ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದಲ್ಲಿ ನೀರು ಸೋರುತ್ತಿರುವ ವಿಚಾರಕ್ಕೆ ಪ್ರಕರಣ ದಾಖಲಿಸಿಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಭಾಗಿದಾರರನ್ನಾಗಿ ಮಾಡಿ ನೋಟಿಸ್ ನೀಡಲಾಗುತ್ತದೆ ಲೋಕಾಯುಕ್ತ ನ್ಯಾಯಮೂರ್ತಿ ಬಿ‌‌.ಎಸ್.ಪಾಟೀಲ ತಿಳಿಸಿದರು.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಇಂದು ತಮ್ಮ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,
ಅತೀ ಹೆಚ್ಚು ಮಳೆ ಆಗುವ ಬೆಳಗಾವಿಯಲ್ಲಿ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್ ಅತ್ಯಂತ ಹಳೆಯ ಕಟ್ಟಡವಾಗಿದ್ದು, ಮಳೆಯಿಂದ ನೀರು ಸೋರುತ್ತಿದೆ. ಅದನ್ನು ತಡೆಗಟ್ಟುವುದಕ್ಕೆ ಮೊದಲ ಆಧ್ಯತೆ ನೀಡಬೇಕು. ಯಾಕೆಂದರೆ ಎಲ್ಲಾ ಕಡೆ ವಿದ್ಯುತ್ ಪಾಯಿಂಟ್ ಗಳು ಇರುತ್ತವೆ. ಇಲ್ಲಿ ತಾಯಿ ಮತ್ತು‌ ಮಕ್ಕಳ ಘಟಕಗಳಿವೆ. ಏನಾದರೂ ಬೆಂಕಿ ಅನಾಹುತ ಸಂಭವಿಸಿ ಯಾರದಾರೂ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಇಲ್ಲಿ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳು ಇಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ, ನಿರ್ದೇಶಕರು, ಬೆಳಗಾವಿ ನಿರ್ದೇಶಕರನ್ನು ಭಾಗಿದಾರರನ್ನಾಗಿ ಮಾಡಿ ನೋಟಿಸ್ ನೀಡಲಾಗುತ್ತದೆ ಎಂದರು.
ಅದೇರೀತಿ ಔಷಧಿಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಂಡು ಬಂದಿಲ್ಲ. ಒಂದು ದಿನದಲ್ಲಿ ಓರ್ವ ರೋಗಿಗೆ ಎಷ್ಟು ಮತ್ತು ಯಾವ ಔಷಧಿ ಕೊಟ್ಟಿದ್ದಿರಿ ಎಂಬ ಬಗ್ಗೆ ಇಲ್ಲಿ ದಾಖಲಾಗಿಲ್ಲ. ಸ್ಲೀಪ್ ನೋಡಿ ಹೇಳಬೇಕು ಅಂತಾ ಇಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಇದರಿಂದ ಪಾರದರ್ಶಕತೆ ಕಂಡು ಬರುವುದಿಲ್ಲ. ಹಾಗಾಗಿ, ಎಲ್ಲಾ ವಿವರವನ್ನು ಡಿಜಿಟಲೀಕರಣ ಮಾಡುವಂತೆ ಸೂಚಿಸಿದ್ದೇವೆ. ರೋಗಿ ಯಾರು..? ಎಷ್ಟು ಔಷಧಿ ಕೊಟ್ಟಿರಿ..? ಇಲ್ಲಿ ಎಷ್ಟು ಕೊಟ್ಟಿದ್ದಿರಿ..? ಹೊರಗಡೆಯಿಂದ ಎಷ್ಟು ತೆಗೆದುಕೊಂಡು ಬರಲು ಹೇಳಿದ್ದಿರಿ ಎಂಬ ಎಲ್ಲಾ ಮಾಹಿತಿ ಇಲ್ಲಿರಬೇಕು. ಇಲ್ಲದಿದ್ದರೆ ಔಷಧಿ ಸೋರಿಕೆ ಆಗುತ್ತದೆ. ಈ ವಿಚಾರದಲ್ಲಿ ಅವರಿಗೆ ನೋಟಿಸ್ ನೀಡಲಿದ್ದು, ವ್ಯವಸ್ಥೆ ಸರಿಪಡಿಸಲು ಒಂದು ತಿಂಗಳು ಕಾಲಾವಕಾಶ ಕೇಳಿದ್ದಾರೆ ಎಂದು ನ್ಯಾಯಮೂರ್ತಿ
ಬಿ.ಎಸ್.ಪಾಟೀಲ ವಿವರಿಸಿದರು.
