“ಕಾರ್ತಿಕದ ಕಗ್ಗತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿದಿಕ್ಕಾಗಿ ಎಂಟು ಶತಮಾನಗಳ ಹಿಂದೆ,
ಅಗ್ನಿ ಖಡ್ಗವನಂಥ ಓ ಆಧ್ಯಾತ್ಮ ಕ್ರಾಂತಿವೀರ,
ದೇವದಯೆಯೊಂದೇ ಹೇ ಧೀರಾವತಾರ, ಶ್ರೀ ಬಸವೇಶ್ವರ.”
ರಾಷ್ಟ್ರಕವಿ ಕುವೆಂಪುರವರ ಕವನದ ಈ ಸಾಲುಗಳು ನಾಡಿನ ಸಾಂಸ್ಕೃತಿಕ ಬದುಕಿಗೆ ವಿಶ್ವಗುರು ಬಸವಣ್ಣನವರ ಕೊಡುಗೆಯನ್ನು ಸ್ಮರಿಸುತ್ತವೆ. ಬಸವಣ್ಣನವರನ್ನು “ಕನ್ನಡದ ಸಾಂಸ್ಕೃತಿಕ ನಾಯಕ” ಎಂದು ಅಧಿಕೃತವಾಗಿ ಘೋಷಿಸಿರುವದು ಐತಿಹಾಸಿಕ ನಿರ್ಣಯ. ಜಗತ್ತು ಈವರೆಗೂ ಕಂಡು ಕೇಳರಿಯದ ಅಪೂರ್ವ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ, ಶೈಕ್ಷಣಿಕ, ಮೌಲಿಕ, ಸಾಂಸ್ಕೃತಿಕ ಕ್ರಾಂತಿಗೆ ಅಡಿಪಾಯ ಹಾಕಿ ಅದನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸಿದ್ದು 12ನೇ ಶತಮಾನದ ಶರಣಪರಂಪರೆ. ಈ ಪರಂಪರೆಯ ನಾಯಕ ಮಹಾಮಾನವತಾವಾದಿ, ಜಗಜ್ಯೋತಿ ಬಸವಣ್ಣನವರು.
ಮಾನವನ ಬೌದ್ಧಿಕ ಸಾಧನೆಯ ಒಟ್ಟಾರೆ ಅಭಿವ್ಯಕ್ತಿಗೆ ”ಸಂಸ್ಕೃತಿ” ಎನ್ನಬಹುದು. ಸಂಸ್ಕಾರ ಮತ್ತು ಸಂಸ್ಕೃತಿಗಳು ಒಂದಕ್ಕೊಂದು ಪೂರಕವಾಗಿವೆ. ಪ್ರತಿಯೊಂದು ಪ್ರದೇಶ-ರಾಜ್ಯ-ಭಾಷೆ-ದೇಶಗಳಿಗೆ ಅದರದೇ ವಿಶಿಷ್ಟವಾದ ಸಂಸ್ಕೃತಿ ಇರುವಂತದನ್ನು ಗಮನಿಸಬಹುದು. ಭಾರತವು ಬಹುಭಾಷೆ-ಸಂಸ್ಕೃತಿಯ ನಾಡಾಗಿ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನಮಾನವನ್ನು ಪಡೆದಿದೆ. ಭಾರತದ ಪ್ರತಿಯೊಂದು ರಾಜ್ಯ ಅಥವಾ ಪ್ರದೇಶಗಳು ತಮ್ಮದೇ ಆದ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಂದಿದೆ.
ಸುಮಾರು 2000ಕ್ಕಿಂತಲೂ ಅಧಿಕ ವರ್ಷಗಳ ಸಾಂಸ್ಕೃತಿಕ ಪರಂಪರೆ ಕನ್ನಡನಾಡಿಗೆ ಇದೆ. ಅನೇಕ ಕವಿಗಳು, ಶರಣರು, ಸಂತರು, ದಾರ್ಶನಿಕರು, ವಿದ್ವಾಂಸರು ತಮ್ಮ ಕೈಂಕರ್ಯಗಳಿಂದ ಅದನ್ನು ಸಮೃದ್ಧಗೊಳಿಸಿದ್ದಾರೆ. ಆದರೆ ಕನ್ನಡದ ದೇಸೀ ಸಂಸ್ಕೃತಿಯು ಮೂಲತಃ ಶ್ರಮಸಂಸ್ಕೃತಿಯಾಗಿದೆ. ಈ ಶ್ರಮಸಂಸ್ಕೃತಿಗೆ ಒಂದು ಸುವ್ಯವಸ್ಥಿತ ರೂಪವನ್ನು ಕೊಟ್ಟಿದ್ದು, ಬಸವಾದಿ ಶರಣರ ಕಾಯಕಸಂಸ್ಕೃತಿ. ಕನ್ನಡನಾಡಿನ ಅವಿಚಿನ್ನವಾದ ಸಾಂಸ್ಕೃತಿಕ ಪರಂಪರೆಗೆ ಬಸವಣ್ಣನವರೇ ನಾಯಕ.
ವಿಶ್ವಗುರು ಬಸವಣ್ಣನವರು ಕೇವಲ ಸಮಾಜಸುಧಾರಕ ಮಾತ್ರವಲ್ಲ “ಪರ್ಯಾಯ ಸಂಸ್ಕೃತಿಯ ನಿರ್ಮಾತೃ ನಾಯಕ”ರಾಗಿದ್ದಾರೆ. ಬಸವಾದಿ ಶರಣರಕ್ರಾಂತಿ ಕೇವಲ ವಿಚಾರಕ್ರಾಂತಿ ಮಾತ್ರವಲ್ಲ ಅದು ಸಂವೇದನಾಕ್ರಾಂತಿ. ಮಾನವನ ಸಂವೇದನಗಳಲ್ಲಿ ಬದಲಾವಣೆ ಆಗದೆ ಹೋದರೆ ಯಾವುದೂ ಸ್ಥಿರವಾಗಿ ನೆಲೆಗೊಳ್ಳುವುದಿಲ್ಲ. ಅದರೊಟ್ಟಿಗೆ ಭಾರತೀಯ ಸಮಾಜದ ಸಮಸ್ಯೆ ಹಾಗೂ ಸವಾಲುಗಳಿಗೆ ಕೇವಲ ಕಾನೂನಿನ ಮೂಲಕ ಪರಿಹಾರ ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವನ ಮಟ್ಟವನ್ನ ಸುಧಾರಿಸುವ, ಕುಟುಂಬದಲ್ಲಿ ಒಂದು ವ್ಯವಸ್ಥೆಯನ್ನು ಬಲಗೊಳಿಸುವ, ಸಮಾಜದಲ್ಲಿ ಏಕತೆಯನ್ನು ಸಾಧಿಸಿ ರಾಷ್ಟ್ರದಲ್ಲಿ ಭಾವೈಕ್ಯತೆಯನ್ನು ಕಂಡುಕೊಳ್ಳಲು ಸಾಂಸ್ಕೃತಿಕ ಅವಲಂಬನೆ ಅವಶ್ಯಕವಾಗಿದೆ.
