ಬೆಳಗಾವಿ: ‘ಜಿಲ್ಲೆಯ ಎಲ್ಲ ಹಾಸ್ಟೆಲ್‌ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡಲೇ ಪಾವತಿ ಮಾಡಬೇಕು. ವಿದ್ಯಾರ್ಥಿಗಳ ಆಧಾರ್‌ ಕಾರ್ಡ್‌ ಸೀಡಿಂಗ್ ಮುಗಿಸಬೇಕು. 15 ದಿನಗಳ ಒಳಗೆ ಈ ಎರಡೂ ಕೆಲಸಗಳು ಆಗಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರಿಂದಿಲ್ಲಿ ಸೂಚನೆ ನೀಡಿದರು.

ನಗರದಲ್ಲಿಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ವಸತಿ ನಿಲಯಗಳ ಪ್ರವೇಶಾತಿಯಲ್ಲಿ ಯಾವುದೇ ಗೊಂದಲ ಆಗದಂತೆ ನಿಗಾ ವಹಿಸಬೇಕು. ವಾರ್ಡನ್‌ಗಳ ಸಭೆ ಜರುಗಿಸಿ ಕಾಲಮಿತಿಯೊಳಗೆ ಪ್ರವೇಶಾತಿ ಕುರಿತು ಸ್ವೀಕೃತವಾದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಬೇಕು. ವಸತಿ ನಿಲಯಗಳಲ್ಲಿನ ಸೌಕರ್ಯಗಳ ಕುರಿತು ಸಂಬಂಧಿಸಿದ ನೋಡಲ್ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು’ ಎಂದರು.

‘ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಸಾರ್ವಜನಿಕರ ಸಮಸ್ಯೆಗಳ ತ್ವರಿತ ಪರಿಹಾಕ್ಕೆ ಮುಂದಾಗಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿಯಮಿತವಾಗಿ ಸಂಚರಿಸಿ, ತಮ್ಮ ಇಲಾಖೆಗಳಿಂದ ಜರುಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸಿ’ ಎಂದೂ ತಿಳಿಸಿದರು.

‘ಈಗಾಗಲೇ ಪ್ರತಿ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿಲಾಗಿದ್ದು, ಅವರು ಪ್ರತಿ ತಿಂಗಳು ತಪ್ಪದೇ ತಾಲ್ಲೂಕುಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಮುಖ್ಯಮಂತ್ರಿ ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ದೂರುಗಳನ್ನು ಆಯಾ ಇಲಾಖಾ ಅಧಿಕಾರಿಗಳು ಕೂಡಲೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು’ ಎಂದರು.

‘ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಹೊಸದಾಗಿ ಮಂಜೂರಾಗಿರುವ ವಸತಿ ನಿಲಯಗಳ ಪ್ರಾರಂಭಕ್ಕೆ ಸ್ವಂತ ಕಟ್ಟಡ ಇಲ್ಲದಿದ್ದರೆ ಬಾಡಿಗೆ ಪಡೆದು ಪ್ರಾರಂಭಿಸಬೇಕು. ಬಾಡಿಗೆಯನ್ನು ಆಯಾ ತಿಂಗಳಿನಲ್ಲಿ ಪಾವತಿಗೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಆಗಬೇಕು. ಈ ಕುರಿತು ಸಂಬಂಧಿಸಿದ ನೋಡಲ್ ಅಧಿಕಾರಿಗಳು ಗಮನ ಹರಿಸಬೇಕು’ ಎಂದೂ ಸೂಚನೆ ನೀಡಿದರು.

ಕುಡಿಯುವ ನೀರು ಪರೀಕ್ಷೆಗೆ ನಿರ್ದೇಶನ: ‘ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರಿನ ಪರೀಕ್ಷೆಗಳನ್ನು ನಿಯಮಿತವಾಗಿ ಜರುಗಿಸಬೇಕು. ಕುಡಿಯುವ ನೀರು ಸರಬರಾಜುಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಮಟ್ಟದ ಟಾಸ್ಕ ಫೋರ್ಸ್‌ ಸಮಿತಿ ರಚಿಸಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಕೂಡ ಸಮಿತಿಗಳನ್ನು ರಚಿಸಿ ನೀರು ಪರೀಕ್ಷೆ, ತೆಗೆದುಕೊಂಡ ಕ್ರಮಗಳ ಕುರಿತು ಸಮಗ್ರ ವರದಿ ನೀಡಬೇಕು’ ಎಂದು ರಾಹುಲ್‌ ಶಿಂಧೆ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಬಸವರಾಜ ಹೆಗ್ಗನಾಯಕ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೆಚೂರ, ಡಿಡಿಪಿಐ ಮೋಹನ ಹಂಚಾಟೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಬ್ದುಲ್‌ ರಶೀದ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ಸೇರಿದಂತೆ ಹಲವರು ಇದ್ದರು.