ಬೆಳಗಾವಿ: ಎಂಇಎಸ್ ಎಂಥ ಸಂಘಟನೆ ಅಂತಾ ಇಡೀ ದೇಶಕ್ಕೆ ಗೊತ್ತಿದೆ. ಪಾಕಿಸ್ತಾನದ ಭಯೋತ್ಪಾದಕರು, ಕ್ರೂರಿಗಳಿಗೂ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಯಣಗೌಡ ಹರಿಹಾಯ್ದರು.

ಬೆಳಗಾವಿ ಸಾಂಬ್ರಾ ವಿಮಾನ‌ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಒಬ್ಬ ಚಾಲಕ, ನಿರ್ವಾಹಕರನ್ನು ಬಸ್ ನಿಂದ ಕೆಳಗಿಳಿಸಿ ಬಣ್ಣ ಹಾಕಿ, ಅವರಿಗೆ ಹಾರ ಹಾಕಿ ಜೈ ಮಹಾರಾಷ್ಟ್ರ ಅಂತಾ ಘೋಷಣೆ ಕೂಗಿಸುತ್ತಿರಿ. ಇಡೀ ಬೆಳಗಾವಿಯಲ್ಲಿರುವ ಪ್ರತಿಯೊಬ್ಬ ಮರಾಠಿಗನ ಬಾಯಿಯಿಂದಲೂ ಕರ್ನಾಟಕಕ್ಕೆ ಜೈ ಎನಿಸುವ ಕಾಲ ಬೇಗ ಬರುತ್ತದೆ. ಅದಕ್ಕಾಗಿ ಇಂಥ ಪುಂಡಾಟಿಕೆ ಬಿಟ್ಟು ಬಿಡಿ. ಬೆಳಗಾವಿಯಲ್ಲಿ ಎಂಇಎಸ್ ಸಂಪೂರ್ಣ ಅಂತ್ಯವಾಗಿದೆ. ಆ ಹೊಟ್ಟೆ ಉರಿಗೆ ಇಂಥ ಪುಂಡಾಟಿಕೆ ಶುರು ಮಾಡಿದ್ದಾರೆ. ಬೆಳಗಾವಿ ಅಷ್ಟೇ ಅಲ್ಲದೇ ಇಡೀ ಕರ್ನಾಟಕದಲ್ಲಿ ಎಂಇಎಸ್ ಸರ್ವನಾಶ ಮಾಡೋವರೆಗೂ ಕರವೇ ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಇಡೀ ಕರ್ನಾಟಕದಲ್ಲಿ ಎಲ್ಲ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ತೆಗೆಯುವಂತೆ ಹೋರಾಡುತ್ತಿರುವುದೇ ಕರವೇ. ಬೆಳಗಾವಿಗೆ ನಾನು ಬಂದಷ್ಟು ಯಾವ ಕರ್ನಾಟಕದ ಮುಖ್ಯಮಂತ್ರಿ, ಸಚಿವರೂ ಬಂದಿಲ್ಲ. ಬೆಳಗಾವಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಸರ್ಕಾರದ ಮೇಲೆ ನನ್ನಷ್ಟು ಒತ್ತಡ ಬೇರೆ ಯಾರೂ ಹಾಕಿಲ್ಲ. ರಾಜ್ಯದ ಮುಖ್ಯಮಂತ್ರಿ ಒಳಗೊಂಡಂತೆ ಈ ಭಾಗದ ಮಂತ್ರಿಗಳನ್ನು ಒಳಗೊಂಡು ಯಾರೂ ಉಸಿರು ಬಿಡದೇ ಇದ್ದಾಗ ಮಾತಾಡಿದ್ದು, ಹೋರಾಟ ಮಾಡಿದ್ದು ಕರವೇ ಮಾತ್ರ ಎಂದು ನಾರಾಯಣಗೌಡ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಮರಾಠಿ ಎಂಇಎಸ್ ಮಗಾ ಗೂಂಡಾಗಳ ಗೂಂಡಾಗಿರಿಯನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ಬೆಳಗಾವಿ ನೆಲದಲ್ಲೆ ಅವರಿಗೆ ಉತ್ತರ ಕೊಡಬೇಕು ಅಂತಾ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಇವರ ದಬ್ಬಾಳಿಕೆ, ದೌರ್ಜನ್ಯಕ್ಕೆ ಅಂತ್ಯ ಆಗಬೇಕು. ಕರ್ನಾಟಕ ಬಸ್ ಗಳನ್ನು ಒಡೆದು ಹಾಕಿ, ಬಸ್ ಬಳಿಯುವುದು, ಕಂಡಕ್ಟರ್ ಮೇಲೆ ಹಲ್ಲೆ ಮಾಡುವ ಪ್ರವೃತ್ತಿಯನ್ನು ಕಳೆದ 27 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಪುಣ್ಯಭೂಮಿಯಾದ ಬೆಳಗಾವಿಯಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಭಾಷೆಯೇ ಸಾರ್ವಭೌಮ. ಮರಾಠಿಗರು ಕರ್ನಾಟಕಕ್ಕೆ ಬಂದಿದ್ದರೆ ಅವರು ಮಾಲೀಕರಲ್ಲ. ಅವರು ಅತಿಥಿಗಳಷ್ಟೇ. ಈ ನೆಲದ ಮಾಲೀಕರು ಕನ್ನಡಿಗರು‌ ಎಂದು ನಾರಾಯಣಗೌಡ ತಿಳಿಸಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಇಲ್ಲಿಯ ಆಡಳಿತ ಭಾಷೆ ಕನ್ನಡ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕರ್ನಾಟಕದ ಬೆಳಗಾವಿ ಗಡಿ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಇರುವಾಗ ಎಂಇಎಸ್ ನವರು ದಾಖಲೆ ಸೃಷ್ಟಿಸುತ್ತಿರುವಾಗ ಮರಾಠಿಯಲ್ಲಿ ದಾಖಲೆ ಕೊಟ್ಟರೆ ನಾಳೆ ಕರ್ನಾಟಕಕ್ಕೆ ಭಾರಿ ತೊಂದರೆ ಆಗುತ್ತದೆ. ನಿಮ್ಮ ಎಲ್ಲ ವ್ಯವಹಾರ, ಕಾಗದಪತ್ರಗಳನ್ನು ಕರ್ನಾಟಕದ ನೆಲದಲ್ಲಿ ನೀವು ಕನ್ನಡದಲ್ಲೆ ಕೊಡಬೇಕು. ಅವರು ಮರಾಠಿಯಲ್ಲಿ ಕೇಳುತ್ತಾರೆ, ಮತ್ತೊಬ್ಬರು ಮತ್ತೊಂದು ಭಾಷೆಯಲ್ಲಿ ಕೇಳುತ್ತಾರೆ ಎಂದರೆ ಜಿಲ್ಲಾಧಿಕಾರಿ ಕೊಡಬಾರದು ಎಂದು ಒತ್ತಾಯಿಸಿದರು.

ಇಲ್ಲಾ ನಾನು ಕೊಡುತ್ತೇನೆ ಅನ್ನುವುದಾದರೆ ಇಲ್ಲಿ ಕೆಲಸ ಮಾಡುವುದು ಸರಿಯಲ್ಲ. ನಿಮ್ಮ ರಾಜ್ಯಕ್ಕೆ ವಾಪಸ್ಸು ಹೋಗುವವರೆಗೂ ಕರವೇ ಹೋರಾಟ ಮಾಡಲಿದೆ. ಅದು ಆಗೋದು ಬೇಡ ಎಂದರೆ ಕನ್ನಡದಲ್ಲಿ ಆಡಳಿತ ನಡೆಸಬೇಕು. ಅದನ್ನು ಬಿಟ್ಟು ಮರಾಠಿಗರನ್ನು ಓಲೈಸಲು ಮುಂದಾದರೆ ಜಿಲ್ಲಾಧಿಕಾರಿ ವಿರುದ್ಧ ಇಡೀ ಕರ್ನಾಟಕದಲ್ಲಿ ಕರವೇ ಹೋರಾಟ ಮಾಡಲಿದೆ ಎಂದು ನಾರಾಯಣಗೌಡ ಎಚ್ಚರಿಸಿದರು.