ಬೆಳಗಾವಿ: ದಾದರ ಎಕ್ಸಪ್ರೆಸ್ ಚಲಿಸುತ್ತಿದ್ದ ರೈಲಿನಲ್ಲಿ ಮುಸುಕದಾರಿ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದು ಓರ್ವನನ್ನು ಕೊಲೆ ಮಾಡಿದ ಮತ್ತು ನಾಲ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಗಾಗಿ ರೈಲ್ವೆ ಪ್ರೋಟೆಕ್ಷನ್‌ ಫೋರ್ಸ್‌(ಆರ್‌ಪಿಎಫ್‌), ಗ್ರೇಟರ್‌ ರೈಲ್ವೆ ಪೊಲೀಸ್‌(ಜಿಆರ್‌ಪಿ) ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ ಎಂದು ರೈಲ್ವೆ ಪೊಲೀಸ್‌ ಡಿಐಜಿ ಎಸ್‌.ಡಿ. ಶರಣಪ್ಪ ಅವರಿಂದಿಲ್ಲಿ ಮಾಹಿತಿ ನೀಡಿದರು.
ಖಾನಾಪುರ ತಾಲ್ಲೂಕಿನಲ್ಲಿ ಗುರುವಾರ ನಡೆದ ಈ ಘಟನೆಯಲ್ಲಿ ಹಲ್ಲೆಗೆ ಒಳಗಾಗಿ, ಇಲ್ಲಿನ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ವಿಚಾರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುದುಚೇರಿ–ದಾದರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟಿಕೆಟ್‌ ಪರಿವೀಕ್ಷಕ(ಟಿಟಿಇ) ಅಶ್ರಫ್‌ ಕಿತ್ತೂರ ಟಿಕೆಟ್‌ ತಪಾಸಣೆ ಮಾಡುತ್ತಿದ್ದರು. ಆಗ ಮುಸುಕುಧಾರಿಯಾಯಾಗಿದ್ದ ಪ‍್ರಯಾಣಿಕ ಹಲ್ಲೆಗೆ ಮುಂದಾದ. ಆಗ ಟಿಟಿಇ ನೆರವಿಗೆ ಬಂದ ಆನ್‌ ಮೋಡ್‌ ಹೌಸ್‌ಕೀಪಿಂಗ್‌ ಸ್ಟಾಫ್‌ ದೇವ‌ರ್ಷಿ ವರ್ಮಾ(23) ಮೇಲೆಯೂ ಹಲ್ಲೆ ಮಾಡಿದ್ದು, ಅವರು ಮೃತಪಟ್ಟಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.

ರೈಲಿನಲ್ಲಿ ಭದ್ರತೆ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ನಿತ್ಯ 1,400 ರೈಲು ಕಾರ್ಯಾಚರಣೆ ನಡೆಸುತ್ತವೆ. ಆದರೆ, ರೈಲಿನಲ್ಲಿ ಭದ್ರತೆಗಾಗಿ ನಮ್ಮ ಬಳಿ ಇರುವುದು 830 ಸಿಬ್ಬಂದಿ ಮಾತ್ರ. ಒಂದು ರೈಲಿಗೆ ಒಬ್ಬ ಸಿಬ್ಬಂದಿ ನಿಯೋಜಿಸಲು ಆಗದ ಪರಿಸ್ಥಿತಿ ಇದೆ. ಹಾಗಾಗಿ ಅಪರಾಧಗಳ ಪ್ರಮಾಣ ಹಾಗೂ ಸೂಕ್ಷ್ಮ ಪ್ರದೇಶ ಆಧರಿಸಿ, ಆಯಾ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಸಿಬ್ಬಂದಿ ನಿಯೋಜಿಸುತ್ತಿದ್ದೇವೆ. ಸಿಬ್ಬಂದಿ ಹೆಚ್ಚಿಸಲು ಕ್ರಮ ಕೈಗೊಳುತ್ತೇವೆ ಎಂದು ತಿಳಿಸಿದರು.
ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.