ಮೌಲ್ಯಾಧಾರಿತ ಸಮಾಜ ರಚನೆಯೊಂದಿಗೆ ಕಾಯಕ ,ದಾಸೋಹ ,ಅನುಭಾವ ವೈಚಾರಿಕತೆಯ ಪರಿಕಲ್ಪನೆಯನ್ನು ಮಾನವರಿಗೆ ಮುಟ್ಟಿಸುವಲ್ಲಿ ಬಸವಣ್ಣನವರು ಯಶಸ್ವಿಯಾದರು. ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಾಗಿರದೆ ಮಾನವ ಸಮಾಜದ ದಿವ್ಯ ಶಕ್ತಿಯಾದರು. ಅವರ ವ್ಯಕ್ತಿತ್ವ ಮತ್ತು ದೃಷ್ಟಿಕೋನ ಹಾಗೂ ಯೋಜನೆಗಳು ಅನಾವರಣಗೊಂಡಿವೆ. ಇಡೀ ಪ್ರಪಂಚದಲ್ಲಿ ಬುದ್ಧ ಮಹಾವೀರ ತರುವಾಯ ಕೇಳಿಬರುವ ಹೆಸರು ಮಹಾತ್ಮ ಜಗಜ್ಯೋತಿ ಬಸವೇಶ್ವರರು. ಧರ್ಮ,ಆಧ್ಯಾತ್ಮಿಕ, ದೇವರು,ಕಾಯಕ, ದಾಸೋಹ ,ಸರ್ವ ಸಮಾನತೆ ಎಲ್ಲ ವೃತ್ತಿ ಭಾಂಧವರಲ್ಲಿ ಸಮಾನ ಗೌರವ ಸಲ್ಲಿಸುವುದು. ಸಕಲ ಜೀವಾತ್ಮರಿಗೆ ಲೇಸುನ್ನು ಬಯಸುವದು. ದಯವೇ ಧರ್ಮದ ಮೂಲಾಧಾರದ ಮೇಲೆ ಬದುಕುವುದು. ಗುರು ಲಿಂಗ ಜಂಗಮಕ್ಕೆ ತನು- ಮನ-ಧನವನ್ನು ಅರ್ಪಿಸುವುದು.ಮಾನವೀಯ ಮೌಲ್ಯಗಳಿಗೆ ನೆಲೆ ಬೆಲೆ ತಂದುಕೊಟ್ಟ ಅಪರೂಪದ ಚೇತನಶೀಲ ಮಹಾನುಭಾವರು. ಭಕ್ತಿ-ಜ್ಞಾನ- ವೈರಾಗ್ಯ ಕ್ರಿಯೆಗಳಿಗೆ ಹೆಚ್ಚು ಮಹತ್ವವನ್ನು ದಯಪಾಲಿಸಿದ ಮಹಾಂತರು. ಕಾಯಕ ದಾಸೋಹ ಸಂಸ್ಕೃತಿಯ ಮೂಲಕ ಶ್ರಮ ಜೀವಿಯಾಗಿ ನುಡಿದಂತೆ ನಡೆದು, ನಡೆದಂತೆ ನುಡಿದು ಆಚಾರ್ಯ ಪುರುಷರಾದರು. ಅವರ ಚರಿತ್ರೆಗಿಂತಲೂ ಚಾರಿತ್ರದ ವ್ಯಕ್ತಿತ್ವ ಶೇಷ್ಠವಾದದು;ಅಷ್ಟೇ ಮುಖ್ಯವಾದದು.
ಅಂದು ಸ್ಥಾಪಿಸಿದ ‘ಅನುಭವ ಮಂಟಪ ‘ವು ಇಂದು ಒಂದು ಸಂಸತ್ ಭವನ,ಅಥವಾ ಒಂದು ಮಾದರಿ ವಿಶ್ವ ವಿದ್ಯಾಲಯದಂತೆ ತನ್ನ ಕಾರ್ಯ ಬಾಹುಳ್ಯ ಎಲ್ಲೇಡೆಯೂ ಪಸರಿಸಿತು.ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ತ್ರೀ ಸ್ವಾತಂತ್ರ್ಯ ಒದಗಿಸುವಲ್ಲಿ ಅಗ್ರ ಸ್ಥಾನವನ್ನು ಕಲ್ಪಿಸಿ ಕೊಟ್ಟಿದೆ. ಶಿಕ್ಷಣ ಮತ್ತು ಸಂಸ್ಕಾರ ಶಿಕ್ಷಣ ಕೊಟ್ಟು ಅನುಭವ ಮಂಟಪದಲ್ಲಿ ಸಮಾನ ವೇದಿಕೆಯನ್ನು ಹಂಚಿಕೊಂಡು ವಚನ ಸಾಹಿತ್ಯ ನಿರ್ಮಾಣ ಮಾಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ;ಅಭಿಮಾನದ ಸಂಗತಿಯಾಗಿದೆ .

