ಬೆಳಗಾವಿ,: ವೈದ್ಯವಿಜ್ಞಾನದ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಅದಕ್ಕೆ ತಕ್ಕಂತೆ ಆಸ್ಪತ್ರೆಯೂ ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ನಿಖರವಾದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ರೊಬೊಟಿಕ್ ತಂತ್ರಜ್ಞಾನವು ಸಾಕಷ್ಟು ಸಹಕಾರಿಯಾಗಿದ್ದು, ಈ ತಂತ್ರಜ್ಞಾನವನ್ನು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ಅಲ್ಲದೇ ರೊಬೊಟನಿಂದ ಇಬ್ಬರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಬೆಳಗಾವಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿ, ಈ ವಿಷಯವನ್ನು ತಿಳಿಸಿದ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು, ಕಳೆದ ಮೂರು ದಶಕಗಳ ಹಿಂದೆ ವೈದ್ಯವಿಜ್ಞಾನದ ತಂತ್ರಜ್ಞಾನಕ್ಕೆ ಪರಿಚಿತವಾದ ರೊಬೊಟಿಕ್ ಇಂದು ಕ್ರಾಂತಿಕಾರಿ ತಂತ್ರಜ್ಞಾನ. ರೊಬೊಟಿಕ್ ನಿಂದ ವೈದ್ಯರು ಅತ್ಯಂತ ಕ್ಲಿಷ್ಟಕರ ಹಾಗೂ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಕಳೆದ ಎರಡು ದಶಕಗಳಲ್ಲಿ ರೊಬೊಟಿಕ್ ತಂತ್ರಜ್ಞಾನವು ಆರೋಗ್ಯ ಕ್ಷೇತ್ರದಲ್ಲೂ ವಿಶ್ವಾರ್ಹತೆಯನ್ನು ಗಳಿಸುತ್ತಿದೆ. ರೊಬೊಟ್ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ವೈದ್ಯರಿಗೆ ನೀಡುವದು, ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರೊಬೊಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರನ ಶಸ್ತ್ರಚಿಕಿತ್ಸೆಯು ಅಂತ್ಯಂತ ಪರಿಣಾಮಕಾರಿ ಎಂದು ಕಂಡು ಬಂದಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯು ಲ್ಯಾಪರೊಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸೆ ಎರಡಕ್ಕೂ ಸೈ ಎನಿಸಿಕೊಂಡಿದೆ.
3ಡಿ ತಂತ್ರಜ್ಞಾನ, ಹೈಡೆಪಿನೇಶನ್ ಕ್ಯಾಮರಾ ಹಾಗೂ ಅತ್ಯಾಧುನಿಕ ಉಪರಣಗಳನ್ನು ಹೊಂದಿರುವದರಿಂದ ಶಸ್ತ್ರಚಿಕಿತ್ಸೆಯ ಸ್ಥಳವನ್ನು ನಿಖರವಾಗಿ ತಲುಪಿ, ಅತ್ಯಂತ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ನೆರವೇರಿಸಲು ಸಹಕರಿಸುತ್ತದೆ. ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೊಬೊಟಿಕ್ ಶಸ್ತ್ರಚಿಕಿತ್ಸೆಗೆ ಸಣ್ಣ ರಂದ್ರದ ಅಗತ್ಯವಿರುತ್ತದೆ. ಸೋಂಕಿನ ಅಪಾಯ ಹಾಗೂ ರಕ್ತಸ್ರಾವ ಕಡಿಮೆಯಿದ್ದು, ಶೀಘ್ರ್ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ
ಸಾಂಪ್ರದಾಯಿಕ ಲ್ಯಾಪರೊಸ್ಕೋಪಿಕಕ್ಕಿಂತ ಹೆಚ್ಚು ಸಹಕಾರಿಯಾಗಿದೆ. ದೀರ್ಘಾವಧಿವರೆಗಿನ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುವಾಗ ಶಸ್ತ್ರಚಿಕಿತ್ಸಕರ ದೈಹಿಕ ಒತ್ತಡವನ್ನು ಕಡಿಮೆ ಮಾಡಲಿದೆ. ಭಾರತದಲ್ಲಿಯೇ ತಯಾರಿಸಿದ ಎಸ್ಎಸ್ಐ ತಂತ್ರಜ್ಞಾನ ಸರ್ಜಿಕಲ್ ರೊಬೊಟಿಕ್ ಇದಾಗಿದೆ. ರೊಬೊಟಿಕ್ ತಂತ್ರಜ್ಞಾನದಿಂದ ಇಬ್ಬರು ಕ್ಯಾನ್ಸರ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಕ್ಯಾನ್ಸರ ಶಸ್ತ್ರಚಿಕಿತ್ಸಕರಾದ ಡಾ. ಮಹೇಶ ಕಲ್ಲೋಳ್ಳಿ, ಡಾ. ಕುಮಾರ ವಿಂಚುರಕರ ಹಾಗೂ ಡಾ. ದಿವಾಕರ, ಡಾ. ರಾಹುಲ್ ಕಿನವಾಡೆಕರ ಅವರಿಗೆ ಅರವಳಿಕೆ ತಜ್ಞವೈದ್ಯರಾದ ಡಾ. ರಾಜೇಶ ಮಾನೆ ಅವರು ಸಹಕರಿಸಿದರು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಯಾನ್ಸರ ತಜ್ಞವೈದ್ಯರಾದ ಡಾ. ಕುಮಾರ ವಿಂಚುರಕರ ಹಾಗೂ ಡಾ. ಮಹೇಶ ಕಲ್ಲೋಳ್ಳಿ ಅವರು ಉಪಸ್ಥಿತರಿದ್ದರು.