“ಸಮರ್ಥ ನಾಯಕತ್ವ”ದ ಗುಣಲಕ್ಷಣಗಳು: ವಿನಯತೆ, ವಿಧೇಯತೆ, ಸದಾಚಾರ, ನಿರಹಂಕಾರ, ಸತ್ಯಶುದ್ಧ ನಡೆ-ನುಡಿ, ಸಾತ್ವಿಕತೆ, ಸರ್ವಸಮಭಾವದೃಷ್ಟಿ, ಸಮಷ್ಟಿಪ್ರಜ್ಞೆ, ಜೀವಕಾರುಣ್ಯ, ಸಂವೇದನಾಶೀಲತೆ, ನ್ಯಾಯ-ನಿಷ್ಟುರತೆ, ನಿಷ್ಪಕ್ಷಪಾತ, ದೂರದರ್ಶಿತ್ವ, ಸಮಯಪ್ರಜ್ಞೆ, ಕರ್ತವ್ಯನಿಷ್ಠೆ, ಸಂಯಮ, ಉತ್ತರದಾಯಿತ್ವ, ಸಂಘಟನಾ ಚಾತುರ್ಯ, ಸಂಕಲ್ಪಶಕ್ತಿ, ಛಲಗಾರಿಕೆ, ವಿವೇಕ, ವಿವೇಚನ ಶಕ್ತಿ, ವ್ಯಕ್ತಿಗೌರವ, ಸ್ವಾವಲಂಬಿತನ, ನಿರಂತರ ಕ್ರಿಯಾಶೀಲತೆ, ಪ್ರಾಮಾಣಿಕತೆ, ಜನರ ನೋವಿಗೆ ಕರಗುವ ಮನಸ್ಸು ಹಾಗೂ ಅದನ್ನು ಪರಿಹರಿಸಬಲ್ಲ ಇಚ್ಛಾಶಕ್ತಿ. ಹೀಗೆ ಬಸವಣ್ಣನವರ ವ್ಯಕ್ತಿತ್ವದ ಆಳ-ವಿಸ್ತಾರ ಇದಕ್ಕೂ ಒಂದು ಹೆಜ್ಜೆ ಮುಂದಿದೆ. ಬಸವಣ್ಣನವರನ್ನು ಸಮಕಾಲೀನ ಶರಣ-ಶರಣೆಯರು ಮೊದಲಗೊಂಡು, ತದನಂತರ ಬಂದ ವಚನಕಾರರು, ಕವಿಗಳು, ಜಾನಪದರು, ಈ ಶರಣಪರಂಪರೆಯ ಅರ್ಥಾತ್ ಶರಣಸಂಸ್ಕೃತಿಯ ನಾಯಕನೆಂದು ಒಪ್ಪಿಕೊಂಡಿದ್ದಾರೆ. ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರು ಬಸವಣ್ಣನವರನ್ನು “ಯುಗದ ಉತ್ಸಾಹ” ಎಂದು ಕರೆದಿದ್ದಾರೆ. ಆದ್ದಿಂದಲೇ ಬಸವಣ್ಣನವರು “ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲವೆಂಬ, ಬಾಗಿದ ತಲೆಯ, ಮುಗಿದ ಕೈಯಾಗಿ, ಬಚ್ಚಬರಿಯ ಬಸವನಾಗಿ” ಕೊನೆವರೆಗೂ ಇದ್ದುದ್ದೇ ಅಪ್ರತಿಮ ಸಂಗತಿ. ಅವರ ಪ್ರಮುಖ ಗುಣವೈಶಿಷ್ಟ್ಯವೆಂದರೆ “ನಿರಂತರ ಆತ್ಮಶೋಧ”. ಇಂತಹ ಆತ್ಮನಿರೀಕ್ಷಣೆಯಿಂದ ನಿತ್ಯವೂ ಬದಲಾವಣೆಗೆ ತೆರೆದುಕೊಂಡಿದ್ದರಿಂದಲೇ ಸಮರ್ಥನಾಯಕನಾಗಿ ರೂಪುಗೊಂಡಿದ್ದರು.
ಬಸವಣ್ಣನವರು ಕನ್ನಡ ಸಂಸ್ಕೃತಿಯ ಮೇಲೆ ಬೀರಿದ ಪ್ರಭಾವ ಅಪ್ರತಿಮವಾದದ್ದು. ಬಸವಪೂರ್ವದಲ್ಲಿ ಕನ್ನಡ ಸಾಹಿತ್ಯವು ಚಂಪೂ ಕಾವ್ಯ ಪ್ರಧಾನವಾಗಿ, ವಿದ್ವಾಂಸ ಮಾತ್ರರಿಂದ ರಚನೆ ಹಾಗೂ ಓದು ಇದ್ದುದು, ಆಡುಭಾಷೆಯಾದರೂ ಜನಸಾಮಾನ್ಯರು ಸಾಹಿತ್ಯಿಕವಾಗಿ ಅಂತರ ಕಾಯ್ದುಕೊಂಡಿದ್ದರು. ಆದರೆ ಬಸವಾದಿ ಶರಣರ “ವಚನಸಾಹಿತ್ಯ” ಆವರೆಗೂ ಪ್ರಚಲಿತವಿದ್ದ ಶಾಸ್ತ್ರಬದ್ಧ ಸಾಹಿತ್ಯದ ಚೌಕಟ್ಟನ್ನು ಮೀರಿ ಜನಸಾಮಾನ್ಯರು ತಮ್ಮ ಅನುಭವ-ಅನುಭಾವಗಳನ್ನು ಕ್ರೂಢೀಕರಿಸಿ ಒಂದು ವಿಶೇಷ ಸಾಹಿತ್ಯಪ್ರಕಾರವೇ ನಿರ್ಮಾಣವಾಯಿತು. ಆನಂತರದಲ್ಲಿ ನಿರ್ಮಾಣವಾದ ಕನ್ನಡಸಾಹಿತ್ಯ ಅತ್ಯಂತ ದೇಸಿ ಮಾದರಿಯಲ್ಲಿ ರಗಳೆ, ಜಾನಪದ, ಷಟ್ಪದಿಕಾವ್ಯ, ನವೋದಯ, ಬಂಡಾಯ ಮುಂತಾದ ಸಾಹಿತ್ಯ ಪ್ರಕಾರಗಳು ನಿರ್ಮಾಣವಾಗಿ ಇಡೀ ಕನ್ನಡಸಾಹಿತ್ಯವು ವಿವಿಧ ಆಯಾಮಗಳಲ್ಲಿ ಆವಿರ್ಭವಿಸಿತು. ಇದಕ್ಕೆ ಮೂಲಕಾರಣ ಬಸವಾದಿ ಶರಣರ ವಚನಸಾಹಿತ್ಯ̤
ಬಸವಪೂರ್ವದಲ್ಲಿ ಸಾಹಿತ್ಯದವಸ್ತು ರಾಮಾಯಣ, ಮಹಾಭಾರತ, ಜೈನಪುರಾಣ ಮುಂತಾದ ಕೃತಿಗಳನ್ನು ಆಧರಿಸಿದ್ದವು. ಶರಣರ ವಚನ ಕ್ರಾಂತಿಯ ನಂತರ ಬಂದ ಹರಿಹರ, ರಾಘವಾಂಕ, ಪಾಲ್ಕೂರಿಕಿ ಸೋಮನಾಥ, ಲಕ್ಕಣ್ಣ ದಂಡೇಶ, ಮುಂತಾದ ಕವಿಗಳು ಜನಸಾಮಾನ್ಯರನ್ನು ಕಾವ್ಯದ ವಸ್ತುವನ್ನಾಗಿಸಿದ್ದು ಒಂದು ಮಹತ್ವಪೂರ್ಣ ಬದಲಾವಣೆ. 13ನೇ ಶತಮಾನದ ತರುವಾಯ, ಸಾಮಾನ್ಯ ಕಾಯಕಜೀವಿಗಳಾಗಿದ್ದ ಅನೇಕ ಶರಣರ ಕುರಿತಾಗಿ ಕಾವ್ಯದ ಸೃಷ್ಟಿಯಾಗಿ, ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಮೆರಗನ್ನು ತಂದುಕೊಟ್ಟಿದ್ದು ಐತಿಹಾಸಿಕ ಸತ್ಯ.
ಕರ್ನಾಟಕ ಸಂಗೀತದ ಪಿತಾಮಹರೆನಿಸಿದ ದಾಸಶ್ರೇಷ್ಠರ ಸಾಹಿತ್ಯಕ್ಕೆ ಅಡಿಪಾಯವಾದದ್ದು ಶರಣಪರಂಪರೆಯ ವಚನಸಾಹಿತ್ಯ. ಶರಣರು ಕೇವಲ ವಚನಗಳನ್ನಷ್ಟೇ ರಚಿಸದೆ ರಾಗ-ತಾಳಗಳಿಗೆ ಹೊಂದಿಕೆಯಾಗುವಂತಹ ಸಾವಿರಾರು ಸ್ವರವಚನಗಳನ್ನು, ತ್ರಿಪದಿ, ಚೌಪದಿ ಮುಂತಾದ ವಚನೇತರ ಸಾಹಿತ್ಯವನ್ನು ರಚಿಸಿ ಕೇವಲ ಅನುಭಾವ ಪರಂಪರೆ ಮಾತ್ರವಲ್ಲ ಕರ್ನಾಟಕ ಸಂಗೀತ ಪರಂಪರೆಗೂ ಭದ್ರಬುನಾದಿಯನ್ನು ಹಾಕಿದವರು. ಈ ಬುನಾದಿಯ ಮೇಲೆ ಭವ್ಯಸೌಧವನ್ನು ಕಟ್ಟಿದವರು ದಾಸವರಣ್ಯರು. ದಾಸಪರಂಪರೆ ಮತ್ತು ಶರಣಪರಂಪರೆಯಲ್ಲಿಯ ಸಾಮ್ಯತೆಯನ್ನು ಗುರುತಿಸುತ್ತಾ, ಶರಣ ಚಳುವಳಿಯ ಭಕ್ತಿ-ಸಂಸ್ಕೃತಿಯ ಆಳವಾದ ಪ್ರಭಾವ ದಾಸಸಾಹಿತ್ಯದಲ್ಲಿದೆ.
