ಬೆಳಗಾವಿ: ತಂದೆ ಸ್ವಾತಂತ್ರ್ಯ ಹೋರಾಟಗಾರ. ಮಾನವೀಯ ಕಳಕಳಿ ಮತ್ತು ಸಮಾಜಮುಖಿ ವ್ಯಕ್ತಿತ್ವ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಿ ಎಂದು ತಮ್ಮ ಮಕ್ಕಳಿಗೆ ಸದಾಕಾಲ ಹೇಳುತ್ತಿದ್ದರು. ತಂದೆಯ ಮಾತಿನಿಂದ ಪ್ರೇರೇಪಣೆಗೊಂಡ ಮಗ ರಕ್ತದಾನದಲ್ಲಿ ಕ್ರಾಂತಿ ಮಾಡಿದ್ದಾರೆ. ಅವರೇ ಹೇಳುವಂತೆ ಬರೊಬ್ಬರಿ 117 ಬಾರಿ ರಕ್ತ ಕೊಟ್ಟು ದಾಖಲೆ ಬರೆದಿದ್ದಾರೆ. ನೂರಾರು ಜೀವಗಳನ್ನು ಉಳಿಸಿ ತಂದೆಗೆ ಕೊಟ್ಟ ಮಾತು ಈಡೇರಿಸಿದ್ದಾರೆ.l
ದಾನಗಳಲ್ಲೇ ರಕ್ತದಾನ ಅತ್ಯಂತ ಶ್ರೇಷ್ಠ ಮತ್ತು ಮಹಾದಾನ. ದುಡ್ಡು, ಅನ್ನ, ಬಟ್ಟೆ ಸೇರಿ ಬೇಕಾದ್ದನ್ನು ದಾನ ಮಾಡಬಹುದು. ರಕ್ತದಾನ ಮಾಡಲು ಬಹಳಷ್ಟು ಜನರು ಹಿಂಜರಿಯುತ್ತಾರೆ. ಆದರೆ, ಬೆಳಗಾವಿ ಶಾಹಪುರದ ಕೋರೆ ಗಲ್ಲಿ ನಿವಾಸಿ ಶಿವಲಿಂಗಪ್ಪ ಮಹಾದೇವಪ್ಪ ಕಿತ್ತೂರು ಅವರು ಬರೋಬ್ಬರಿ 117 ಬಾರಿ ರಕ್ತದಾನ ಮಾಡಿದ್ದಾರೆ. ಇದರಿಂದ ಯಾವುದೇ ರೀತಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲ್ಲ. ನಮ್ಮ ರಕ್ತ ಶುದ್ಧೀಕರಣವಾಗಿ, ಹೊಸ ರಕ್ತ ಉತ್ಪತ್ತಿ ಆಗುತ್ತದೆ ಎಂಬುದನ್ನು ಸಾಬೀತು ಪಡಿಸಿ ಇತರರಿಗೂ ಮಾದರಿ ಆಗಿದ್ದಾರೆ.
1957 ಜನವರಿ 1ರಂದು ಜನಿಸಿರುವ ಶಿವಲಿಂಗಪ್ಪ ಅವರಿಗೆ ಈಗ 69 ವಯಸ್ಸು. ಶಿವಲಿಂಗಪ್ಪ ಅವರ ತಂದೆ ಮಹಾದೇವಪ್ಪ ಕಿತ್ತೂರು, ಭಾರತ ಸ್ವಾತಂತ್ರ್ಯ ಮತ್ತು ಗೋವಾ ವಿಮೋಚನೆಗೆ‌ ಹೋರಾಡಿದ ದೇಶಭಕ್ತ. ಶಿವಲಿಂಗಪ್ಪ ಪಿಯುಸಿ ಓದುತ್ತಿರುವಾಗ ಅವರ ತಂದೆ ನಿನ್ನಲ್ಲಿರುವುದನ್ನು ಅವಶ್ಯಕತೆ ಇರುವವರಿಗೆ ದಾನ ಮಾಡು ಅಂತಾ ಹೇಳಿದ್ದರು. ನಾನು ವಿದ್ಯಾರ್ಥಿ ನನ್ನ ಹತ್ತಿರ ಕೊಡಲು ಏನಿದೆ ಅಂದಾಗ, ಮೈಯಲ್ಲಿ ರಕ್ತ ಹರಿಯುತ್ತಿದೆ ಅಲ್ಲವೇ ಅದನ್ನೇ ದಾನ ಮಾಡು ಎಂದಿದ್ದರು. ತಂದೆಯ ಮಾತಿನಿಂದ ಪ್ರೇರಣೆಗೊಂಡು 1979ರಿಂದ ರಕ್ತದಾನ ಮಾಡಲು ಶುರು ಮಾಡಿದ ಅವರು ಅದರಿಂದ ಹಿಂದೆ ಸರಿಯಲಿಲ್ಲ. 2017ರವರೆಗೆ ಒಟ್ಟು 117 ಬಾರಿ ರಕ್ತ ಕೊಟ್ಟು ಮಾದರಿ ಆಗಿದ್ದಾರೆ. ಬಿಕಾಂ ಪದವಿ ಮುಗಿಸಿದ್ದು, ವೃತ್ತಿಯಲ್ಲಿ ಔಷಧ ವ್ಯಾಪಾರಿ ಆಗಿದ್ದಾರೆ.
