ್-2024 ರ ಅಂತ್ಯದೊಳಗಾಗಿ ಮುಕ್ತಾಯಗೊಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯೂ ನಮ್ಮ ಸರಕಾರ ಇದ್ದಾಗ ಬೆಳಗಾವಿ ನಗರದಲ್ಲಿ ವೈದ್ಯಕೀಯ ಕಾಲೇಜು, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಲಾಗಿರುತ್ತದೆ. ಇದಲ್ಲದೇ ಖಾನಾಪುರ ರಸ್ತೆಯ ಅಗಲೀಕರಣ, ಬಾಕ್ಸೆöಟ್ ರಸ್ತೆ ಅಗಲೀಕರಣ ಹಾಗೂ ರಾಣಿ ಚೆನ್ನಮ್ಮ ಮೃಗಾಲಯ ಅಭಿವೃದ್ಧಿ ಮತ್ತಿತರ ಪ್ರಮುಖ ಕೆಲಸಗಳನ್ನು ಮಾಡಲಾಗಿರುತ್ತದೆ.