ಬೆಳಗಾವಿ,: ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ, ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಪಾತ್ರದ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸುತಗಟ್ಟಿ ಬಳಿ ಘಟಪ್ರಭಾ ನದಿಯ ಒಳಹರಿವು, ಪ್ರಸ್ತುತ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಸಂಕೇಶ್ವರ ಪಟ್ಟಣಕ್ಕೆ ತೆರಳಿದ ಪ್ರವಾಹ ಬಾಧಿತಗೊಳ್ಳಬಹುದಾದ ಪ್ರದೇಶಗಳನ್ನು ವೀಕ್ಷಿಸಿದರು. ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ನಿರ್ದೇಶನ ನೀಡಿದರು.
2019 ರ ಪ್ರವಾಹ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ ಕಾಳಜಿ ಕೇಂದ್ರಗಳಂತೆ ಈ ಬಾರಿಯೂ ಈಗಾಗಲೇ ಕಾಳಜಿ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ ಮಂಜುಳಾ ನಾಯಕ ವಿವರಿಸಿದರು.
ಮಾಂಜರಿಯ ಹತ್ತಿರ ಕೃಷ್ಣಾ ನದಿಯ ಒಳಹರಿವು ವೀಕ್ಷಿಸಿ, ಯಡೂರ ಗ್ರಾಮದ ಬಳಿ ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ಸಂಚರಿಸಿ, ತುರ್ತು ಸಂದರ್ಭದಲ್ಲಿ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಪರ್ತಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರೋಷನ್ ಅವರು, ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಿಲ್ಲ; ಈಗಾಗಲೇ 26 ಬೋಟಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಗತ್ಯಬಿದ್ದರೆ ಹೆಚ್ಚುವರಿ ಬೋಟಗಳನ್ನು ಕಾರವಾರದಿಂದ ತರಿಸಲಾಗುವುದು ಎಂದು ಹೇಳಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಬಸವರಾಜ ಸಂಪಗಾವಿ, ತಹಶೀಲ್ದಾರ ಕುಲಕರ್ಣಿ ಸೇರಿದಂತೆ ಕಂದಾಯ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸದ್ಯಕ್ಕಿಲ್ಲ ಪ್ರವಾಹ ಭೀತಿ- ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