ಯುಗಪೂರುಷರಾದ ಬಸವಣ್ಣನವರು ಸತ್ಯಾನ್ವೇಷಣೆಯ ಮಾರ್ಗದಲ್ಲಿ ಬರೀ ಕಲ್ಲು ಮುಳ್ಳುಗಳನ್ನೇ ಕಂಡವರು. ಭೋಗದಲ್ಲಿ ತ್ಯಾಗ ಜೀವದ ಸವಿಯನುಂಡು ಬಾಳಿದವರು. ಶರಣರ ಚಳುವಳಿ ಮೂಲಕ ಮಾನವೀಯ ಮೌಲ್ಯಗಳನ್ನು ಸಮರ್ಥಿಸುವದೇ ಮುಖ್ಯ ಗುರಿ;ಧ್ಯೇಯ ವಾಗಿತ್ತು . ಮಾನವನ ವ್ಯಕ್ತಿತ್ವವನ್ನು ರೂಪಿಸುವ ,ಮೇಲಾಗಿ ಮಾನವನ ಜೀವನದ ಸಾಫಲ್ಯಕ್ಕಾಗಿ ಶ್ರಮಿಸಿದರು. ಸರ್ವ ಸಮಾನತೆಗಾಗಿ ಶಿಕ್ಷಣ ಮತ್ತು ಸಂಸ್ಕಾರದ ಮೌಲ್ಯಗಳನ್ನು ಪ್ರಜೆಗಳಿಗೆ ತಲುಪಿಸಲು ಸತತವಾಗಿ ಪ್ರಯತ್ನ ಮಾಡಿದರು.

ಅಸ್ಪೃಶರಿಗಾಗುವ ಅನ್ಯಾಯ, ದಬ್ಬಾಳಿಕೆ, ಶೋಷಣೆಗಳನ್ನು ಶಾಂತಿಪರವಾದ ಹೋರಾಟದ ಮುಖೇನ ನಿವಾರಿಸಿ ಅವರ ಮನ ಪರಿವರ್ತನೆ ಮಾಡುವ ಕಾರ್ಯ ಮಾಡಿದ್ದು ಸ್ಮರಣಿವಾದದು. ಮೂಢನಂಬಿಕೆ -ಅಂಧ
ಶ್ರದ್ಧೆ, -ಕಂದಾಚಾರ ಇತ್ಯಾದಿ ಸಾಮಾಜಿಕ ಮೌಢ್ಯತೆಯನ್ನು ತುಂಬಿಕೊಂಡು ಬದುಕುತ್ತಿದ್ದ ಜನಸಾಮಾನ್ಯರಿಗೆ ದಿವ್ಯ ಜ್ಞಾನ ಮೂಲಕ ವೈಚಾರಿಕ ಪ್ರಜ್ಞೆಯ ಬೆಳಕನ್ನು ಪ್ರಜ್ವಲಿಸಿದರು.

ಬಸವಣ್ಣನವರು ಪಂಚಾಚಾರ- ಷಟ್ಸ್ಥಲ- ಅಷ್ಟಾವರಣ ಸಿದ್ಧಾಂತಗಳಿಗೆ ಮಹತ್ವ ಕೊಟ್ಟವರು. ಸಾಂಸ್ಕೃತಿಕವಾಗಿ ಕನ್ನಡ ಸಾಹಿತ್ಯಕ್ಕೆ, ಕನ್ನಡನಾಡು ನುಡಿಗೆ ಮೌಲಿಕ ಕೊಡುಗೆ ನೀಡುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಇಂತಹ ಮಹಾನ ಸಾಧಕನ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ ಪ್ರಾತ:ಸ್ಮರಣೀರಾದ ಮಹಾತ್ಮ ಬಸವೇಶ್ವರನು ಸದಾ ಕಾಲ ನಾವು ಸ್ಮರಿಸಲೇಬೇಕು .

ಪ್ರಸ್ತುತ ಕಾಲ ಘಟ್ಟದಲ್ಲಿ ಬಸವಣ್ಣನವರ ತಾತ್ವಿಕ ಚಿಂತನೆಗಳನ್ನು ಇಂದು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗಬೇಕಾಗಿದೆ. ಕನ್ನಡ ನಾಡಿನ ಅಸ್ಮಿತೆರಾದ ‘ಬಸವಣ್ಣ ಸಾಂಸ್ಕೃತಿಕ ನಾಯಕ ‘ನಿಗೆ ಶಿವಶರಣ ಅನುವಾಯಿಗಳು ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜಾ ಕೈಂಕರ್ಯ ನೆರವೇರಿಸಿ ಅವರ ಮೌಲಿಕ ಚಿಂತನೆಗಳು, ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅನುಸರಿಸಿಕೊಂಡರೆ ಜಯಂತ್ಯುತ್ಸವಕ್ಕೆ ಅರ್ಥಪೂರ್ಣ,ಮೌಲ್ಯ ಬರುತ್ತದೆ.
ಹಲವು ಅಭಿದಾನಗಳನ್ನು ಹೊಂದಿದ ಮಹಾಮಾನವತಾವಾದಿ ಬಸವೇಶ್ವರ ವಿಶ್ವಕ್ಕೆ ಮಾದರಿಯಾದರು. ಸ್ಪೂರ್ತಿಯ ಸೆಲೆಯಾದರು. ನಮಗೆಲ್ಲ ಪ್ರೇರಕಶಕ್ತಿಯಾದರು.

(ವಿಭೂತಿ ಪುರುಷ ಶ್ರೀ ಬಸವೇಶ್ವರ ಜಯಂತ್ಯುತ್ಸವ ನಿಮಿತ್ತ ಬರೆದ ಲೇಖನವಿದು. )

🖋️
ಶ್ರೀ. ಶಶಿಕಾಂತ ಬ ತಾರದಾಳೆ .
ಕನ್ನಡ ಅಧ್ಯಾಪಕರು.
ಕೆ ಎಲ್ ಇ ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ, (ಸ್ವಾಯತ್ತ) ಬೆಳಗಾವಿ.