ಬಸವಾದಿ ಶರಣಪರಂಪರೆಯ ಮಠಗಳಲ್ಲಿ ಕಳೆದ ೮00 ವರ್ಷಗಳ ಪರ್ಯಂತ ನಡೆದು ಬಂದಿರುವಂತಹ ಅನ್ನ-ಅಕ್ಷರ-ಜ್ಞಾನದಾಸೋಹ, ಇಡೀ ಒಂದು ಜನಾಂಗದ ಹಸಿವನ್ನು ನೀಗಿಸಿದ್ದು ಮಾತ್ರವಲ್ಲ, ಸುಶಿಕ್ಷಿತರನ್ನಾಗಿಸಿ, ಜವಾಬ್ದಾರಿಯುತ ಪ್ರಜೆಯನ್ನಾಗಿ ಮಾಡಿವೆ. ಇಷ್ಟೇ ಅಲ್ಲದೆ ಕರ್ನಾಟಕದ ಹಾಗೂ ಸುತ್ತಮುತ್ತುಲಿರುವ ಇತರೆ ಪರಂಪರೆಯ ಮಠ-ಮಂದಿರಗಳು ಶರಣಪರಂಪರೆಯ ಪ್ರೇರಣೆಯಿಂದಲೇ ಅಕ್ಷರ-ಅನ್ನ ದಾಸೋಹವನ್ನು ನಡೆಸುತ್ತಾ ಬಂದಿವೆ.
ಇಂದಿಗೂ ಪ್ರಚಲಿತವಿರುವ ಅನೇಕ ಜಾನಪದ ನೃತ್ಯಮೂಲಗಳಾದಂತಹ ವೀರಗಾಸೆ ಮುಂತಾದ ಕಲೆಗೆ ಮೂಲ ಪ್ರೇರಣೆ ಶರಣಪರಂಪರೆಯಾಗಿದೆ. ಶರಣಪರಂಪರೆಯು ಹೆಚ್ಚು ಪ್ರಚಲಿತವಾಗಿದ್ದ ಕರ್ನಾಟಕ, ಮಹಾರಾಷ್ಟ್ರ, ಅವಿಭಜಿತ ಆಂಧ್ರಪ್ರದೇಶ, ಮುಂತಾದ ರಾಜ್ಯಗಳು ಆರ್ಥಿಕವಾಗಿ ಸದೃಢವಾಗಿದ್ದು, ಪ್ರಗತಿಯನ್ನು ಸಾಧಿಸಿವೆ. ಮಾತ್ರವಲ್ಲ ಭಾರತದ ಒಕ್ಕೂಟಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿರುವುದಕ್ಕೆ ಪರೋಕ್ಷವಾಗಿ ಶರಣಪರಂಪರೆಯ ಕಾಯಕ-ದಾಸೋಹ-ಪ್ರಸಾದ ಪರಿಕಲ್ಪನೆಯ ಸಮುದಾಯ ಪ್ರಜ್ಞೆಯೇ ಕಾರಣ. ಉತ್ತರಭಾರತಕ್ಕೆ ಹೋಲಿಸಿದಾಗ ದಕ್ಷಿಣಭಾರತವು ಹೆಚ್ಚು ಶಾಂತಿ ಮತ್ತು ಪ್ರಗತಿ ಸಾಧಿಸಲು ಶರಣಪರಂಪರೆಯ ಪ್ರೇರಣೆಯನ್ನು ಅಲ್ಲಗೆಳೆಯಲಾಗದು. ಕನ್ನಡಸಂಸ್ಕೃತಿಯು ತನ್ನ ನೈಜತೆಯನ್ನು ಪಡೆಯಲು ಸಹಕಾರಿಯಾದ ಶರಣಸಂಸ್ಕೃತಿಯ ನಾಯಕರದ ವಿಶ್ವಗುರು ಬಸವಣ್ಣನವರನ್ನು “ಕನ್ನಡಸಂಸ್ಕೃತಿಯ ಅಸ್ಮಿತೆ”ಯ ದ್ಯೋತಕವಾಗಿ ಗುರುತಿಸಲಾಗುತ್ತದೆ.
