ಬೆಳಗಾವಿ: ಸಮಾಜದಲ್ಲಿರುವ ಸಮಸ್ಯೆಗಳ ಕಡೆಗೆ ಬೆಳಕು ಹರಿಸುವ ಕಾರ್ಯವನ್ನು ಮಾದ್ಯಮಗಳು ಮಾಡಬೇಕು. ಪತ್ರಿಕಾರಂಗವು ಸಮಾಜ ತಿದ್ದುವ ಪಾತ್ರ ನಿರ್ವಹಿಸುತ್ತಿದೆ. ಅದರೊಂದಿಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಮಾಡಬೇಕು. ಪತ್ರಕರ್ತರು ತಮ್ಮ ವರದಿಗಳಿಂದ ವೃತ್ತಿ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಸಲಹೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶನಿವಾರ  ನಡೆದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಿಜಿಟಲ್‌ ಹಾಗೂ ಎಲೆಕ್ಟ್ರಾನಿಕ್‌ ಮಾದ್ಯಮಗಳಿಂದ ನಾ ಮುಂದೆ ಎನ್ನುವ ಧಾವಂತ ಹೆಚ್ಚಾಗಿದೆ. ಮೂಲ ಸುದ್ದಿಯ ಸ್ವರೂಪವೇ ಬದಲಾಗಿ ಕೆಲವೊಮ್ಮೆ ಬೇರೆಯದೇ ಅರ್ಥ ಮೂಡಿಸುತ್ತಿದೆ. ಆದ್ದರಿಂದ ಮೂಲ ಸುದ್ದಿ ಅಥವಾ ಹೇಳಿಕೆಗಳು ಯಥಾವತ್ತಾಗಿ ವರದಿಯಾಗಬೇಕಾಗಿದೆ ಎಂದ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಬೆಳಗಾವಿಯಲ್ಲಿಆದಷ್ಟು ಬೇಗ ಜಾಗ ಹುಡುಕಿ ಪತ್ರಿಕಾ ಭವನ ನಿರ್ಮಿಸಲಾಗುತ್ತದೆ. ಅಲ್ಲದೇ ಪ್ರೆಸ್‌ ಕ್ಲಬ್‌ ನಿರ್ಮಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದು  ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ, ಪತ್ರಕರ್ತರು ರಾಜಕಾರಣಕ್ಕಿಂತ ಅಭಿವೃದ್ಧಿ ಕೆಲಸಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎನ್ನುವಂತೆ ಪತ್ರಕರ್ತರು ಕೆಲಸ ಮಾಡಬೇಕಿದೆ. ಪದೇ ಪದೆ ನನ್ನ ಮತ್ತು ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವಂತೆ ಸುದ್ದಿ ಬರುತ್ತಿದೆ. ಇದಕ್ಕೆಲ್ಲ ಕೆಲವೊಮ್ಮೆ ಉತ್ತರಿಸಲೂ ಮುಜುಗರವಾಗುತ್ತದೆ. ನಮ್ಮ ಮಧ್ಯೆ ಯಾವ ಗೊಂದಲವೂ ಇಲ್ಲ. ಆದರೆ ಸುಳ್ಳನ್ನೇ ಪದೇ ಪದೇ ಹೇಳುವುದರಿಂದ ಜನರಲ್ಲಿ ಗೊಂದಲ ನಿರ್ಮಾಣವಾಗುತ್ತದೆ ಎಂದು ಹೆಬ್ಬಾಳಕರ್ ಹೇಳಿದರು.

ನೈಜ ಸುದ್ದಿ ಪ್ರಕಟಿಸಿ. ವಿಷಯಾಂತರ ಬೇಡ. ಸರಕಾರದಿಂದ ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಗಮನ ಸೆಳೆದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ರಾಜಕಾರಣಕ್ಕಿಂತ ಅಭಿವೃದ್ಧಿ ಕುರಿತು ಹೆಚ್ಚು ಸುದ್ದಿ ಮಾಡುವಂತಾಗಲಿ. ಸರಕಾರ ಪತ್ರಕರ್ತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗಿದೆ. ಪತ್ರಕರ್ತರಿಗೆ ನಿವೇಶನ ಕೊಡುವ ಕುರಿತು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು

ಸನ್ಮಾನ ಸ್ವೀಕರಿಸಿ ಮಾತನಾಡಿದ  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ಪ್ರಭಾಕರ್. ಬೆಳಗಾವಿ ಜಿಲ್ಲೆ ಅತೀ ವಿಶೇಷವಾದ ಜಿಲ್ಲೆಯಾಗಿದೆ. ಇಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಷಯ. ಈ ಅಭಿನಂದನಾ ಕಾರ್ಯಕ್ರಮವನ್ನು ಎಲ್ಲ ಪತ್ರಕರ್ತ ಮಿತ್ರರಿಗೆ ಅರ್ಪಿಸುತ್ತೇನೆ. ಪತ್ರಕರ್ತರಿಗೆ ನಿವೇಶನ ಮೀಸಲಿಡುವುದು ಹಾಗೂ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. ಮಾಧ್ಯಮ ಪ್ರತಿನಿಧಿಗಳ ಪ್ರತಿನಿಧಿಯಾಗಿ ಸರಕಾರದ ಮಟ್ಟದಲ್ಲಿ ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುತ್ತೇನೆ ಎಂದು ಕೆ. ಪ್ರಭಾಕರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರನ್ನು ಗೌರವಿಸಿ, ಅಭಿನಂದಿಸಲಾಯಿತು. ಇದೇ ವೇಳೆ ಮುಖ್ಯಮಂತ್ರಿಗಳ ಕಚೇರಿಯ ಗಿರಿಶ್ ಕೆ., ಕೆ.ಪಿ.ಪುಟ್ಟಸ್ವಾಮಯ್ಯ, ದೀಪಕ್ ಕರಾಡೆ ಅವರನ್ನು ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಕರ್ತವ್ಯಾಧಿಕಾರಿ ಎಂ.ಕೆ.ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿವಿಧ ಪತ್ರಿಕೆಯ ಜಿಲ್ಲಾ ವರದಿಗಾರರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರನ್ನೂ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ. ಕಾ.ಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ,‌‌‌ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.