ಬೆಳಗಾವಿ: ಬಸವ ಸಂಸ್ಕೃತಿಯು ಈ ಭೂಮಿ ಇರುವವರೆಗೆ ಉಳಿಯುವಂಥ ಸಂಸ್ಕೃತಿಯಾಗಿದೆ.ಅಲ್ಲಿ ಜೀವ ಕಾರುಣ್ಯವಿದೆ,ಮಾನವನಲ್ಲಿ ದೇವರನ್ನು ಕಂಡಿರುವ ಜಗದ ಏಕೈಕ ಸಂಸ್ಕೃತಿ ಇದಾಗಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು ತಿರುಚುವ ಕೆಲಸ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಅಂತಹ ಸಂದರ್ಭದಲ್ಲಿ ಅದನ್ನು ಉಳಿಸುವ ಕೆಲಸ ಬಸವ ಸಂಸ್ಕೃತಿ ಅಭಿಯಾನದ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಎಸ್.ಜಿ.ಬಿ.ಐ.ಟಿ. ಕಾಲೇಜಿನ ಆವರಣದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆ ದಿನಗಳಲ್ಲಿ ವಚನ ಸಾಹಿತ್ಯ ಮತ್ತು ಬಸವಣ್ಣನವರ ಇತಿಹಾಸವನ್ನು ನಾಶಪಡಿಸಲು ದೊಡ್ಡ ಪ್ರಯತ್ನ ಆಗಿತ್ತು. ಆ ಸಂದರ್ಭದಲ್ಲಿ ಶರಣ-ಶರಣೆಯರು ತಮ್ಮ ತಲೆ ಮೇಲೆ ಹೊತ್ತುಕೊಂಡು ಹೋಗಿ ವಚನ ಸಾಹಿತ್ಯ ಉಳಿಸಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನದ ಮೂಲಕ ಅವರ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗುತ್ತಿದೆ. ಬಸವಣ್ಣನವರ ವಿಚಾರ, ಹೋರಾಟ ಮುಂದಿನ ಪೀಳಿಗೆ ಮತ್ತು ಈ ದೇಶ ಮರೆತು ಹೋಗಬಾರದು ಎಂಬುದು ಈ ಅಭಿಯಾನದ ಉದ್ದೇಶವಾಗಿರುವದು ಸಂತಸದ ಸಂಗತಿ ಎಂದರು.
ಬಸವಣ್ಣನವರು ಸಾಹಿತ್ಯ ರೂಪದಲ್ಲಿ ಹೇಳಿದ್ದನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ವಚನಗಳಲ್ಲಿ ಇರುವುದು ಸಂವಿಧಾನದಲ್ಲಿದೆ. ಸಂವಿಧಾನಕ್ಕೂ ವಚನ ಸಾಹಿತ್ಯಕ್ಕೂ ಯಾವುದೇ ಬೇಧ ಭಾವ ಮತ್ತು ಅಂತರ ಇಲ್ಲ ಅದು ಅತ್ಯಂತ ಶ್ರೇಷ್ಠವಾಗಿವೆ. ಬಸವಣ್ಣನವರನ್ನು ನಮ್ಮ ಸಿದ್ದರಾಮಯ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದರು. ಜೊತೆಗೆ ಬಸವಣ್ಣನವರ ಫೋಟೊ ಎಲ್ಲಾ ಕಚೇರಿಗಳಲ್ಲಿ ಹಾಕುವ ಘೋಷಣೆಯನ್ನು ಹಿಂದಿನ ನಮ್ಮ ಸಿದ್ದರಾಮಯ್ಯ ಸರ್ಕಾರವೇ ಮಾಡಿತ್ತು ಎಂಬುದನ್ನು ತುಂಬಾ ಹೆಮ್ಮೆಯಿಂದ ಹೇಳುತ್ತೇನೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಹಂದಿಗುಂದ ಶ್ರೀ.ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಎಂದರೆ ಬುಲೆಟ್ ಟ್ರೇನ್ ಇದ್ದ ಹಾಗೆ. ಇನ್ನೊಂದು ಇದ್ದಿಲು ನೀರಿನ ಮೇಲೆ ಹೊರಡುವ ಟ್ರೇನ್. ಅದಕ್ಕೆ ಇನ್ನೂ ಟೈಮ್ ಫಿಕ್ಸ್ ಆಗಿಲ್ಲ. ಬಸವ ತತ್ವ ಸಂದೇಶ ಹೊತ್ತಿರುವ ಬುಲೆಟ್ ಟ್ರೇನ್ ಹತ್ತುತ್ತಿರೋ ಅಥವಾ ಹಳೆಯ ಇದ್ದಿಲು ಟ್ರೇನ್ ಹತ್ತುತ್ತಿರೋ ಎಂಬುದನ್ನು ನೀವೇ ನಿರ್ಧರಿಸಬೇಕು. ಹೊಸ ರೇಡಿಯೋ ಹಾಡಲು ಸೆಲ್ ಮೇಲಿರುವ ಕ್ಯಾಪ್ ತೆಗೆಯಬೇಕು. ಅದೇರೀತಿ ಎಲ್ಲಿಯವರೆಗೆ ಲಿಂಗಾಯತ ಎನ್ನುವ ಸೆಲ್ ಮೇಲಿರುವ ವೀರಶೈವ ಎಂಬ ಕ್ಯಾಪ್ ತೆಗೆಯುವುದಿಲ್ಲವೋ ಅಲ್ಲಿಯವರೆಗೂ ಲಿಂಗಾಯತ ಎನ್ನುವ ಬ್ಯಾಟರಿ ಹತ್ತುವುದಿಲ್ಲ. ಆ ಕ್ಯಾಪ್ ತೆಗೆದು ಬಸವ ಬೆಳಕಿನಲ್ಲಿ ನಾವೆಲ್ಲರೂ ಸಾಗೋಣ ಎಂದು ಕರೆ ನೀಡಿದರು.
ಲಿಂಗಾಯತ ಧರ್ಮ ವಿರೋಧಿಸಿದ ಸ್ವಾಮೀಜಿಗೆ ಬುದ್ಧಿ ಕಲಿಸಿ:
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಬೇಡಿ ಎಂದು ನಾನೇ ಪ್ರಧಾನಿ ಮೋದಿಗೆ ಹೇಳಿದ್ದೇನೆ ಎಂದಿರುವ ಪಂಚಪೀಠದ ಓರ್ವ ಸ್ವಾಮೀಜಿಗೆ ಕನ್ನಡ ನಾಡಿನ ಲಿಂಗಾಯತ ಯುವಕರು ಬುದ್ಧಿ ಕಲಿಸಬೇಕಿದೆ. ನಿಮ್ಮ ಭವಿಷ್ಯಕ್ಕೆ ಮಣ್ಣು ಸುರಿಯುತ್ತಿರುವ, ಅಡ್ಡಗಾಲು ಹಾಕುತ್ತಿರುವ, ಮರಣ ಶಾಸನ ಬರೆಯಲು ಹೊರಟಿರುವ ಸ್ವಾಮೀಜಿಗಳಿಗೆ ಬುದ್ಧಿ ಕಲಿಸುವ ಸಂದರ್ಭ ಬಂದಿದೆ. ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಾವೆಲ್ಲಾ ಸನ್ನದ್ಧರಾಗಿ ನಿಲ್ಲೋಣ. 2025ರೊಳಗೆ ನಮಗೆಲ್ಲಾ ಒಂದು ಒಳ್ಳೆಯ ಸಿಹಿ ಸುದ್ದಿ ಸಿಗುವುದು ನಿಶ್ಚಿತ. ಬಸವನ ಬಾಗೇವಾಡಿಯಿಂದ ಶುರುವಾದ ಅಭಿಯಾನ ಬೆಳಗಾವಿಗೆ ಬಂದು ತಲುಪಿದ್ದು, ಬೆಂಗಳೂರು ಮುಟ್ಟುವುದರೊಳಗೆ ಒಂದು ಅದ್ಭುತ ಸಂದೇಶ ಹೊರಗೆ ಬರಲಿದೆ. ಅಕ್ಟೋಬರ್ ೫ರಂದು ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಬೇಕು. ಧರ್ಮಕ್ಕಾಗಿ ಬೆಂಗಳೂರು ಅಷ್ಟೇ ಅಲ್ಲದೇ ದಿಲ್ಲಿ ಚಲೋಗೂ ನಾವು ಸಿದ್ಧರಾಗಬೇಕು. ಮಹಿಳೆಯರು ತಮ್ಮ ಆಧಾರ್ ಕಾರ್ಡ್ ದೊಂದಿಗೆ ಬೆಂಗಳೂರಿಗೆ ಹೊರಡಿ. ಎಲ್ಲಾ ಬಸ್ಸುಗಳು ಬಸವ ಭಕ್ತರ ಬಸ್ಸುಗಳಾಗಲಿ. ನಿಮ್ಮೆಲ್ಲರ ವ್ಯವಸ್ಥೆಯ ಜವಾಬ್ದಾರಿ ನಮ್ಮದು ಎಂದು ಶ್ರೀ.ಶಿವಾನಂದ ಸ್ವಾಮೀಜಿ ಹೇಳಿದರು.
ದೇಶಾಧ್ಯಂತ ಬಸವ ಜಯಂತಿ ಆಚರಿಸಬೇಕು:ಡಾ.ಬಸವಲಿಂಗ ಪಟ್ಟದ್ದೇವರು
ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕರ್ನಾಟಕದಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಕಾಲ ಕೂಡಿ ಬಂದಿದೆ. ಇದಕ್ಕೆ ಸ್ಪಂದಿಸಿದವರಿಗೆ ಬಸವಣ್ಣನ ಶ್ರೀರಕ್ಷೆ ಸಿಗಲಿದೆ. ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಬಸವಣ್ಣನವರನ್ನು ಗಟ್ಟಿಯಾಗಿ ಹಿಡಿದುಕೊಂಡು ಹೊರಟಿದ್ದೇವೆ. ಇಂಥ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ. ಸಾವಿರಾರು ಶರಣರು ತಮ್ಮ ಜೀವ ಬಲಿಕೊಟ್ಟು ವಚನ ಸಾಹಿತ್ಯದ ಆಸ್ತಿ ಕೊಟ್ಟು ಹೋಗಿದ್ದಾರೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತಾ ಬರೆಸದಿದ್ದರೆ ಶರಣರಿಗೆ ಅಪಮಾನ ಮಾಡಿದಂತೆ ಆಗುತ್ತದೆ. ಹಾಗಾಗಿ, ಲಿಂಗಾಯತ ಧರ್ಮ ಅಂತಾ ಬರೆಸುವ ಮೂಲಕ ನಿಜ ಬಸವಣ್ಣನವರ ವಾರಸುದಾರರಾಗೋಣ. ಕರ್ನಾಟಕ ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡುವುದಷ್ಟೇ ಅಲ್ಲ. ದೇಶಾಧ್ಯಂತ ಬಸವ ಜಯಂತಿ ಆಚರಿಸಬೇಕು. ದೇಶದ ಎಲ್ಲಾ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಬಸವಾದಿ ಶರಣರ ವಿಚಾರ ಅತೀ ಅವಶ್ಯಕ:ಡಾ.ತೋಂಟದ ಸಿದ್ದರಾಮ ಸ್ವಾಮೀಜಿ
ಗದಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಪ್ರಜೆಗಳಿಗೆ ಯಾವುದೇ ಅಧಿಕಾರ ಇಲ್ಲದ, ಪ್ರಭುತ್ವ ಕಾಲದಲ್ಲಿ ಬಸವಣ್ಣನವರು ವಿಶಿಷ್ಟವಾದ ಸಂಸ್ಕೃತಿ ಕೊಟ್ಟಿದ್ದಾರೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಸವಾದಿ ಶಿವಶರಣರ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಯಾವುದೇ ತೊಂದರೆ ಇಲ್ಲ. ೧೨ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ ಎತ್ತಿ ಹಿಡಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೊಟ್ಟ ಮೊದಲು ಪ್ರತಿಪಾದಿಸಿದರು. ಅವುಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಿದ್ದರು. ಎಲ್ಲ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿ ಅವರನ್ನೆ ಹಿರಿಯರನ್ನಾಗಿ ಪರಿಗಣಿಸಿ, ಅವರ ಮಾರ್ಗದರ್ಶನದಲ್ಲಿ ನಾನು ನಡೆಯುವ ವ್ಯಕ್ತಿ ಎನ್ನುವ ವಿನಯವಂತಿಕೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಬಸವಣ್ಣನವರು ಕಾಯಕಜೀವಿಗಳ ನಾಯಕರಾಗಿ ರೂಪಗೊಂಡರು. ಸಮಾನತೆ, ಕಾಯಕ, ದಾಸೋಹ, ಸ್ತ್ರೀ ಸಮಾನತೆ ಅಂತ ಮೌಲ್ಯಗಳನ್ನು ಇವತ್ತೂ ಕೂಡ ನಮ್ಮ ಸಮಾಜದಲ್ಲಿ ಅನುಷ್ಠಾನಕ್ಕೆ ತರುವ ಅಗತ್ಯತೆ ಬಹಳಷ್ಟಿದೆ. ಬಸವಾದಿ ಶಿವ ಶರಣರ ವಿಚಾರಗಳು ಎಲ್ಲಾ ಕಾಲಘಟ್ಟಕ್ಕೂ ಪ್ರಸ್ತುತ. ಸಂಘರ್ಷ ಇಲ್ಲದೇ ಸಮೃದ್ಧಿ ಮತ್ತು ಸಂತೃಪ್ತಿಯಿAದ ಬದುಕಲು ಇವುಗಳನ್ನು ಇಂದಿನ ಕಾಲದಲ್ಲಿ ಅನುಷ್ಠಾನಕ್ಕೆ ತರುವ ಅತೀ ಅವಶ್ಯತೆ ಇದೆ ಎಂದರು.
ಬಸವ ಸಂಸ್ಕೃತಿ ಉಳಿದರೆ ಮಾತ್ರ ಭಾರತದ ಸಂಸ್ಕೃತಿ ಉಳಿಯಲು ಸಾಧ್ಯ:ಶ್ರೀ.ನಿಜಗುಣಾನಂದ ಸ್ವಾಮೀಜಿ
ಬೈಲೂರಿನ ನಿಶ್ಚಲ ಮಂಟಪದ ಶ್ರೀ.ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದಲ್ಲಿ ಸನಾತನವಾದಿಗಳು ವಚನ ಸಾಹಿತ್ಯ ನಾಶಗೊಳಿಸಿದರು. ಇಂದು ನಮ್ಮವರೇ ಲಿಂಗಾಯತ ಧರ್ಮ ನಾಶ ಪಡಿಸಲು ಮುಂದಾಗಿದ್ದಾರೆ. ಹಾಗಾಗಿ, ಬಸವಣ್ಣನವರೇ ನಮ್ಮ ಧರ್ಮಗುರು, ವಚನ ಸಾಹಿತ್ಯವೇ ನಮ್ಮ ಧರ್ಮ ಗ್ರಂಥ. ಲಿಂಗಾಯತ ಎಂದರೆ ಮಾನವಹಕ್ಕುಗಳ ಪ್ರತಿಪಾದನೆ. ಅತಂತ್ರ, ಕುತಂತ್ರ, ಪರತಂತ್ರ ತಲೆಗೂ ಬೆಲೆ ಕೊಡಬೇಡಿ ಸ್ವತಂತ್ರ ತಲೆಗಳಾಗಿ ಲಿಂಗಾಯತರು ಬದುಕಬೇಕು. ಬಸವ ಸಂಸ್ಕೃತಿ ಉಳಿದರೆ ಮಾತ್ರ ಭಾರತದ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ವೀರಶೈವದೊAದಿಗೆ ಶತಮಾನ ಕಳೆದರೂ ಮಾನ್ಯತೆ ದೊರಕದು : ಡಾ.ಗಂಗಾ ಮಾತಾಜಿ