ಸರಳತೆಯ ಸಾಕಾರಮೂರ್ತಿಯಾಗಿ, ಸದುವಿನಯ-ಸದ್ಗುಣಗಳ ಮೂರ್ತಸ್ವರೂಪರಾಗಿ, ಲೋಕವನ್ನೇ ಬದಲಿಸಬಲ್ಲ, ಸನ್ಮಾರ್ಗದತ್ತ ನಡೆಸಬಲ್ಲ ಕಾರಣಿಕ ಪುರುಷರಾಗಿರುವ ಬಸವಣ್ಣನವರು ಒಂದು ವಿಸ್ಮಯ. ಸ್ವಾತಂತ್ರ್ಯ ಸಮಾನತೆ, ಮಾನವೀಯತೆ ಮತ್ತು ವಿಶ್ವಬ್ರಾತೃತ್ವಗಳ ಆಧಾರದ ಮೇಲೆ ಸಮಾಜವನ್ನು 900 ವರ್ಷಗಳ ಹಿಂದೆ ನಿರ್ಮಿಸಿ ಹೋದ “ಶಕಪುರುಷ” ಬಸವಣ್ಣನವರು.
ಅನುಭವ ಮಂಟಪವೆಂಬ ಜಗತ್ತಿನ ಮೊಟ್ಟಮೊದಲ ಸಮಾಜೋ-ಧಾರ್ಮಿಕ-ಆಧ್ಯಾತ್ಮಿಕ ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ಮತ್ತು ಮಾನವ ಹಕ್ಕುಗಳ ಬೀಜಗಳು ಬಿತ್ತಲ್ಪಟ್ಟರು. ಅದು ಇಂದು ಹೆಮ್ಮರವಾಗಿ ಅದರ ಫಲಗಳನ್ನು ಅಂದಿನಿಂದ ಇಂದಿನ ಸಂವಿಧಾನದವರೆಗೂ ನೀಡುತಲಿರುವುದು ವಿಸ್ಮಯಕಾರಿ. 13ನೇ ಶತಮಾನದ ಆದಿಯಲ್ಲಿ ಬಂದ ಮ್ಯಾಗ್ನಾಕಾರ್ಟವನ್ನು ಪ್ರಜಾಪ್ರಭುತ್ವದ ತಾಯಿ ಎನ್ನುವುದಾದರೆ ಬಸವಣ್ಣನವರ ನೇತೃತ್ವದಲ್ಲಿ, ಅನುಭವ ಮಂಟಪದಲ್ಲಿ 770 ಅಮರಗಣಂಗಳಿಂದ ನಿರ್ಮಾಣವಾದ ವಚನಸಾಹಿತ್ಯ “ಪ್ರಜಾಪ್ರಭುತ್ವದ ತಂದೆ”. ವಿಶ್ವಸಾಹಿತ್ಯಕ್ಕೆ ಕನ್ನಡದ ಅಪೂರ್ವ ಕೊಡುಗೆ ವಚನಗಳು ಮತ್ತು ಶರಣ ಸಂಸ್ಕೃತಿ. ಅಂತೆಯೇ ಬಸವಣ್ಣನವರನ್ನು ಕನ್ನಡಸಾಹಿತ್ಯ ಪ್ರಕಾರದ ನಿರ್ಮಾಪಕರು ಮಾತ್ರವಲ್ಲ, ಕನ್ನಡ ಸಾಹಿತಿಗಳ, ಕನ್ನಡ ನವಸಂಸ್ಕೃತಿಯ ನಿರ್ಮಾತೃ ಎನ್ನಬಹುದು.
