ಬೆಳಗಾವಿ ಬೆಳಗಾವಿ-ಕಿತ್ತೂರ-ಧಾರವಾಡ ಸಂಪರ್ಕಿಸುವ ಹೊಸ ರೈಲು ಮಾರ್ಗವು ಜೋಡಿ ಹಳಿಯಿಂದ ನಿರ್ಮಾಣವಾಗಲಿದೆ. ಈ ಕುರಿತು ನೈರುತ್ಯ ರೈಲ್ವೆವು ವೆಬ್‌ಸೈಟ್ ಮೂಲಕ ಮಾಹಿತಿ ನೀಡಿದೆ. ಈ ಮೊದಲು ಒಂದೇ ಮಾರ್ಗವನ್ನು ಹೊಂದಿತ್ತು.

ಸದ್ಯ ಭೂಸ್ವಾಧೀನ ಮತ್ತಿತರ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರದಲ್ಲೇ ಈ ಕಾರ್ಯಕ್ಕೂ ಚಾಲನೆ ದೊರೆಯುವ ಲಕ್ಷಣಗಳು ಕಂಡುಬರುತ್ತಿವೆ.
ಬೆಳಗಾವಿಯಿಂದ ಖಾನಾಪುರ- ಲೋಂಡಾ ಮೂಲಕ ಹುಬ್ಬಳ್ಳಿ- ಧಾರವಾಡಕ್ಕೆ ಸುತ್ತು ಬಳಸಿ ರೈಲ್ವೆ ಸಂಚಾರ ಮಾಡಬೇಕಾಗುತ್ತದೆ. ಇದರಿಂದ ಅಧಿಕ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಬೆಳಗಾವಿಯಿಂದ ನೇರವಾಗಿ ಕಿತ್ತೂರು ಮೂಲಕ ಧಾರವಾಡಕ್ಕೆ ಸಂಪರ್ಕಿಸುವ ರೈಲ್ವೆ ಯೋಜನೆಗೆ ಬೆಳಗಾವಿ ಸಂಸದರಾಗಿದ್ದ ಕೇಂದ್ರದ ಮಾಜಿ ರೈಲ್ವೆ ರಾಜ್ಯ ಸಚಿವ ದಿ. ಸುರೇಶ ಅಂಗಡಿ ಚಾಲನೆ ನೀಡಿ ಶ್ರಮಿಸಿದ್ದರು. ಆದರೆ, ಅವರ ನಿಧನದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು.
ಇದೀಗ ನೂತನ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ಬೆಳಗಾವಿ- ಕಿತ್ತೂರು-ಧಾರವಾಡ ರೈಲ್ವೆ ಯೋಜನೆಗೆ ಮುನ್ನುಡಿ ಬರೆಯಲು ಮುಂದಾಗಿದ್ದಾರೆ. ಅದರಂತೆ ಇದೀಗ ನೈರುತ್ಯ ರೈಲ್ವೆ ಕಳೆದ ಮೂರು ವರ್ಷಗಳಿಂದ ಕುಂಠಿತಗೊಂಡಿದ್ದ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲು ಮುಂದಾಗಿರುವುದು ಈ ಭಾಗದ ಜನರಲ್ಲಿ ಮತ್ತೆ ಮಂದಹಾಸ ಮೂಡುವಂತಾಗಿದೆ.
ಬೆಳಗಾವಿ-ಧಾರವಾಡ ರೈಲು ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು, ಈ ಯೋಜನೆಗೆ ಅನುದಾನವೂ ಮಂಜೂರಾಗಿದೆ. ಈ ರೈಲು ಮಾರ್ಗದಲ್ಲಿ 80 ಪ್ರತಿಶತ ಭೂಮಿ ಫಲವತ್ತಾಗಿದೆ ಮತ್ತು ಎರಡು ಮತ್ತು ಮೂರು ಬೆಳೆಗಳನ್ನು ಬೆಳೆಯಲಾಗುತ್ತದೆ. ಬೆಳಗಾವಿ, ದೇಸೂರು, ಕೆ. ಕೆ.ಕೊಪ್ಪ ಮಾರ್ಗವು, ಕಿತ್ತೂರಿನಿಂದ ಧಾರವಾಡಕ್ಕೆ ಸಂಪರ್ಕ ಒದಗಿಸಲಿದೆ.
ಈ ರೈಲು ಮಾರ್ಗದ ಒಟ್ಟು ಉದ್ದ 73.2 ಕಿ.ಮೀ. ಈ ಮಾರ್ಗದಲ್ಲಿ ಒಟ್ಟು ಏಳು ನಿಲ್ದಾಣಗಳಿವೆ.
ಈ ಮಾರ್ಗದಲ್ಲಿ ಒಟ್ಟು 140 ಸೇತುವೆಗಳು ನಿರ್ಮಾಣವಾಗಲಿದ್ದು, 335 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ರೈಲು ಮಾರ್ಗ ನಿರ್ಮಾಣಕ್ಕೆ ಕೋಟಿಗಟ್ಟಲೆ ಹಣ ವ್ಯಯಿಸಲಾಗುವುದು. ಬೆಳಗಾವಿ ನಗರದ ಈ ಮಾರ್ಗದಲ್ಲಿ ಇತ್ತೀಚೆಗೆ ದ್ವಿ-ಹಳಿ ಮಾಡಲಾಗಿದೆ.