ಬೆಳಗಾವಿ: ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಮಂಗಳವಾರ ಬೆಳಗಾವಿ ಚಲೋ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಈಗಾಗಲೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ. ಯಾವುದೇ ಸಂಘಟನೆ ಬಂದರೂ ಹೊಡೆತ ಬೀಳುವುದು ನಮಗೆ. ಅದನ್ನು ಗಮನಿಸಬೇಕಾಗುತ್ತದೆ. ಹಾಗಾಗಿ, ಬೆಳಗಾವಿ ಚಲೋ ಕೈ ಬಿಡುವಂತೆ ಮನವಿ ಮಾಡಿಕೊಂಡರು.

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪೊಲೀಸರು ಮತ್ತು ಜಿಲ್ಲಾಧಿಕಾರಿ ಮಾಹಿತಿ ಕೊಟ್ಟಿದ್ದಾರೆ. ಇಬ್ಬರ ಮಧ್ಯ ನಡೆದ ಜಗಳ ಅಷ್ಟೇ ಅದು. ಯಾವುದೇ ಸಂಘಟನೆ, ಭಾಷೆಗೆ ಹೋಗಬಾರದು ಎಂಬುದು ನಮ್ಮ ಮನವಿ‌. ಈ ರೀತಿ ಘಟನೆ ಏನು ಹೊಸದಲ್ಲ. ಇಡೀ ರಾಜ್ಯದಲ್ಲಿ ಪ್ರತಿದಿನ ಒಂದು ಕಡೆ ನಡೆಯುತ್ತವೆ. ಆದರೆ, ಅದು ಅಲ್ಲಿಯೇ ಮುಗಿಯುತ್ತದೆ. ಒಂದೊಂದು ಬಾರಿ ಪೊಲೀಸ್ ಠಾಣೆಗೆ ಬಸ್ ನ್ನೆ ಹೋದ ಉದಾಹರಣೆ ಸಾಕಷ್ಟಿವೆ. ಪೊಲೀಸರು ಮತ್ತು ಕಾನೂನಿಗೆ ಆ ವಿಚಾರವನ್ನು ಬಿಡಬೇಕು. ಕನ್ನಡ-ಮರಾಠಿ ಸಂಘಟನೆ ಎಂದು ಬಿಂಬಿಸಬಾರದು. ಅಂತಿಮವಾಗಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ ಎಂದರು.

ಪೊಲೀಸರು ಎರಡೂ ಕಡೆ ತನಿಖೆ ಮಾಡುತ್ತಿದ್ದಾರೆ. ಹಾಗಾಗಿ, ಅದನ್ನು ಪೊಲೀಸರಿಗೆ ಬಿಡುವುದು ಒಳ್ಳೆಯದು. ಆದರೆ, ಪೋಕ್ಸೋ ಕೇಸ್ ಹಾಕಬಾರದಿತ್ತು. ನೂರು ಜನರ ಮುಂದೆ ಆದ ಘಟನೆ ಇದು. ಹಾಗಾಗಿ, ಆ ಪ್ರಶ್ನೆ ಬರುವುದಿಲ್ಲ. ಇದರಲ್ಲಿ ಪೊಲೀಸರಿಂದ ತಪ್ಪಾಗಿದೆ ಎಂಬುದು ಕೂಡ ನನ್ನ ಭಾವನೆ. ಮುಂದೆ ಕಾನೂನಿನಲ್ಲಿ ಸರಿ ಮಾಡಲು ಅವಕಾಶ ಇದೆ. ಸಾಮಾನ್ಯ ಕೇಸ್ ಆಗಬೇಕು ಎಂದು ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.

