ಬೆಳಗಾವಿ,: ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ಮತ್ತು ಇನ್ನಿತರ ಉದ್ಯಮಗಳಲ್ಲಿ ಬೆಳವಣಿಗೆಗೆ ಪೂರಕವಾಗಿ ಹಾಗೂ ಹೂಡಿಕೆಯನ್ನು ಆಕರ್ಷಿಸುವುದಕ್ಕಾಗಿ ಕ್ರೆಡೈ ಬೆಳಗಾವಿ ಘಟಕದ ವತಿಯಿಂದಗೆ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಫೆ.5 ರಿಂದ 8ರ ವರೆಗೆ ಬೆಲ್ಕಾನ್-2026 ನಡೆಯಲಿದೆ ಎಂದು ಕ್ರೆಡೈ ಬೆಳಗಾವಿ ಅಧ್ಯಕ್ಷ ಯುವರಾಜ ಹುಲಜಿ ಅವರು ತಿಳಿಸಿದರು.
ನಗರದಲ್ಲಿ ಇತ್ತೀಚೆಗೆ, ಬೆಲ್ಕಾನ್ 2026ರ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್ ವಲಯವು ನಗರ ಮಾತ್ರವಲ್ಲದೇ ಇಡೀ ಜಿಲ್ಲಾದ್ಯಂತ ಮೂಲಸೌಕರ್ಯ ನಿರ್ಮಾಣ, ಉದ್ಯೋಗ ಸೃಷ್ಟಿ ಹಾಗೂ ವ್ಯಾಪಾರ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದಲ್ಲದೇ, ಇಡೀ ದೇಶದ ಜಿಡಿಪಿ ಪ್ರಗತಿಯಲ್ಲಿಯೂ ರಿಯಲ್ ಎಸ್ಟೇಟ್ ಹಾಗೂ ಅದರ ಇನ್ನಿತರ ಪೂರಕ ಉದ್ಯಮಗಳ ಕೊಡುಗೆ ಅಪಾರವಾಗಿದೆ.
ಈ ನಿಟ್ಟಿನಲ್ಲಿ ಆಯೋಜನೆಗೊಳ್ಳುತ್ತಿರುವ ಬೆಲ್ಕಾನ್ 2026 ಕೇವಲ ಪ್ರದರ್ಶನಮಾತ್ರವಲ್ಲದೆ ಮನೆ ಖರೀದಿದಾರರು, ಅಭಿವೃದ್ಧಿಕಾರರು, ಹೂಡಿಕೆದಾರರು ಮತ್ತು ಕೈಗಾರಿಕಾ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಮುಂದಿನ ೧೦ ವರ್ಷದಲ್ಲಿ ನಡೆಯುವ ನಿರ್ಮಾಣ ಕಾಮಗಾರಿಗಳ ಶೈಲಿ, ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ನಿರ್ಧರಿಸಬಲ್ಲ ಮಹತ್ವದ ಕಾರ್ಯಕ್ರಮವಾಗಲಿದೆ ಎಂದರು.
ಈ ಬಾರಿಯ ಬೆಲ್ಕಾನ ನಲ್ಲಿ ನೂರಾರು ಮಳಿಗೆಗಳನ್ನು ಹಾಕಲಾಗಿದ್ದು, ವಸತಿ, ವಾಣಿಜ್ಯ ಮತ್ತು ಪ್ಲಾಟ್ ಅಭಿವೃದ್ಧಿ ಯೋಜನೆಗಳ ಜೊತೆಗೆ ನಿರ್ಮಾಣ ಸಾಮಗ್ರಿಗಳು, ಕಟ್ಟಡ ಪರಿಹಾರಗಳು, ಗೃಹ ಸಾಲ ಸೌಲಭ್ಯ ಹಾಗೂ ಒಳಾಂಗಣ ವಿನ್ಯಾಸದ ನವೀನತೆಗಳನ್ನು ಪ್ರದರ್ಶಿಸಲಾಗುತ್ತದೆ. ತಜ್ಞರ ಉಪನ್ಯಾಸಗಳು, ಪ್ಯಾನಲ್ ಚರ್ಚೆಗಳು ಮತ್ತು ಸಂವಾದ ನಡೆಯುವ ವೇದಿಕೆಗಳು ವೀಕ್ಷಕರಿಗೂ ವೃತ್ತಿಪರರಿಗೂ ಹೆಚ್ಚಿನ ಮಾಹಿತಿಯನ್ನು ನೀಡಲಿವೆ ಎಂದು ಹೇಳಿದರು.
ಕ್ರೆಡೈ ಬೆಳಗಾವಿ ಉಪಾಧ್ಯಕ್ಷ ಆನಂದ ಕುಲಕರ್ಣಿ ಅವರು ಮಾತನಾಡಿ, ಬೆಲ್ಕಾನ್-೨೦೨೬ರ ಭಾಗವಾಗಿ ‘ಬೆಳಗಾವಿ ಡೆವಲಪ್ಮೆಂಟ್ ಕಾನಕ್ಲೇವ್’ ಕೂಡ ಆಯೋಜಿಸಲಾಗುತ್ತಿದೆ. ಈ ಕಾನಕ್ಲೇವ್ನಲ್ಲಿ ಲಘು ಉದ್ಯೋಗ ಭಾರತಿ, ವ್ಯಾಪಾರಿಗಳ ಸಂಘ, ಇಂಜಿನಿಯರ್ ಹಾಗೂ ವಾಸ್ತುಶಿಲ್ಪಿಗಳ ಸಂಘಟನೆಗಳು ಸೇರಿದಂತೆ ವಿವಿಧ ವೃತ್ತಿಪರ ಸಂಸ್ಥೆಗಳು ಭಾಗವಹಿಸಲಿದ್ದು, ಬೆಳಗಾವಿಯ ಅಭಿವೃದ್ಧಿ ಅಗತ್ಯಗಳು, ಮೂಲಸೌಕರ್ಯ, ಹೂಡಿಕೆ ಅವಕಾಶಗಳು ಮತ್ತು ಭವಿಷ್ಯದ ನಗರಾಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಆಸೀಫ್ ಸೇಠ ಮತ್ತು ಅಭಯ್ ಪಾಟೀಲ ಸೇರಿದಂತೆ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತಿದೆ. ಕಾನಕ್ಲೇವ್ನಲ್ಲಿ ಕೇಳಿಬರುವ ಅಭಿಪ್ರಾಯಗಳು, ಸಲಹೆಗಳು ಮತ್ತು ಶಿಫಾರಸುಗಳನ್ನು ಸಂಗ್ರಹಿಸಿ, ಅವುಗಳನ್ನು ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೆಡೈ ಕಾರ್ಯದರ್ಶಿ ಪ್ರಶಾಂತ್ ವಾಂಡ್ಕರ್, ಖಜಾಂಚಿ ಸುಧೀರ ಪಾನರೆ, ಸಚಿನ್ ಸಬ್ನೀಸ್, ಸಚಿನ್ ಎ. ಬೈಲವಾಡ್, ಅಂಜಿಕ್ಯ ಕಾಲಕುಂದ್ರಿಕರ್, ಪ್ರಕಾಶ ಕಾಲಕುಂದ್ರಿಕರ್ ಸೇರಿದಂತೆ ಮುಂತಾದವರು ಉಪಸ್ಥಿತರರಿದ್ದರು.
ಬೆಳಗಾವಿಯಲ್ಲಿ ಫೆ. 5 ರಿಂದ ಬೆಲ್ಕಾನ್ -2026
