ಬೆಳಗಾವಿ: ‘ಮುಂಬರುವ ಎರಡೂವರೆ ದಶಕದ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸ್ಪಷ್ಟ ದಿಕ್ಸೂಚಿ ಹಾಕಿಕೊಂಡು ಸಮಗ್ರ ಅಭಿವೃದ್ಧಿಯ ದಾರಿಯಲ್ಲಿ ನಡೆದು, ಕರ್ನಾಟಕವನ್ನು ಮಹಾನ ರಾಜ್ಯವನ್ನಾಗಿ ನಿರ್ಮಿಸಬೇಕು’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಸಲಹೆ ನೀಡಿದರು.
ಸುವರ್ಣಸೌಧದ ಮುಂದೆ ಮಂಗಳವಾರ ಸಂಜೆ ನಡೆದ ‘ಸುವರ್ಣ ಕರ್ನಾಟಕ’ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕರ್ನಾಟಕವು ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ. ಇಲ್ಲಿನ ಉದ್ಯೋಗಶೀಲತೆಗೆ ಸಾಕ್ಷಿ ಇದು. ಉತ್ತರದ ಬೆಳಗಾವಿಯಿಂದ ದಕ್ಷಿಣದ ಬೆಂಗಳೂರಿನವರೆಗೆ ನಾಡು ವೈವಿಧ್ಯಮಯ ಐತಿಹಾಸಿಕ, ನೈಸರ್ಗಿಕ ತಾಣಗಳನ್ನು ಹೊಂದಿದೆ’ ಎಂದರು.
‘ಕಳೆದ 50 ವರ್ಷಗಳ ಅವಧಿಯಲ್ಲಿ ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ. ಪ್ರಾಚೀನ ಹಾಗೂ ಮಧ್ಯಕಾಲೀನ‌ ಇತಿಹಾಸದ ಪುಟಗಳನ್ನು ತಿರುವಿದಾಗ ಈ ನಾಡು ಭವ್ಯ ಪರಂಪರೆ, ಭೌಗೋಳಿಕ ವ್ಯಾಪ್ತಿ ಹೊಂದಿತ್ತು ಎಂದು ತಿಳಿಯುತ್ತದೆ’ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ತ್ಯಾಗ ಮತ್ತು ಬಲಿದಾನದ ಮೂಲಕ ನಾಡು ಏಕೀಕರಣಗೊಂಡು ಕನ್ನಡನಾಡು ಉದಯವಾಯಿತು. ಇದಕ್ಕೆ ಬಲಿದಾನ ಮಾಡಿದ ಎಲ್ಲರನ್ನೂ ನಾವು ನೆನೆಯಬೇಕಿದೆ’ ಎಂದು ತಿಳಿಸಿದರು.
‘ನಾನು ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದೆ. ಕನ್ನಡ ಆಡಳಿತ ಭಾಷೆಯಾಗುವದಕ್ಕೆ ಶ್ರಮಿಸಿದ್ದೇವೆ. ಸಮಸ್ತ ಕನ್ನಡಿಗರು ಮಾತೃಭಾಷೆ ಮೇಲಿನ ಅಭಿಮಾನವನ್ನು ಹೆಚ್ವಿಸಿಕೊಂಡಾಗ ಮಾತ್ರ ಕನ್ನಡದ ಬದುಕು ಇನ್ನಷ್ಟು ವಿಸ್ತರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘1973ರಲ್ಲಿ ಡಿ.ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಐತಿಹಾಸಿಕ ಕಾರ್ಯ. ಭಾಷೆಯ ಅಭಿಮಾನ ಇರಲಿ, ದುರಭಿಮಾನ ಇರಬಾರದು. ಯಾವುದೇ ಭಾಷೆ ಕಲಿಯಬಹುದು ನಮ್ಮ ಮಾತೃ ಭಾಷೆ ಮರೆಯಬಾರದು’ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಚ್.ಕೆ.ಪಾಟೀಲ, ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌, ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ.ಎಚ್.ಶಂಕರಮೂರ್ತಿ, ವೀರಣ್ಣ ಮತ್ತಿಕಟ್ಟಿ, ಪ್ರೊ.ಬಿ.ಕೆ.ಚಂದ್ರಶೇಖರ, ವಿ.ಆರ್.ಸುದರ್ಶನ, ಬಿ.ಎಲ್.ಶಂಕರ್, ಮಾಜಿ ಸಭಾಧ್ಯಕ್ಷರಾದ ಜಗದೀಶ ಶೆಟ್ಟರ, ಕೆ.ಜಿ.ಬೋಪಯ್ಯ, ಕೆ.ಬಿ.ಕೋಳಿವಾಡ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸನ್ಮಾನಿಸಲಾಯಿತು.
ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.