ಎರಡೂ ಕಡೆ ಬಸ್ ಗಳಿಗೆ ಮಸಿ ಬಳಿಯುವ ಕೆಲಸ ಆಗಿದೆ. ಕೊನೆಯದಾಗಿ ತೊಂದರೆ ಆಗುವುದು ಬೆಳಗಾವಿ ಮತ್ತು ಸರ್ಕಾರಕ್ಕೆ. ಇಂಥ ಘಟನೆಗಳು ನಡೆಯುವುದರಿಂದ ನೇರವಾಗಿ ಬೆಳಗಾವಿಗೆ ನಷ್ಟವಾಗುತ್ತದೆ. ಬೆಳೆಯುತ್ತಿರುವ ಬೆಳಗಾವಿಗೆ ನಾವು ಪ್ರೋತ್ಸಾಹಿಸಬೇಕು. ಅದನ್ನು ಬಿಟ್ಟು ಇಂಥ ಘಟನೆಗಳಿಗೆ ಪ್ರೋತ್ಸಾಹಿಸಬಾರದು. ಪೊಲೀಸರ ಕೆಲಸ ನಾವು ಮಾಡಲು ಆಗಲ್ಲ. ಅವರಿಗೆ ಕೆಲಸ ಮಾಡಲು ಬಿಡಬೇಕು ಎಂದು ಸತೀಶ‌ ಜಾರಕಿಹೊಳಿ ಕಿವಿಮಾತು ಹೇಳಿದರು.

ಈ ವಿಚಾರವನ್ನು ಎರಡೂ ರಾಜ್ಯಗಳ ಸರ್ಕಾರ ಮತ್ತು ಪೊಲೀಸರ ಮೇಲೆ ಬಿಟ್ಟು ಬಿಡುವುದು ಒಳ್ಳೆಯದು. ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪಾತ್ರ ಇಲ್ಲ. ಶಿವಸೇನಾ ಪಕ್ಷ ಮೊದಲಿನಿಂದಲೂ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟಕ್ಕೆ ಬೆಂಬಲಿಸುತ್ತಾ ಬಂದಿದೆ. ಹಾಗಾಗಿ, ರಾಜಕಾರಣಿಗಳು ಇದರಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ, ಕೊಲ್ಹಾಪುರ ಜಿಲ್ಲಾಧಿಕಾರಿ ಜೊತೆಗೆ ಸಭೆ ಮಾಡುತ್ತಿದ್ದಾರೆ. ಎರಡೂ ರಾಜ್ಯಗಳಿಗೆ ಬಸ್ ಬಿಡುವ ಸಂಬಂಧ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಭಾಷಾ ಅಲ್ಪಸಂಖ್ಯಾತ ಆಯೋಗದ ಸಲಹೆ ನೀಡಿದೆ. ಅವರು ಹೇಳಿದ ಮೇಲೆ ಜಿಲ್ಲಾಧಿಕಾರಿ ಆ ರೀತಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಿದ್ದಾರೆ. ಅವರಿಗೂ ದಾಖಲೆ ನೀಡಲಿ ಎಂಬ ವಿಚಾರಕ್ಕೆ ಅಲ್ಲಿ ಆಯೋಗ ಹೋದಾಗ ಅದನ್ನು ಹೇಳಬೇಕು. ಇಲ್ಲಿ ಬಂದಿರುವಾಗ ಇಲ್ಲಿನ ಜಿಲ್ಲಾಧಿಕಾರಿ ಅವರ ಆದೇಶ ಪಾಲಿಸಬೇಕಾಗುತ್ತದೆ. ಅತ್ಯುನ್ನತ ಆಯೋಗವೊಂದು ಸೂಚಿಸಿದಾಗ ಆಯಾ ಜಿಲ್ಲಾಧಿಕಾರಿಗಳು ಅವರ ಮಾತನ್ನು ಕೇಳಬೇಕಾಗುತ್ತದೆ. ಇಂಥ ಸಮಸ್ಯೆ ಉದ್ಭವಿಸಿದಾಗ ಅಂತಿಮವಾಗಿ ಸರ್ಕಾರ ತೀರ್ಮಾನ ಮಾಡಬೇಕಾಗುತ್ತದೆ. ಸರ್ಕಾರದ ಅಭಿಪ್ರಾಯ ಪಡೆಯುವಂತೆ ತಿಳಿಸುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಬಜೆಟ್ ನಿರೀಕ್ಷೆ ಕುರಿತು ಹತ್ತು ಹಲವಾರು ಯೋಜನೆಗಳನ್ನು ಶಾಸಕರು ಕೇಳಿದ್ದಾರೆ. ಇಲಾಖೆಯಿಂದ ಕೂಡ ಬೇಡಿಕೆ ಇದೆ. ಆಯಾ ಇಲಾಖೆಯವರು ಏನೆಲ್ಲಾ ಯೋಜನೆ ಹಾಕಬೇಕೆಂದು ಜಿಲ್ಲಾವಾರು ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ ಎಂದಷ್ಟೇ ಸತೀಶ ಜಾರಕಿಹೊಳಿ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಟ್ಟಡ ಕಾಮಗಾರಿಗೆ ನೀರಿನ ಸಮಸ್ಯೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಮಲಪ್ರಭಾ ನದಿಯಿಂದ ಈಗಾಗಲೇ ಹಲವಾರು ಕೆರೆಗಳನ್ನು ತುಂಬಿಸುವ ಯೋಜನೆ ಮಾಡಿದ್ದೇವೆ. ಅಲ್ಲಿಯೇ ಪಕ್ಕದ ಕೆರೆಯನ್ನು ತುಂಬಿಸುತ್ತಿದ್ದೇವೆ. ಅದೇ ನೀರನ್ನು ವಿಶ್ವವಿದ್ಯಾಲಯಕ್ಕೆ ಬಳಸಬಹುದು ಎಂದು ಸತೀಶ ಉತ್ತರಿಸಿದರು.

