ಬೆಳಗಾವಿ : ಗಡಿನಾಡಿನಲ್ಲಿ ಕನ್ನಡವನ್ನು ಬೆಳೆಸುತ್ತ, ಕನ್ನಡತನವನ್ನು ಪಸರಿಸಿದ್ದ ‘ಕನ್ನಡದ ಸ್ವಾಮೀಜಿ’ ಎಂದೇ ಪ್ರಸಿದ್ದಿಯಾಗಿದ್ದ ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ (63) ಅವರಿಂದಿಲ್ಲಿ ಲಿಂಗೈಕ್ಯರಾಗಿದ್ದಾರೆ.
ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಅವರು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠದ ಸ್ವಾಮೀಜಿಯಾಗಿದ್ದ ಇವರು ಅಪಾರ ಭಕ್ತರನ್ನು ಹೊಂದಿದ್ದರು. ಸ್ವಾಮೀಜಿ ಅಗಲಿಕೆಯಿಂದಾಗಿ ಸಾವಿರಾರು ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಸಾರ್ವಜನಿಕರ ದರ್ಶನಕ್ಕೆ ಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ವಾಮಿಜಿಯವರ ಅಂತ್ಯಕ್ರಿಯೆ ಭಾನುವಾರವೇ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚಿಕ್ಕೋಡಿ ನಗರದಿಂದ 6 ಕಿ.ಮೀ ದೂರದಲ್ಲಿ ಇರುವ ಚಿಂಚಣಿ ಎಂಬ ಪುಟ್ಟ ಗ್ರಾಮದಲ್ಲಿನ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠವು ಕನ್ನಡದ ಕಾಯಕದ ಮೂಲಕ ಇಡೀ ನಾಡಿನಾದ್ಯಂತ ಚಿರಪರಿಚಿತವಾಗಿದೆ. ಇದರ ಪೀಠಾಧಿಪತಿಗಳಾದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರು ಕನ್ನಡ ನಾಡು ನುಡಿ, ಗಡಿ, ಸಂಸ್ಕೃತಿ ಸಂರಕ್ಷಣೆ ಮತ್ತು ಸಂವರ್ಧನೆಯ ದೀಕ್ಷೆ ತೊಟ್ಟು ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸುವ ಕೈಂಕರ್ಯದಲ್ಲಿ ಕ್ರಿಯಾಶೀಲರಾಗಿದ್ದರು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡ ಜಾಗೃತಿ ಮೂಡಿಸುವದರೊಂದಿಗೆ ಕನ್ನಡ ನಿತ್ಯೋತ್ಸವ ಆಗಬೇಕು ಎಂಬ ಕನಸನ್ನು ನನಸು ಮಾಡಿದವರು.
ಶ್ರೀಮಠದಿಂದ 45ಕ್ಕೂ ಹೆಚ್ಚು ಗ್ರಂಥಗಳ ಪ್ರಕಟಣೆ : ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕ ಮಾಲೆಯ ಮೂಲಕ ಇದುವರೆಗೆ ಆಧುನಿಕ ಕರ್ನಾಟಕದ ಆತಂಕಗಳು, ಕನ್ನಡತನ ಮತು ಭಾರತೀಯತೆ, ಮಹಾಜನ ವರದಿ ಒಂದು ಅವಲೋಕನ, ಕನ್ನಡದ ಕೋಟೆ ಕೆಎಲ್‌ಇ ಸಂಪ್ರದಾಯದ ಇತಿಹಾಸ, ರಂಗಭೂಮಿ-ಕನ್ನಡದ ಸಂವೇಧನೆ, ನಮ್ಮ ನಾಡು, ನುಡಿ ಮತ್ತು ಗಡಿ ಕನ್ನಡದ ಕಟ್ಟೋಣ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ-ಕನ್ನಡಿಗ, ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ, ಮಹಾದಾಯಿ ನೀರಿಗಾಗಿ ಹೋರಾಟ ಮತ್ತು ಕನ್ನಡಕ್ಕೆ ಕೈ ಎತ್ತು…ಮೊದಲಾದ 45 ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಲಾಗಿದೆ. ಮರಾಠಿಯ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ-ಮರಾಠಿ ಸಾಹಿತ್ಯ ಮತ್ತು ಸಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸಿದ್ದರು.
ಸ್ವಾಮೀಜಿಗಳು ಕನ್ನಡ ಪರವಾದ ಪುರಾತನ ದಾಖಲೆಗಳನ್ನು ಸಂಗ್ರಹಿಸುವಲ್ಲಿ, ಬೋನ್ಸಾಯ್ ಸಸ್ಯ ಬೆಳೆಸುವ ವಿಶೇಷ ಆಸಕ್ತಿ ಹೊಂದಿದ್ದರು. ಕನ್ನಡದ ಇತಿಹಾಸ ತಿಳಿಸುವ ಅಪರೂಪದ ದಾಖಲೆಗಳು ಅವರ ಬಳಿ ಇವೆ. ದೇಶ-ವಿದೇಶ ಕರೆನ್ಸಿಗಳ ಸಂಗ್ರಹವೂ ಇವೆ. ಹೊಂದಿದ್ದಾರೆ.
ಕನ್ನಡದ ತೇರು : ಜಾತ್ರೆ-ಉತ್ಸವಗಳಲ್ಲಿ ರಥೋತ್ಸವ ನಡೆಸುವುದು ಸಾಮಾನ್ಯ. ಆದರೆ ಈ ಮಠದಲ್ಲಿ ಸ್ವಾಮೀಜಿ ಅವರು ಕನ್ನಡ ತೇರು ನಿರ್ಮಿಸಿ ಕಳೆದೊಂದು ದಶಕದಿಂದ ಸಿರಿಗನ್ನಡದ ತೇರು ಎಳೆಯುತ್ತಿದ್ದಾರೆ. ಅಪ್ಪಟ ಕನ್ನಡದ ರಥವಾಗಿರುವ ಇದರಲ್ಲಿ 32 ಸಾಹಿತಿಗಳ ಚಿತ್ರಗಳು ಮತ್ತು 16 ಕನ್ನಡದ ಘೋಷಣೆಗಳನ್ನು ಕೆತ್ತಲಾಗಿದೆ. ತೇರಿನ ಎಂಟು ಭಾಗಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಲಾಗಿದೆ. ಇದರ ನಡುವೆ ತಾಯಿ ಭುವನೇಶ್ವರಿ ಮೂರ್ತಿಯನ್ನು ಇರಿಸಿ ಪ್ರತಿ ವರ್ಷ ಯುಗಾದಿ ಹಬ್ಬದಂದು ತೇರನ್ನು ಎಳೆಯಲಾಗುತ್ತದೆ.