ಶಿವಲಿಂಗಪ್ಪ ಮಹಾದೇವಪ್ಪ ಕಿತ್ತೂರು ಶಿವಲಿಂಗಪ್ಪ ಅವರೇ ಹೇಳುವ ಪ್ರಕಾರ 1979 ರಿಂದ 2017ರವರೆಗೆ ಸತತವಾಗಿ 39 ವರ್ಷ ರಕ್ತದಾನ ಮಾಡಿದ್ದು, 1 ವರ್ಷ 6 ಬಾರಿ ಕೊಟ್ಟಿದ್ದರೆ, ಇನ್ನುಳಿದಂತೆ 38 ವರ್ಷ ಪ್ರತಿ ವರ್ಷವೂ 3 ಬಾರಿ ರಕ್ತದಾನ ಮಾಡಿರುವುದು ಗಮನಿಸಬೇಕಾದ ಸಂಗತಿ.
ನೂರಾರು ಯುವಕರಿಗೆ ಪ್ರೇರಣೆ: ಲಯನ್ಸ್ ಕ್ಲಬ್, ಜಿಲ್ಲಾಸ್ಪತ್ರೆ, ಕೆಎಲ್ಇ ಆಸ್ಪತ್ರೆ, ಮಹಾವೀರ ರಕ್ತ ನಿಧಿ, ಕೆಎಲ್ಇ ಆಯುರ್ವೇದ ಆಸ್ಪತ್ರೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಷ್ಟೇ ಅಲ್ಲದೇ ನಿಡಸೋಸಿಯ ದುರದುಂಡೇಶ್ವರ ಮಠ, ಕಪಿಲೇಶ್ವರ ದೇವಸ್ಥಾನ, ದಾನಮ್ಮ ದೇವಿ ದೇವಸ್ಥಾನ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ರಕ್ತದಾನ ಮಾಡಿದ್ದಾರೆ. ತಮ್ಮ ಬಳಿ ರಕ್ತ ಕೇಳಿಕೊಂಡು ಬಂದವರಿಗೆ ಎಂದೂ ನಿರಾಸೆ ಮಾಡಿಲ್ಲ. ರಕ್ತದ ವ್ಯವಸ್ಥೆ ಮಾಡಿಯೇ ಬಿಡುತ್ತಿದ್ದರು. ಅಲ್ಲದೇ ನೂರಾರು ಯುವಕರು ಇವರಿಂದ ಪ್ರೇರೇಪಿತರಾಗಿ ರಕ್ತದಾನಕ್ಕೆ ಮುಂದಾಗಿರುವುದು ವಿಶೇಷ. ಬಿ-ಪಾಸಿಟಿವ್ ಅವರ ರಕ್ತದ ಗುಂಪು.
ಶಿವಲಿಂಗಪ್ಪ ಮಹಾದೇವಪ್ಪ ಕಿತ್ತೂರು
ವೈದ್ಯರ ಮಾರ್ಗದರ್ಶನದಂತೆ 2017 ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನ ತಮ್ಮ 60ನೇ ವಯಸ್ಸಿನಲ್ಲಿ ಕೊನೆಯದಾಗಿ 117ನೇ ಬಾರಿ ಶಿವಲಿಂಗಪ್ಪ ರಕ್ತದಾನ ಮಾಡಿದ್ದಾರೆ. ಅದಾದ ಬಳಿಕ ರಕ್ತದಾನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ‌. ಇವರ ಸೇವೆ ಗುರುತಿಸಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ ವಿವಿಧ ಸಂಘ ಸಂಸ್ಥೆಗಳು ಸತ್ಕರಿಸಿ ಗೌರವಿಸಿವೆ.