ವಿಶ್ವಗುರು ಬಸವಣ್ಣನವರು ಕನ್ನಡನಾಡಿನಲ್ಲಿ ಒಂದು ಪರ್ಯಾಯ ಸಂಸ್ಕೃತಿಯ ಉಗಮಕ್ಕೆ ಕಾರಣಿಭೂತರಾಗಿದ್ದು ಮಾತ್ರವಲ್ಲ ಆ ಸಂಸ್ಕೃತಿ ಬೆಳೆದು ಉತ್ಕೃಷ್ಟತೆಯನ್ನು ಸಾಧಿಸಲು, ತದನಂತರ ಅನೇಕ ಶತಮಾನಗಳವರೆಗೆ ಅನೇಕ ಸಾಹಿತ್ಯ-ಸಂಸ್ಕೃತಿಗಳ ಮೇಲೆ ಪ್ರಭಾವವನ್ನು ಬೀರಿದ್ದಾರೆ. ಶ್ರೇಣಿಕೃತ ವ್ಯವಸ್ಥೆಯಿಂದ ಸಮಸಮಾಜದತ್ತ, ಬಹುದೇವತೋಪಾಸನೆಯಿಂದ ಏಕದೇವೋಪಾಸನೆಯತ್ತ, ಕರ್ಮಸಿದ್ದಾಂತದಿಂದ ಕಾಯಕಸಿದ್ಧಾಂತದಡೆಗೆ, ದಾನ ಪರಂಪರೆಯಿಂದ ದಾಸೋಹ ಪರಂಪರೆಯೆಡೆಗೆ, ದೇವಭಾಷೆಯಿಂದ ಜನಭಾಷೆಯ ಶ್ರೇಷ್ಠತೆಯಡೆಗೆ, ಪುರುಷ ಪ್ರಧಾನ ವ್ಯವಸ್ಥೆಯಿಂದ ಮಹಿಳಾ-ಪುರುಷ ಸಮಾನತೆಯೆಡೆಗೆ, ಶೋಷಣೆಯಿಂದ ಹಕ್ಕಿನೆಡೆಗೆ, ಪರಲೋಕದಿಂದ ಇಹಲೋಕದಡೆಗೆ, ಜೀವವಿರೋಧಿ ನೆಲೆಯಿಂದ ಜೀವಕಾರುಣ್ಯದೊಡೆಗೆ ಬೆಸೆದ ಸಂಸ್ಕೃತಿಯೇ “ಶರಣಸಂಸ್ಕೃತಿ”ಯಾಗಿದೆ, ಅದುವೇ ಕನ್ನಡದ ಸಂಸ್ಕೃತಿಯ ಆಗರವಾಗಿದೆ. ಈ ಹಿನ್ನೆಲೆಯಲ್ಲಿ, ವಿಶ್ವಗುರು ಬಸವಣ್ಣನವರನ್ನು ಕನ್ನಡದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿರುವುದು ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡು, ವಿಶ್ವಮಟ್ಟದಲ್ಲಿ ಬೆಳೆಸಲು ರಹದಾರಿಯನ್ನು ನಿರ್ಮಿಸಿದಂತಾಗಿದೆ. ಬಸವಣ್ಣನವರ ವಿಚಾರಗಳು ನಮ್ಮ ನಡೆ-ನುಡಿಯಲ್ಲಿ ವಿಸ್ತಾರಗೊಂಡು, ನಮ್ಮ ಜೀವನಕ್ರಮವಾಗಿಸುವ ಪ್ರಯತ್ನ ಹಾಗೂ ಕನ್ನಡಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಸಂಕಲ್ಪ ನಮ್ಮದಾಗಲಿ.
ಡಾ. ಅವಿನಾಶ್ ಕವಿ, MBBS, MD, DNB, FDIAB, MNAMS,
ಸಹ ಪ್ರಾಧ್ಯಾಪಕ, ಕಮ್ಯುನಿಟಿ ಮೆಡಿಸಿನ್ ವಿಭಾಗ,
ಜೆಎನ್ ಎಂಸಿ , ಕಾಹೆರ, ಬೆಳಗಾವಿ,
