ಬೆಳಗಾವಿ: ‘ಬೆಳಗಾವಿ ರೈಲ್ವೆ ನಿಲ್ದಾಣವು ವರ್ಷದಿಂದ ವರ್ಷಕ್ಕೆ ಉನ್ನತಿಯತ್ತ ಸಾಗಿದೆ. ಪ್ರಯಾಣಿಕರಿಗೆ ಸಾಕಷ್ಟು ಸೌಕರ್ಯ ಒದಗಿಸಲಾಗಿದೆ’ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ‘ಸ್ಟೇಷನ್ ಮಹೋತ್ಸವ’ ಆಚರಣೆ ಹಾಗೂ ಬೆಳಗಾವಿ ರೈಲ್ವೆ ನಿಲ್ದಾಣ ಹಾಗೂ ಬೆಳಗಾವಿ ರೈಲ್ವೆ ಇತಿಹಾಸ ತಿಳಿಸುವ ಭಾವಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ‘60 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ಅರ್ಧ ದರದ ರಿಯಾಯಿತಿ ನೀಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

‘ಜಿಲ್ಲೆಯಲ್ಲಿ ರೈಲು ಸೇವೆಯು 1887ರಲ್ಲಿ ಆರಂಭಿಸಲಾಗಿದೆ. ಲೋಂಡಾ- ಬೆಳಗಾವಿ ಮಾರ್ಗವನ್ನು 1887ರ ಮಾರ್ಚ್ 21ರಂದು ಹಾಗೂ ಬೆಳಗಾವಿ- ಮಿರಜ್ ಮಾರ್ಗದಲ್ಲಿ ಮೊದಲ ರೈಲ್ವೆ ಅದೇ ವರ್ಷ ಡಿ.22 ರಂದು ಸಂಚರಿಸಿತು. ಈ ಭಾಗದಲ್ಲಿ 136 ವರ್ಷಗಳ ರೈಲ್ವೆ ಸೇವೆ ನೋಡುತ್ತಿರುವ ಈ ರೈಲ್ವೆ ನಿಲ್ದಾಣವನ್ನು ಸಚಿವರಾಗಿದ್ದ ಸುರೇಶ ಅಂಗಡಿ ಅವರು ಸಂಸದರಾಗಿದ್ದಾಗ ₹210 ಕೋಟಿ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ. ರಾಜ್ಯದಲ್ಲಿರುವ ಸುಸಜ್ಜಿತ ರೈಲ್ವೆ ನಿಲ್ದಾಣಗಳಲ್ಲಿ ಬೆಳಗಾವಿಯೂ ಒಂದಾಗಿದೆ’ ಎಂದರು.

ಹುಬ್ಬಳ್ಳಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷ ಕುಮಾರ ವರ್ಮಾ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂತೋಷ ಹೆಗಡೆ, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರಾದ ಪ್ರಸಾದ ಕುಲಕರ್ಣಿ, ಮಹಂತೇಶ ವಕ್ಕುಂದ, ಪಾಲಿಕೆ ಸದಸ್ಯ ರಾಜಶೇಖರ ಡೋಣಿ, ಮುರುಘೇಂದ್ರಗೌಡ ಪಾಟೀಲ, ಧಿಗ್ವಿಜಯ ಸಿದ್ನಾಳ ಹಲವರು ಇದ್ದರು.