ಬೆಳಗಾವಿ: ಬೆಳಗಾವಿ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯೊಂದರಲ್ಲಿ ವ್ಯಕ್ತಿಯೋರ್ವ 2 ವರ್ಷದ ಹಿಂದೆ 5 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಅಮಾನುಷ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2023ರ ಅಕ್ಟೋಬರ್ 5ರಂದು ಈ ಘಟನೆ ನಡೆದಿತ್ತು. ಈ ಘಟನೆಯ ಕುರಿತು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ನಿನ್ನೆ ಮಂಗಳವಾರ ತಮ್ಮ ಎಕ್ಸ್ ಖಾತೆಯ ಮೂಲಕ ಸಾರ್ವಜನಿಕವಾಗಿ ಪೋಸ್ಟ್ ಮಾಡಿದ್ದರು. 22 ವರ್ಷದ ತುಫೇಲ್ ಅಹ್ಮದ್ ನಾಗರ್ಚಿ ಎಂಬಾತ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಮಸೀದಿಯೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಕ್ಷ್ಯವನ್ನು ಪುನೀತ್ ಕೆರೆಹಳ್ಳಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ತನಿಖೆ ನಡೆಸಿ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದರು.
ಬಾಲಕಿಯ ತಂದೆ, ತಮ್ಮ ಮಗಳಿಗೆ ಆಗಿರುವ ಅನ್ಯಾಯದ ಕುರಿತು ಪುನೀತ್ ಕೆರೆಹಳ್ಳಿಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಕುರಿತು ತಂದೆಯೊಂದಿಗೆ ಮಾತನಾಡಿದ ಪುನೀತ್, ಘಟನೆಯ ವಿಡಿಯೋ ಸಾಕ್ಷ್ಯವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಉತ್ತರ ವಲಯ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.
ಸುದ್ದಿ ಗೊತ್ತಾಗುತ್ತಿದ್ದಂತೆ ಸಿಸಿಟಿವಿ ವಿಡಿಯೋ ಸಾಕ್ಷ್ಯವನ್ನು ಆಧರಿಸಿ ಮುರಗೋಡ ಪೊಲೀಸರು ತನಿಖೆ ಶುರು ಮಾಡಿದರು. ಆರಂಭದಲ್ಲಿ ಬಾಲಕಿಯ ಕುಟುಂಬಸ್ಥರು, ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ದೂರು ಕೊಡಲು ಹಿಂದೇಟು ಹಾಕಿದ್ದರು. ಅಲ್ಲದೇ ಮಸೀದಿಯಿಂದ ದೂರು ನೀಡದಂತೆ ಬಾಲಕಿ ಪೋಷಕರು ತಡೆದಿದ್ದರು ಎಂಬುದು ಪೊಲೀಸರಿಂದ ತಿಳಿದು ಬಂದಿದೆ. ಘಟನೆಯ ಕುರಿತು ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದು, ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡ ರಚಿಸಿ, ಬುಧವಾರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ತಂದೆ–ತಾಯಿ ಜೊತೆಗೆ ಜಗಳ ಮಾಡಿಕೊಂಡು ಚಿಕ್ಕಮ್ಮನ ಮನೆಗೆ ಬಂದಿದ್ದ ಆರೋಪಿ ಈ ದೃಷ್ಕೃತ್ಯ ಎಸಗಿದ್ದಾನೆ. ಇದರಲ್ಲಿ ಮಸೀದಿಯವರು ನೇರ ಆರೋಪಿಗಳಾಗಿಲ್ಲ. ಸಂಧಾನ ಮಾಡಿ ಪ್ರಕರಣ ಮುಚ್ಚಲು ಯತ್ನಿಸಿದವರನ್ನು ವಿಚಾರಣೆ ಮಾಡಲಾಗುತ್ತಿದೆ. 2024ರ ಜುಲೈ 1ಕ್ಕಿಂತ ಮುಂಚೆ ಆಗಿದ್ದರಿಂದ ಐಪಿಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ದೂರು ನೀಡುವಂತೆ ಪೊಲೀಸರು ಬಾಲಕಿಯ ಪಾಲಕರಿಗೆ ಮನವಿ ಮಾಡಿದರೂ ಅವರು ನಿರಾಕರಿಸಿದ್ದಾರೆ. ಆದ್ದರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ, ಅಂಗನವಾಡಿ ಕಾರ್ಯಕರ್ತೆಯ ಮೂಲಕ ದೂರು ದಾಖಲಿಸಿಕೊಳ್ಳಲಾಗಿದೆ. ಐದು ವರ್ಷದ ಪುಟ್ಟ ಬಾಲಕಿಯ ಮೇಲೆ ನಡೆದ ಈ ಕಾಮುಕ ಕೃತ್ಯ ಅತ್ಯಂತ ಖಂಡನೀಯ. ಸಿಸಿಟಿವಿ ಸಾಕ್ಷ್ಯದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಕಾನೂನಿನ ಪ್ರಕಾರ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಭೀಮಾಶಂಕರ ಗುಳೇದ ಹೇಳಿದರು.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