ಪತ್ನಿ, ಮಕ್ಕಳು ಬೈದರೂ ರಕ್ತದಾನ ಬಿಡಲಿಲ್ಲ: ಬಹಳಷ್ಟು ಬಾರಿ ರಕ್ತದಾನ ಮಾಡುತ್ತಿರುವುದರಿಂದ ಶಿವಲಿಂಗಪ್ಪ ಅವರಿಗೆ ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಬೈಯುತ್ತಿದ್ದರಂತೆ. ನಿಮ್ಮ ಆರೋಗ್ಯಕ್ಕೆ ಏನಾದರೂ ಸಮಸ್ಯೆ ಆದರೆ ಏನು ಮಾಡುವುದು ಎಂದು ಪ್ರಶ್ನಿಸುತ್ತಿದ್ದರಂತೆ. ಆಗ ತಜ್ಞ ವೈದ್ಯರನ್ನು ಸಂಪರ್ಕಿಸಿದಾಗ ವರ್ಷಕ್ಕೆ 3 ಬಾರಿ ರಕ್ತ ಕೊಡಿ, ಅದಕ್ಕಿಂತ ಹೆಚ್ಚು ಬಾರಿ ಕೊಡಬೇಡಿ ಎಂದು ಸಲಹೆ ಕೊಟ್ಟಿದ್ದರಂತೆ. ಅದಕ್ಕಿಂತ ಮೊದಲು ಒಂದು ವರ್ಷ ಮೂರಕ್ಕೂ ಅಧಿಕ ಬಾರಿ ರಕ್ತಕೊಟ್ಟಿದ್ದೇನೆ. ಬಡವರು ಬಂದು ನನ್ನ ಕಾಲನ್ನೇ ಹಿಡಿಯುವರು. ಅವರ ಕಷ್ಟ, ಪರಿಸ್ಥಿತಿ ನೋಡಿ ಒಮ್ಮೊಮ್ಮೆ ಅರ್ಧ ಬಾಟಲಿ ರಕ್ತ ಕೊಟ್ಟ ಉದಾಹರಣೆಯೂ ಇದೆ ಎಂದ ರಕ್ತದಾನಿ ಶಿವಲಿಂಗಪ್ಪ ವಿವರಿಸಿದರು.
ಸಸ್ಯಾಹಾರಿ ಊಟವೇ ನನ್ನ ಆರೋಗ್ಯದ ಗುಟ್ಟು: “ಕಳೆದ 45 ವರ್ಷಗಳಿಂದ ಸಹೋದರ ಬಾಬಣ್ಣ ಅವರ ಜೊತೆಗೆ ಬೆಳಗಾವಿಯಲ್ಲಿ ಹೋಲ್ ಸೇಲ್ ಔಷಧ ವ್ಯಾಪಾರ ನಡೆಸುತ್ತಿರುವ ಶಿವಲಿಂಗಪ್ಪ ಕಿತ್ತೂರು 69ರ ಹರೆಯದಲ್ಲೂ ನವ ಯುವಕರನ್ನು ನಾಚಿಸುವಂತೆ ಓಡಾಡುತ್ತಾರೆ. ನಾನು ನಮ್ಮ ತಂದೆಯ ವ್ಯಕ್ತಿತ್ವ ಮತ್ತು ಡಾ‌.ರಾಜಕುಮಾರ್​ ಸಿನಿಮಾಗಳಿಂದ ತುಂಬಾ ಪ್ರಭಾವಿತಗೊಂಡಿದ್ದೇನೆ. ನನಗೆ ಯಾವುದೇ ದುಶ್ಚಟ ಇಲ್ಲ. ಶುದ್ಧ ಸಸ್ಯಾಹಾರಿ ಊಟ ನನ್ನದು. ನಿಯಮಿತವಾಗಿ ರೊಟ್ಟಿ, ಹಸಿರು ತರಕಾರಿ, ಡ್ರೈ ಫ್ರುಟ್ಸ್, ಹಾಲು ಸೇವಿಸುತ್ತೇನೆ. ಪ್ರತಿದಿನ 3-4 ಕಿ.ಮೀ. ವಾಕಿಂಗ್ ಮಾಡುತ್ತೇನೆ. ಇದೇ ನನ್ನ ಆರೋಗ್ಯದ ಗುಟ್ಟು” ಎನ್ನುತ್ತಾರೆ ಶಿವಲಿಂಗಪ್ಪ ಕಿತ್ತೂರು.
