ಬೆಳಗಾವಿ,: ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಡೀಮ್ಡ್ ವಿಶ್ವವಿದ್ಯಾಲಯ) ದ ಕನ್ನಡ ಬಳಗ ಹಾಗೂ ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ವಚನೋತ್ಸವ-2026” ಕಾರ್ಯಕ್ರಮವು ನೆರವೇರಿತು.
ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯದ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಬಸವ ತತ್ವದ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕೆ.ಎಲ್.ಇ. ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಇ. ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ 1000ಕ್ಕೂ ಅಧಿಕ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಒಂದೇ ವೇದಿಕೆಯಲ್ಲಿ ಸೇರಿ ಬಸವಣ್ಣನವರ ಆಯ್ದ 35 ವಚನಗಳನ್ನು ಸಾಮೂಹಿಕವಾಗಿ ಗಾಯನ ಮಾಡುವ ಮೂಲಕ ವಚನ ಸಾಹಿತ್ಯಕ್ಕೆ ವಿಶಿಷ್ಟ ಗೌರವ ಸಲ್ಲಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕಮಗಳೂರು ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ, ಬದುಕಿನ ದಾರಿದೀಪಗಳಾಗಿವೆ̤. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಪ್ರಭುತ್ವ ಚಿಂತನಾ ವೇದಿಕೆಯಾಗಿದ್ದು, ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಪಾದಿಸಿತು ಎಂದು ಅಭಿಪ್ರಾಯಪಟ್ಟರು.
ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿರುವ ಸಂದರ್ಭದಲ್ಲಿ ಶರಣರ ವಚನ ಗಾಯನ ಒಂದು ಅಮೋಘ ಸಾಂಕೇತಿಕತೆಯಾಗಿದೆ. ಇಡೀ ಜಗತ್ತು ಇಂದು ಯುದ್ದ, ಅಶಾಂತಿ, ಮಾನವೀಯ ಮೌಲ್ಯಗಳ ಕುಸಿತದಿಂದ ಕತ್ತಲೆ ಆವರಿಸಿದೆ. ಇದಕ್ಕೆ ಬಸವಣ್ಣಾದಿ ಶರಣರ ಮನುಷ್ಯಪರವಾದ ಬೆಳಕು ಕತ್ತಲೆಯನ್ನು ದೂರಿ ಸರಿಸುವ ಸಾಮರ್ಥ್ಯ ಹೊಂದಿದೆ. ಲಿಂಗಾಯತರು ಬಸವಣ್ಣನವರನ್ನು ತಮ್ಮ ಹಿಡಿತದಿಂದ ಬಿಡಿಸಿ ಜನಸಾಮಾನ್ಯರ ಮಧ್ಯ ಒಪ್ಪಿಸುವ ಪ್ರಕ್ರಿಯೆ ನಡೆಯಬೇಕಾಗಿದ್ದು, ಬಸವಣ್ಣನವರನ್ನು ಮುಕ್ತಗೊಳಿಸಿ ಬಯಲಾಗಿಸುವ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ತಿಳಿಸಿದರು.
ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಬಸವಣ್ಣನವರ ವಚನಗಳು ಸಮಾಜದಲ್ಲಿ ಸಮಾನತೆ, ಕಾಯಕ, ದಾಸೋಹ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇಂದಿನ ಯುವಜನತೆ ವಚನ ಸಾಹಿತ್ಯವನ್ನು ಅರಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಎಂದು ಅಭಿಪ್ರಾಯಪಟ್ಟರು.
ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಾ. ವಿ. ಎಂ. ಪಟ್ಟಣಶೆಟ್ಟಿ ಅವರು ಮಾತನಾಡಿದರು. ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರರಾದ ಡಾ. ರಾಜೇಶ್ ಪವಾರ ಅವರು ಅಧ್ಯಕ್ಷತೆ ವಹಿಸಿದ್ದರು. ವಚನ ಗಾಯನದ ಸಂದರ್ಭದಲ್ಲಿ ಇಡೀ ಆವರಣ ಬಸವ ತತ್ವದ ಸಂದೇಶಗಳಿಂದ ಮೊಳಗಿದ್ದು, ವಿಶಿಷ್ಟ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣಗೊಂಡಿತು.
ಕನ್ನಡ ಬಳಗದ ಕಾರ್ಯಾಧ್ಯಕ್ಷರಾದ ಡಾ. ಅವಿನಾಶ್ ಕವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ. ನೇತ್ರಾವತಿ ಕವಿ ಹಾಗೂ ಶ್ರೀಮತಿ ಅನುಪಮಾ ನಿರೂಪಿಸಿದರು. ಡಾ. ಸುನಿತಾ ಪಾಟೀಲ ಅವರು ವಂದಿಸಿದರು.