ಜಲಲ್ಪುರದಲ್ಲಿ ಇಂದು ಬೆಳಿಗ್ಗೆ ಆರು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಾಳೆವರೆಗೆ ಮೃತದೇಹಗಳು ಬರಲಿವೆ. ನಮ್ಮ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಗೋಕಾಕ್ ಡಿಎಸ್ಪಿ ಅವರು ಈಗಾಗಲೇ ಜಲಲ್ಪುರ ಪೊಲೀಸರ ಜೊತೆಗೆ ಮಾತನಾಡಿದ್ದಾರೆ. ಇಂದು ಬೆಳಿಗ್ಗೆಯೇ ಜಲಲ್ಪುರದಿಂದ ಮೃತದೇಹಗಳು ಬೆಳಗಾವಿ ಕಡೆ ಬರುತ್ತಿವೆ ಎಂದರು.

ಪ್ರಯಾಗ್ ರಾಜ್ ದಲ್ಲಿ ಸಂಭವಿಸಿದ ಕಾಲ್ತುಳಿದಲ್ಲಿ ಮೃತಪಟ್ಟವರಿಗೆ ಪರಿಹಾರ ವಿತರಿಸುವ ವಿಚಾರದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಬೇರೆ ಬೇರೆ ಜಿಲ್ಲೆಯವರು ಮೃತರಾಗಿದ್ದಾರೆ. ನಿರ್ಧಿಷ್ಟವಾಗಿ ಎಷ್ಟು ಜನರು ಮೃತಪಟ್ಟಿದ್ದಾರೆ ಅಂತಾ ಗೊತ್ತಾಗಿಲ್ಲ. ಹಾಗಾಗಿ, ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅವರೇ ಇರಬೇಕು. ಅವರೇ ಇದ್ದರೆ ಒಳ್ಳೆಯದು. ಈಗಾಗಲೇ ಅವರಲ್ಲಿ ನಾಲ್ಕು ಗುಂಪುಗಳಾಗಿವೆ. ಹಾಗೇ ಇರಬೇಕು ಅವರು. ಕನ್ನಡ ಮೇಯರ್ ಆಯ್ಕೆ ಬಗ್ಗೆ ನೋಡೋಣ ಎಂದು ಸತೀಶ ಜಾರಕಿಹೊಳಿ ಹೇಳಿದರು.