ನಿಮ್ಮ ಕುಟುಂಬಕ್ಕಾಗಿ ರಕ್ತ ಕೊಡಿ: “ಇಂದಿನ ಅನೇಕ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದು ತುಂಬಾ ಆತಂಕದ ವಿಷಯ. ಸದ್ಯ ರಕ್ತದ ಕೊರತೆ ಸಾಕಷ್ಟಿದೆ. ಹಾಗಾಗಿ, ಯುವಕರು ದುಶ್ಚಟಗಳನ್ನು ಬಿಟ್ಟು, ತಮ್ಮ ತಂದೆ-ತಾಯಿ ಮತ್ತು ಮನೆಯವರಿಗೋಸ್ಕರ ಆದರೂ ರಕ್ತದಾನ ಮಾಡಬೇಕು. ಇಲ್ಲದಿದ್ದರೆ ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಪರದಾಡಬೇಕಾಗುತ್ತದೆ. ಯುವ ಶಕ್ತಿ ತಮ್ಮ ಕುಟುಂಬ ಮತ್ತು ದೇಶಕ್ಕಾಗಿ ದುಡಿಯುವ ತುಡಿತ ಬೆಳೆಸಿಕೊಳ್ಳಿ” ಎಂಬುದು ಶಿವಲಿಂಗಪ್ಪ ಅವರ ಕಿವಿಮಾತು.
ಸಹೋದರನ ಬಗ್ಗೆ ಹೆಮ್ಮೆ ಇದೆ: ಶಿವಲಿಂಗಪ್ಪ ಸಹೋದರ ಬಾಬಣ್ಣ ಕಿತ್ತೂರು ಮಾತನಾಡಿ, “ಮಗ ಅಂದರ ಇಂಥವ ಇರಬೇಕು. ತಮ್ಮ ಎಂದರೆ ಹೀಗಿರಬೇಕು. ನನ್ನ ಸಹೋದರನ ಬಗ್ಗೆ ತುಂಬಾ ಹೆಮ್ಮೆ ಇದೆ. ನಮ್ಮ ತಂದೆಯವರ ಪ್ರೇರಣೆಯಿಂದ ಒಟ್ಟು 117 ಬಾರಿ ರಕ್ತ ಕೊಟ್ಟಿದ್ದಾರೆ. ಅಷ್ಟು ಸಲ ರಕ್ತದಾನ ಮಾಡಿದರೂ ಅವರು ತುಂಬಾ ಆರೋಗ್ಯವಾಗಿದ್ದಾರೆ. ಹಾಗಾಗಿ, ರಕ್ತ ಕೊಡುವುದರಿಂದ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ. ನಾಲ್ಕು ದಿನ ನಿಶ್ಯಕ್ತಿ ಆಗಬಹುದಷ್ಟೇ. ಒಂದು ತಿಂಗಳಲ್ಲಿ ಮತ್ತೆ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ನಾನು ಕೂಡ 15 ಬಾರಿ ರಕ್ತ ಕೊಟ್ಟಿದ್ದೇನೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನಕ್ಕೆ ಮುಂದಾಗಬೇಕು. ಜನರ ಜೀವ ಉಳಿಸಬೇಕು” ಎಂದರು.
ಕೆಎಲ್ಇ ರಕ್ತ ಭಂಡಾರದ ಮುಖ್ಯಸ್ಥ ಶ್ರೀಕಾಂತ ವಿರ್ಗಿ ಅವರು, “ಶಿವಲಿಂಗಪ್ಪ ಕಿತ್ತೂರು ನಮ್ಮ ಸ್ನೇಹಿತ. ಅವರ ತಂದೆಯ ಪ್ರೇರಣೆಯಿಂದ ಸಾಮಾಜಿಕ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಒಟ್ಟು 117 ಬಾರಿ ರಕ್ತದಾನ ಮಾಡಿ ಅಪರೂಪದ ದಾಖಲೆ ಬರೆದಿದ್ದಾರೆ. ಅವರು ನಮ್ಮ ಬೆಳಗಾವಿ ಜಿಲ್ಲೆಗೆ ಹೆಮ್ಮೆ. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸುವ ಜೊತೆಗೆ ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು” ಎಂದರು.