ಸುವರ್ಣಸೌಧ ಬೆಳಗಾವಿ : ಸೋಮವಾರದ ವಿಧಾನ ಸಭಾ ಕಲಾಪದಲ್ಲಿ 5 ಪ್ರಮುಖ ವಿಧೇಯಕಗಳಿಗೆ ಅನುಮೋದನೆ ನೀಡಿ ಅಂಗೀಕರಿಸಲಾಗಿದೆ.
ನಂತರ 2023ನೇ ಸಾಲಿನ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ, 1994, 2000 ಹಾಗೂ 2011 ರಿಂದಲೂ ರಾಜ್ಯದಲ್ಲಿ ಸುಮಾರು 54 ವಿವಿಧ ದಾಖಲೆಗಳ ಮೇಲೆ ವಿಧಿಸಲಾಗುತ್ತಿದ್ದ ಸ್ಟಾಂಪು ಮೇಲಿನ ಶುಲ್ಕವನ್ನು ಬದಲಾಯಿಸಿಲ್ಲ. ಈ ಶುಲ್ಕಗಳ ಮೇಲಿನ ದರ ಪರಿಷ್ಕರಣೆ ಮಾಡುವ ಸಲುವಾಗಿ ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ. ಸದನ ಇದಕ್ಕೆ ಅನುಮೊದನೆ ನೀಡುವಂತೆ ಕೋರಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, 2023ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿ, ಕೇಂದ್ರ ಜಿ.ಎಸ್.ಟಿ. ಕೌನ್ಸಿಲ್ ಸೂಚಿಸಿದ ಆಧಾರದಲ್ಲಿ ತಿದ್ದುಪಡಿ ವಿಧೇಯ ಮಂಡಿಸಲಾಗಿದೆ.
ಕ್ಯಾಸಿನೋ, ಆನ್ಲೈನ್ ಬೆಟ್ಟಿಂಗ್ ನಿಯಂತ್ರಿಸಲು ವಿಧೇಯಕ ಸಹಕಾರಿಯಾಗಲಿದೆ ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪರವಾಗಿ 2023ನೇ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿದರು.
ಈ ಮೊದಲು ರಾಜ್ಯದಲ್ಲಿ ವೈದ್ಯಕೀಯ ಪದವಿ ಪೂರೈಸಿದವರು ಕಡ್ಡಾಯವಾಗಿ ಒಂದು ವರ್ಷಗಳ ಗ್ರಾಮೀಣ ಸೇವೆ ಸಲ್ಲಿಸಬೇಕಾಗಿತ್ತು. ಸದ್ಯ ಸರ್ಕಾರ ಖಾಲಿ ಇರುವ ವೈದ್ಯರ ನೇಮಕಾತಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳುತ್ತಿದೆ. ಇದರೊಂದಿಗೆ ಸ್ನಾತಕೋತ್ತರ ಅಧ್ಯಯನ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಾಗಿ ಇರುವುದರಿಂದ ಕಡ್ಡಾಯ ಸೇವೆ ಬದಲಿಗೆ ರಾಜ್ಯ ಸರ್ಕಾರ ಸೂಚಿಸಿದಲ್ಲಿ ಸೇವೆ ಸಲ್ಲಿಸುವ ಅವಕಾಶ ತಿದ್ದುಪಡಿ ಅವಕಾಶದಲ್ಲಿ ಕಲ್ಪಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪರವಾಗಿ 2023ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿದರು.
ರಾಜ್ಯದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಪ್ರತಿ ಹದಿನೆಂಟು ಸಾವಿರದಿಂದ ಇಪ್ಪತ್ತೈದು ಸಾವಿರದ ನಡುವಣ ಗ್ರಾಮೀಣ ಜನಸಂಖ್ಯೆಗೆ ಓರ್ವ ಜಿಲ್ಲಾ ಪಂಚಾಯತಿ ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಿ ತಿದ್ದುಪಡಿ ವಿಧೇಯಕ ತರಲಾಗಿದೆ. ಏಳು ಲಕ್ಷಕ್ಕಿಂತ ಒಂಬತ್ತು ಲಕ್ಷದ ಐವತ್ತು ಸಾವಿರವನ್ನು ಮೀರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯ ಸಂದರ್ಭದಲ್ಲಿ 28 ಜಿಲ್ಲಾ ಪಂಚಾಯತಿ ಸದಸ್ಯರು ಇರಲು ಮಿತಿ ಹೆಚ್ಚಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
ಶಾಸಕ ಪೊನ್ನಣ್ಣ, ಡಾ.ಮಂಥರ್ ಗೌಡ, ಮಲೆನಾಡು ಭಾಗದಲ್ಲಿ ಹದಿನೇಳು ಸಾವಿರದಿಂದ ಇಪ್ಪತ್ತೈದು ಸಾವಿರದ ನಡುವಣ ಗ್ರಾಮೀಣ ಜನಸಂಖ್ಯೆಗೆ ಓರ್ವ ಜಿಲ್ಲಾ ಪಂಚಾಯತಿ ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಿ ತಿದ್ದುಪಡಿ ಮಾಡಬೇಕು ಎಂದು ಕೋರಿದರು.
ರೋಣ ಶಾಸಕ ಜಿ.ಎಸ್.ಪಾಟೀಲ್ ರಾಜ್ಯದ ಎಲ್ಲಡೆ ಇಪ್ಪತ್ತೈದು ಸಾವಿರದಿಂದ ಮುವತ್ತೈದು ಸಾವಿರದ ನಡುವಣ ಗ್ರಾಮೀಣ ಜನಸಂಖ್ಯೆಗೆ ಓರ್ವ ಜಿಲ್ಲಾ ಪಂಚಾಯತಿ ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ವ್ಯಾಪ್ತಿಗೆ ಒಳಪಟ್ಟಂತೆ ಇರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬದಲಿಗೆ, ಕರಾವಳಿ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ವಿಧೇಯಕವನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಸದನದಲ್ಲಿ ಪರ್ಯಾಲೋಚನೆಗೆ ಮಂಡಿಸಿದರು.
ಚರ್ಚೆಗಳ ತರುವಾಯ ವಿಧೇಯಕಗಳನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಸದನ ಮುಂದೆ ತಂದರು. ಸದನವು ತನ್ನ ಅನುಮೋದನೆಯೊಂದಿಗೆ ಅಂಗೀಕಾರ ನೀಡಿತು. ವಿಧಾನ ಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳು ಇದೇ ಅಧಿವೇಶನದಲ್ಲಿ ವಿಧಾನ ಪರಿಷತ್ನಲ್ಲಿ ಚರ್ಚೆಗೆ ಬರಲಿವೆ.