ಬೆಳಗಾವಿ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಅದು ನಮ್ಮ ಹಕ್ಕು, ನಾವು ಯಾರ ಮೀಸಲಾತಿಯನ್ನು ಕಸಿದುಕೊಳ್ಳುತ್ತಿಲ್ಲ ನಮಗೆ ಮೀಸಲಾತಿ ನೀಡಿ ಎಂದು ಆಗ್ರಹಿಸಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬುಧವಾರ ಕೂಡಲಸಂಗಮ ಪಂಚಮಸಾಲಿ ‍ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಯಿತು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಾನು ಚೆನ್ನಾಗಿದ್ದೇನೆ ಎಂದು ಹಲವರು ಹೇಳುತ್ತಾರೆ. ನಾವು ಯಾರ ಜೊತೆಗೆ ಚೆನ್ನಾಗಿದ್ದರೂ ಅಥವಾ ಇರದಿದ್ದರೂ ಸಮಾಜಕ್ಕಾಗಿ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ. ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಮೀಸಲಾತಿ ಪಡೆಯುವವರೆಗೆ ಸುಮ್ಮನೆ ಕೂರಲ್ಲ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಹೋರಾಟ ಸಮಿತಿ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿ ವಿರುದ್ಧವೇ ಸಿಡಿದೆದ್ದು ನಾನು ಹೋರಾಡಿದ್ದೇನೆ. ಈಗ ಕಾಂಗ್ರೆಸ್‌ ಸರ್ಕಾರವಿದೆ. ಕಾಂಗ್ರೆಸ್‌ನಲ್ಲಿರುವ ನಮ್ಮ ಸಮಾಜದ ಸಚಿವರು, ಶಾಸಕರು ಸಮಾಜದ ಪರ ನಿಲ್ಲಬೇಕು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವಾರ ಕಾಲಾವಕಾಶ ಕೇಳಿದ್ದಾರೆ. ಕಾನೂನು ತೊಡಕು, ಸಾಧ್ಯತೆಗಳ ಬಗ್ಗೆ ಚರ್ಚಿಸಿ ನಿರ್ಧರಿಸುವೆ ಎಂದಿದ್ದಾರೆ. ಇನ್ನೆರಡು ವಾರ ಕಾಯೋಣ. ಲೋಕಸಭೆ ಚುನಾವಣೆ ಬರುವಷ್ಟರಲ್ಲಿ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕ್ರಾಂತಿ ಆಗಲಿದೆ’ ಎಂದರು.

‘ಹೋರಾಟ ಮಾಡದೇ ಪಂಚಮಸಾಲಿ ಸಮಾಜಕ್ಕೆ ಈವರೆಗೆ ಏನೂ ಸಿಕ್ಕಿಲ್ಲ. ರಾಣಿ ಚನ್ನಮ್ಮ ರಕ್ತ ಪಂಚಮಸಾಲಿಗರ ಮೈಯಲ್ಲಿ ಹರಿಯುತ್ತಿದೆ. ನಾನು ಸಮಾಜದ ಮಗಳಾಗಿ ಹೋರಾಟದಲ್ಲಿ ಇದ್ದೇನೆ. ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿ, ಮೀಸಲಾತಿ ಸೌಲಭ್ಯಕ್ಕೆ ಪ್ರಯತ್ನಿಸುವೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರದ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಸಮಾಜದಿಂದ ಒತ್ತಡ ಕೇಳಿ ಬಂದಿದೆ. ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವರು. ಅಲ್ಲಿಯವರೆಗೂ ಅವಕಾಶ ನೀಡಬೇಕು’ ಎಂದು ಅವರು ಕೋರಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ‘ಕಾಂಗ್ರೆಸ್‌ ಸರ್ಕಾರ ಬಂದಿದೆ ಎಂದ ಮಾತ್ರಕ್ಕೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮೀಸಲಾತಿ ಕುರಿತು ಸುಪ್ರೀಂ ಕೊರ್ಟ್‌ನಲ್ಲಿ ಒಬ್ಬರು ತಡೆಯಾಜ್ಞೆ ಸಲ್ಲಿಸಿದ್ದಾರೆ. ಅದು ತೆರವು ಆಗುವವರೆಗೆ ಏನೂ ಮಾಡಲು ಸಾಧ್ಯವಿಲ್ಲ. ಕೊನೆಯವರೆಗೂ ಹೋರಾಡುತ್ತೇವೆ. ಮೀಸಲಾತಿ ಪಡೆಯುತ್ತೇವೆ ಇಲ್ಲವೇ, ಮಡಿಯುತ್ತೇವೆ’ ಎಂದರು.

ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿನಯ ಕುಲಕರ್ಣಿ, ಅಶೋಕ ಮನಗೂಳಿ, ಮಾಜಿ ಶಾಸಕರಾದ ಎಚ್.ಎಂ.ಶಿವಶಂಕರಪ್ಪ, ಎ.ಬಿ.ಪಾಟೀಲ, ಶಶಿಕಾಂತ ನಾಯಿಕ ಸೇರಿ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.