ಔಷಧಿ ವಿತರಣಾ ಕೇಂದ್ರ ಸೇರಿ ಮತ್ತಿತರ ಕಡೆಗಳಲ್ಲಿ ಉದ್ದನೆಯ ಸಾಲು ಕಂಡು ಬರುತ್ತಿವೆ. ಹಾಗಾಗಿ, ಹೆಚ್ಚು ಕೇಂದ್ರಗಳನ್ನು ತೆರೆದು, ರೋಗಿಗಳಿಗೆ ತ್ವರಿತವಾಗಿ ಸೇವೆ ಒದಗಿಸುವಂತೆ ಸೂಚಿಸಿದ್ದೇವೆ. ಇಲ್ಲಿನ ಸಿಬ್ಬಂದಿಗಳ ಕೊರತೆ ಇದೆ. ಹಾಗಾಗಿ, ಅವುಗಳನ್ನು ಭರ್ತಿ ಮಾಡಬೇಕಿದೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಬೇಕು ಎಂದರು.
ಬೆಳಗಾವಿ ಜಿಲ್ಲೆ ಮತ್ತು ಎಲ್ಲಾ ತಾಲ್ಲೂಕುಗಳ ಸುಮಾರು 250 ಅಧಿಕಾರಿಗಳೊಂದಿಗೆ ಇಂದು ಬೆಳಿಗ್ಗೆ ಸಭೆ ಮಾಡಿದ್ದೇನೆ. ಅಧಿಕಾರಿಗಳು ಮತ್ತು ಇಲಾಖೆಗಳ ಮೇಲೆ ಯಾವ ಪ್ರಕರಣಗಳು ದಾಖಲಾಗಿವೆ..? ಸಾರ್ವಜನಿಕವಾಗಿ ಮಹತ್ವ ಇರುವ ಪ್ರಕರಣಗಳ ಕುರಿತು ಚರ್ಚೆ ಮಾಡಿದ್ದೇನೆ. ಮಾಡಬೇಕಾದ ಕೆಲಸ, ಕಾರ್ಯವೈಖರಿ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಾರ್ವಜನಿಕ ಸೇವೆಯಲ್ಲಿ ಬೆಳಗಾವಿಯನ್ನು ಮಾದರಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.
ನಮ್ಮ 8 ತಂಡಗಳಾಗಿ ಬೆಳಗಾವಿಯ ವಿವಿಧ ಇಲಾಖೆಗಳಿಗೆ ನಾವು ಭೇಟಿ ನೀಡುತ್ತಿದ್ದೇವೆ. ಎಡಿಎಲ್ಆರ್, ಸಾರಿಗೆ ಅಬಕಾರಿ ಇಲಾಖೆಗಳು, ಮಹಾನಗರ ಪಾಲಿಕೆ, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಎಲ್ಲೆಲ್ಲಿ ಲೋಪದೋಷಗಳು ಕಂಡು ಬರುತ್ತವೋ ಅಲ್ಲೆಲ್ಲಾ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ವಿಳಂಬ ಮತ್ತು ಕಳಪೆ ಕಾಮಗಾರಿ ವಿಳಂಬ ಕುರಿತ ಮಾಧ್ಯಮಗಳ ಪ್ರಶ್ನೆಗೆ ನಮಗೆ ದೂರು ಕೊಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತೇವೆ. ಸರ್ಕಾರದ ಹಣ ಪೋಲಾಗಲು ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸ್ಪಷ್ಟಪಡಿಸಿದರು.