ವೀರಶೈವದೊಂದಿU ಮಾನ್ಯತೆ ಕೇಳುತ್ತ ಕುಳಿತರೆ ಶತಮಾನ ಕಳೆದರೂ ಮಾನ್ಯತೆ ದೊರಕದು,ಕೇವಲ ಲಿಂಗಾಯತ ಎಂದರೆ ಮಾತ್ರ ಮಾನ್ಯತೆ ಸಿಗಲು ಸಾದ್ಯ ವಿಶ್ವ ವಿನೂತನ ಧರ್ಮವೆ ಲಿಂಗಾಯತ,ಅದು ಸಿಖ್ ಮತ್ತು ಜೈನ ರ್ಧಂದAತೆ ಸ್ವತಂತ್ರ ಧರ್ಮವಾಗಿದೆ ಅದಕ್ಕೆ ಮಾನ್ಯತೆ ಸಿಗಲೇಬೇಕು ಎಲ್ಲಿಯವರೆಗೆ ಮಾನ್ಯತೆ ಸಿಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.
ಕಾರ್ಯಕ್ರಮದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ,ಸಿದ್ಧಬಸವ ಕಬೀರ ಸ್ವಾಮೀಜಿ ಸೇರಿ ೧೦೦ಕ್ಕೂ ಅಧಿಕ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಬಳಿಕ ಸಾಣೇಹಳ್ಳಿಯ ಶಿವಸಂಚಾರ ಕಲಾತಂಡದಿAದ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪೂರ್ತಿ ನಾಟಕ ವೀಕ್ಷಿಸಿ, ಕಲಾವಿದನ್ನು ಪ್ರೋತ್ಸಾಹಿಸಿದರು.
ಡಾ.ಮಹಾಂತಪ್ರಭು ಸ್ವಾಮೀಜಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಬಸವರಾಜ ರೊಟ್ಟಿ ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು.ನೈನಾ ಗಿರಿಗೌಡರ ಅವರ ತಂಡ ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳು ಸೇರಿ ಎರಡು ನೂರು ಜನರಿಂದ ವಚನ ಪ್ರಾರ್ಥನೆ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮುಂಚೆ ಲಿಂಗರಾಜ ಕಾಲೇಜು ಆವರಣದಿಂದ ಆರಂಭವಾಗಿ ಚನ್ನಮ್ಮ ವೃತ್ತ,ಕೃಷ್ಣದೇವರಾಯ ವೃತ್ತದ ಮೂಲಕ ಹೊರಟು ಶಿವಬಸವ ನಗರದ ನಾಗನೂರು ರುದ್ರಾಕ್ಷ ಮಠದವರೆಗೆ ನಡೆದ ಸಾಮರಸ್ಯದ ನಡಿಗೆಯಲ್ಲಿ ಭಾಗವಹಿಸಿದ್ದರು.
ಬಸವ ಸಂಸ್ಕೃತಿಯು ಈ ಭೂಮಿ ಇರುವವರೆಗೆ ಉಳಿಯುವಂಥ ಸಂಸ್ಕೃತಿ-ಸಚಿವ ಜಾರಕಿಹೊಳಿ
