ಬೆಂಗಳೂರು : ಬಾಕಿ ವೇತನ ಹಾಗೂ ಸೇವಾ ಭದ್ರತೆಗೆ ಒತ್ತಾಯಿಸಿ ಡಯಾಲಿಸಿಸ್ ಸೇವಾ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದು, ಇದರಿಂದ ರಾಜ್ಯದಲ್ಲಿರುವ 167 ಡಯಾಲಿಸಿಸ್ ಕೇಂದ್ರಗಳು ಇಂದಿನಿಂದ ಕಾರ್ಯ ಸ್ಥಗಿತಗೊಳ್ಳಲಿವೆ.
ನಾಲ್ಕು ತಿಂಗಳಿಂದ ವೇತನವಿಲ್ಲ: ಕೇಂದ್ರಗಳಲ್ಲಿನ 650 ಸಿಬ್ಬಂದಿ ಆಗಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ 15 ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದ ಆರೋಗ್ಯ ಇಲಾಖೆ ನಂತರದಲ್ಲೂ ಬೇಡಿಕೆ ಈಡೇರಿಸಲಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅನಿರ್ದಿಷ್ಟ ಮುಷ್ಕರಕ್ಕೆ ಮುಂದಾಗುತ್ತಿದ್ದಾರೆ.
ಡಯಾಲಿಸಿಸ್ ಸಿಬ್ಬಂದಿ ಬಾಕಿ ವೇತನ ಪಾವತಿಸಲು ಹಣ ಬಿಡುಗಡೆ ಮಾಡಲಾಗಿದ್ದು, ಆಯಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಭಟನೆ ನಡೆಸದಂತೆ ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಪ್ರತಿಭಟನೆಯಿಂದ ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1,800ಕ್ಕೂ ಅಧಿಕ ರೋಗಿಗಳಿಗೆ ಸೇವೆ ದೊರೆಯದೆ ಪರದಾಡುವ ಸ್ಥಿತಿ ಎದುರಾಗಲಿದೆ. ಪರ್ಯಾಯ ವ್ಯವಸ್ಥೆ ದೊರೆಯದಿದ್ದರೆ ಪ್ರಾಣಕ್ಕೆ ಅಪಾಯವೂ ಎದುರಾಗುವ ಸಾಧ್ಯತೆಗಳಿವೆ.
ಆದರೆ ಸಿಬ್ಬಂದಿ ಸರಕಾರದ ಭರವಸೆಗೆ ಮರುಳಾಗಿಲ್ಲ. ಕಾರಣ ಅನಿವಾರ್ಯವಾಗಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಡಯಾಲಿಸಿಸ್ ಕೇಂದ್ರ ನಿರ್ವಹಣೆ ಮಾಡುತ್ತಿದ್ದ ಬಿಆರ್‌ಎಸ್ ಸಂಸ್ಥೆಗೆ 2021ರಲ್ಲಿ ಸರ್ಕಾರದಿಂದ ಸರಿಯಾಗಿ ಹಣ ಬಿಡುಗಡೆ ಮಾಡದಿದ್ದರಿಂದ ಸಂಸ್ಥೆ ನಿರ್ವಹಣೆ ಕೈ ಬಿಟ್ಟಿತು. ನಂತರ ಯಾವುದೇ ಟೆಂಡರ್ ಕರೆಯದೇ ಈ ಹಿಂದೆ 45 ಕೇಂದ್ರಗಳ ನಿರ್ವಹಣೆ ಮಾಡುತ್ತಿದ್ದ ಕೋಲ್ಕತ್ತ ಮೂಲದ ಎಸ್ಕಾಗ್ ಸಂಜೀವಿನಿಗೆ 167 ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಜವಾಬ್ದಾರಿ ನೀಡಲಾಗಿತ್ತು. ಸದ್ಯ ಆರೋಗ್ಯ ಇಲಾಖೆಯಿಂದಲೇ ಕೇಂದ್ರಗಳ ನಿರ್ವಹಣೆ ಮಾಡಲಾಗುತ್ತಿದೆಯಾದರೂ, ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ.
ಕರೋನಾ ಕಾರಣ ನೀಡಿ ವೇತನಕ್ಕೆ ಕತ್ತರಿ ಹಾಕಿತ್ತು. ಈ ಹಿನ್ನೆಲೆ ಕಳೆದ ಎರಡೂವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುತ್ತಿದ್ದರು. ಇದೀಗ ಕಳೆದ 4 ತಿಂಗಳಿಂದ ವೇತನವನ್ನೇ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಈ ಕುರಿತು ಹಲವು ಬಾರಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಯಾವುದಕ್ಕೂ ಪ್ರತಿಕ್ರಿಯೆ ದೊರೆಯದ ಕಾರಣ ಇದೀಗ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.