ಬೆಳಗಾವಿ : ಒಳಚರಂಡಿ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಜಮೀನು ನೀಡಿರುವ ಹಲಗಾ ಗ್ರಾಮದ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಿ ಸರಕಾರಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರ ಅಹವಾಲು ಆಲಿಸಿದ ನಂತರ ಅವರು, ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ಎಕರೆಗೆ 3 ಲಕ್ಷ ರೂ ಪರಿಹಾರ ನೀಡಲು ಪ್ರಸ್ತಾವಿಸಲಾಗಿತ್ತು. ಆದರೆ ಅಲ್ಲಿನ ರೈತರಿಗೆ ಬೆಳೆ ಪರಿಹಾರವಾಗಿ ವರ್ಷಕ್ಕೆ 3.60 ಲಕ್ಷ ರೂಗಳನ್ನು ಸರಕಾರವೇ ನೀಡಿದೆ. ಹಾಗಾಗಿ ರೈತರ ಕೋರಿಕೆಯಂತೆ ಎಕರೆಗೆ 4 ಕೋಟಿ ರೂ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ಮತ್ತು ಮಹಾನಗರ ಪಾಲಿಕೆಯಿಂದ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವದಲ್ಲದೇ, ರೈತರಿಗೆ ನೀಡಲಾಗಿರುವ ಭರವಸೆಗಳನ್ನೂ ಈಡೇರಿಸಬೇಕೆಂದು ತಿಳಿಸಿದರು.
ರೈತರಿಗೆ ಯಾವುದೇ ಕಾರಣದಿಂದ ಅನ್ಯಾಯವಾಗಬಾರದು. ಈ ಹಿಂದಿನ ಸಭೆಗಳ ನಡಾವಳಿಗಳನ್ನು ತರಿಸಿಕೊಂಡು ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದೆ. ರೈತರಿಂದಲೂ ಅಹವಾಲು ಆಲಿಸಲಾಗಿದೆ. 2017ರಲ್ಲಿ ಆಗಿನ ನಗರಾಭಿವೃದ್ಧಿ ಸಚಿವರು, ಸರಕಾರದ ಜೊತೆಗೆ ಮಹಾನಗರ ಪಾಲಿಕೆಯಿಂದಲೂ ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಹಾಗಾಗಿ ಹೊಸದಾಗಿ ಪ್ರಸ್ತಾವನೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಆದಷ್ಟು ಬೇಗ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮಹಾನಗರ ಪಾಲಿಕೆಯಿಂದಲೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತರಿಗೆ ಹೆಚ್ಚಿನ ಪರಿಹಾರ, ಉದ್ಯೋಗ ಮತ್ತು ಮಳಿಗೆ ನೀಡುವ ಭರವಸೆಯನ್ನು ಆಗಿನ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದರು. ಆದರೆ ರೈತರಿಗೆ ಅನ್ಯಾಯವಾಗಿದೆ. ಪೊಲೀಸರೂ ಸಹ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಈ ಹಿಂದಿನ ಸಭೆಗಳ ನಡಾವಳಿಗಳನ್ನು ಪರಿಶೀಲಿಸಿ ರೈತರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪವಿಭಾಗಾಧಿಕಾರಿ, ತಹಸಿಲ್ದಾರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಪರಿಹಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿ: ಲಕ್ಷ್ಮೀ ಹೆಬ್ಬಾಳಕರ
