ಬೆಳಗಾವಿ,: ಕೆಲಸದ ವಿಷಯಕ್ಕೆ ತಮ್ಮನೇ ಅಣ್ಣನನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಟ್ಟಿ ಆಲೂರಿನಲ್ಲಿ ನಡೆದಿದೆ.
ರಾಯಪ್ಪ ಸುರೇಶ್ ಕಮತಿ (28) ಕೊಲೆಯಾದ ವ್ಯಕ್ತಿ. ಬಸವರಾಜ್ ಕಮತಿ (24) ಅಣ್ಣನನ್ನೇ ಕೊಂದ ತಮ್ಮ. ಬಸವರಾಜ್ ಕಮತಿ ಕುವೈತ್ ನ್ಯಾಷನಲ್ ಪೆಟ್ರೋಲಿಯಂ ಕಂಪನಿಯಲ್ಲಿ ವಾಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ರಜೆ ಮೇಲೆ ತನ್ನ ಊರಾದ ಹಟ್ಟಿ ಆಲೂರಿಗೆ ತೆರಳಿದ್ದ.
ಈ ವೇಳೆ ಅಣ್ಣ ರಾಯಪ್ಪ ಕಮತಿ, ಬಸವರಾಜ್ ಗೆ ಮತ್ತೆ ಕೆಲಸಕ್ಕೆ ಹೋಗಲು ಬಿಡದೇ ತನ್ನೊಂದಿಗೆ ಕುರಿ ಕಾಯಲು ಬಾ ಎಂದು ಕರೆಯುತ್ತಿದ್ದನಂತೆ. ಅಲ್ಲದೇ ಪ್ರತಿದಿನ ಕುರಿದೊಡ್ಡಿಯಲ್ಲಿ ಮಲಗಲು ಹೇಳುತ್ತಿದ್ದನಂತೆ. ಇದೇ ಕಾರಣಕ್ಕೆ ಸಹೋದರರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಬೇಸತ್ತ ಬಸವರಾಜ್ ಅಣ್ಣನನ್ನೇ ಕೊಲ್ಲಲು ಪ್ಲಾನ್ ಮಾಡಿದ್ದಾನೆ.
ಅಣ್ಣ ಮರದ ಕೆಳಗೆ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತ ಕುಳಿತಿದ್ದನ್ನು ಕಂಡು ರಾಯಪ್ಪನ ಮುಖಕ್ಕೆ ಖಾರದ ಪುಡಿ ಎರಚಿ, ತಲೆಯ ಮೇಲೆ, ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸದ್ಯ ಆರೋಪಿ ಬಸವರಾಜ್ ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಸವರಾಜ್ ಅಣ್ಣನನ್ನು ತಾನೇ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮೇ 9ರಂದು ಪಾಶ್ಚಾಪುರ ಹೊರ ವಲಯದಲ್ಲಿ ಶವ ಸಿಕ್ಕಿರುತ್ತದೆ. ಆದರೆ, ಹಿಂದಿನ ದಿನ ಮೇ 8ರಂದು ರಾಯಪ್ಪನ ಕೊಲೆ ಆಗಿರುತ್ತದೆ. ಮೇ 7ರಂದು ರಾತ್ರಿ ಮನೆಯಲ್ಲಿ ದೊಡ್ಡ ಗಲಾಟೆ ಆಗಿತ್ತು. ಆಗ ಬಸವರಾಜ ಬೇರೆ ಕಡೆ ಹೋಗಿದ್ದ. ಬೆಳಿಗ್ಗೆ ಮತ್ತೆ ವಾಪಸ್ಸು ಮನೆಗೆ ಬಂದಿರುತ್ತಾನೆ. ಈ ವೇಳೆಯೂ ತಂದೆಯ ಮುಂದೆಯೇ ಸಹೋದರರ ನಡುವೆ ಗಲಾಟೆ ಆಗುತ್ತದೆ. ಇದಾದ ಬಳಿಕ ರಾಯಪ್ಪ ನಾನು ಕುರಿ ಮೇಯಿಸಲು ಕೆನಾಲ್ ಹತ್ತಿರ ಹೋಗುತ್ತೇನೆ ಅಂತಾ ಹೇಳಿ ಹೊರಟಿದ್ದ.
ರಾಯಪ್ಪನ ಕೊಲೆ ಮಾಡುವ ಉದ್ದೇಶದಿಂದಲೇ ಬಸವರಾಜ ತನ್ನ ಮೊಬೈಲ್ ಮನೆಯಲ್ಲೆ ಚಾರ್ಜಿಂಗ್ ಇಟ್ಟು, ಯಾರಿಗೂ ಗೊತ್ತಾಗದಂತೆ ಖಾರದ ಪುಡಿ ತೆಗೆದುಕೊಂಡು ಹೋಗಿದ್ದ. ಕೆನಾಲ್ ಹತ್ತಿರ ಹುಡುಕಾಡಿದಾಗ ಅಲ್ಲಿಯೇ ದೂರದಲ್ಲಿದ್ದ ಮರದ ಕೆಳಗೆ ರೀಲ್ಸ್ ನೋಡಿಕೊಂಡು ಅಣ್ಣ ರಾಯಪ್ಪ ಕುಳಿತಿದ್ದ. ಈ ವೇಳೆ ಹಿಂತಿರುಗುತ್ತಿದ್ದಂತೆ ರಾಯಪ್ಪನ ಮುಖಕ್ಕೆ ಖಾರದ ಪುಡಿ ಎರಚುತ್ತಾನೆ. ಆಗ ಯಾರೂ ಅಂತ ಗೊತ್ತಾಗದೇ ಕಣ್ಣು ಹೊರೆಸಿಕೊಳ್ಳುತ್ತಿರುವಾಗಲೇ ರಾಯಪ್ಪನ ತಲೆ ಮೇಲೆ ಬಸವರಾಜ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾನೆ ಎಂದು ಡಾ.ಭೀಮಾಶಂಕರ ಗುಳೇದ ವಿವರಿಸಿದರು.