ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಅಗತ್ಯವಿರುವ ಶಿಕ್ಷಣ, ಸೇವೆ ಮತ್ತು ಸಂಶೋಧನೆಗಳಿಗೆ ಉದ್ದೇಶಿತ ಕ್ವಿನ್ ಸಿಟಿಯಲ್ಲಿ ಮುಂದಿನ 5 ವರ್ಷಗಳಲ್ಲಿ 1,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಬೆಳಗಾವಿಯ ಕೆಎಲ್‌ಇ ಸೊಸೈಟಿ ಪ್ರಕಟಿಸಿದೆ.
‘ಜಿಮ್ -2025’ ಸಮಾವೇಶದಲ್ಲಿ ಸರಕಾರದ ಪರವಾಗಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾ‌ರ್ ಮತ್ತು ಕೆಎಲ್‌ಇ ಸೊಸೈಟಿ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಈ ಸಂಬಂಧದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.
ಈ ಹೂಡಿಕೆ ಯೋಜನೆಯಿಂದ 1,500 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದು ಕ್ವಿನ್ ಸಿಟಿಗೆ ಘೋಷಣೆಯಾಗಿರುವ ಪ್ರಪ್ರಥಮ ಹೂಡಿಕೆಯಾಗಿದೆ.
ಉಳಿದಂತೆ ಸವದತ್ತಿಯ ಶಿವಶಕ್ತಿ ಶುಗರ್ಸ್ ಹಾಗೂ ಇನಾಂದಾರ್ ಶುಗರ್ಸ್ ಕಾರ್ಖಾನೆಗಳು ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಗೆ ಮುಂದಿನ 2 ವರ್ಷಗಳಲ್ಲಿ ಕ್ರಮವಾಗಿ 1,000 ಕೋಟಿ ರೂ. ಮತ್ತು 250 ಕೋಟಿ ರೂ. ಹೂಡಿಕೆ ಮಾಡಲಿವೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಕಾನೂನು, ನ್ಯಾಯ,ಮಾನವ ಹಕ್ಕುಗಳು,ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.