ಬೆಳಗಾವಿ: ‘ಶತಮಾನಗಳ ಹಿಂದೆ ಶಿಕ್ಷಣವಿರಲಿಲ್ಲ. ಆದರೆ ಜನರು ಸಂಸ್ಕಾರಯುತವಾಗಿದ್ದರು. ಇಂದಿನ ಯುವಜನರು ಸುಶಿಕ್ಷಿತರಾಗಿದ್ದರೂ ಕೂಡ ಅವರಲ್ಲಿ ಸಂಸ್ಕಾರವಿಲ್ಲ ಎಂದು ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಅವರಿಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಗನೂರು ರುದ್ರಾಕ್ಷಿಮಠದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತ್ಯೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹೆತ್ತವರು, ಗುರು–ಹಿರಿಯರ ಬಗ್ಗೆ ಯುವಜನರಿಗೆ ಗೌರವ ಕಡಿಮೆಯಾಗುತ್ತಿದೆ. ಹಾಗಾಗಿಯೇ ಅವರು ದಾರಿ ತಪ್ಪಿ, ವ್ಯಸನಿಗಳಾಗುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕಾರಯುತ ಸಮಾಜ ನಿರ್ಮಾಣದ ಅಗತ್ಯವಿದೆ’ ಎಂದು ಹೇಳಿದರು.

‘ಲಿಂಗಾಯತ ಮಠ–ಮಾನ್ಯಗಳು ಹಾಗೂ ಸಮಾಜದ ಹಿರಿಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದೆ ಹೋಗಿದ್ದರೆ, ಇಂದು ಕರ್ನಾಟಕ ಮತ್ತೊಂದು ಬಿಹಾರವಾಗುತ್ತಿತ್ತು. ಭಾರತದಲ್ಲಿ ಇಂದು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆಯುತ್ತಿದ್ದರೆ,  ಅದು ನಮ್ಮ ಪೂರ್ವಜರು ಅಂದು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಿಂದ’ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರು ಸಮಾರೋಪ ನುಡಿಗಳನ್ನಾಡಿದ ‘12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಯಶಸ್ವಿಯಾಗಲಿಲ್ಲ. ಅಂದು ಯಶಸ್ವಿಯಾಗಿದ್ದರೆ, ಇಂದು ಜಾತಿ ಮತ್ತು ಉಪಜಾತಿಗಳ ಮಧ್ಯೆ ಸಮಾಜ ಹರಿದುಹಂಚಿ ಹೋಗುತ್ತಿರಲಿಲ್ಲ‌. ಜಾತಿ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರ ಅನುಯಾಯಿಗಳಲ್ಲೇ ಇಂದು ನೂರಾರು ಜಾತಿ, ಉಪಜಾತಿಗಳಾಗಿರುವುದು ಬೇಸರದ ಸಂಗತಿ’ ಎಂದ ಅವರು, ‘ಬಸವಣ್ಣನ ಕ್ರಾಂತಿ ಯಶಸ್ವಿಯಾಗಿದ್ದರೆ ಇಂದು ಜಾತ್ಯತೀತ ಸಮಾಜ ನಿರ್ಮಾಣವಾಗುತ್ತಿತ್ತು’ ಎಂದು ಹೇಳಿದರು.

ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಅವರು ಮಾತನಾಡಿ, ‘ಕುಂದಾನಗರಿ ಬೆಳಗಾವಿ ಬಸವನಗರಿ ಆಗುತ್ತಿರುವುದು ಸಂತಸದ ವಿಷಯ. ಸಮಾಜ ಬಾಂಧವರು ತಮ್ಮ ಮನೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳಿಗೆ ಕಾಣಿಕೆ ನೀಡುವ ಬದಲಿಗೆ, ವಚನಗಳ ಆಧಾರಿತ ಪುಸ್ತಕ ನೀಡಿದರೆ ಶರಣ ಸಂಸ್ಕೃತಿಯೊಂದಿಗೆ ಕನ್ನಡ ಭಾಷೆ ಬೆಳವಣಿಗೆಯೂ ಆಗುತ್ತದೆ’ ಎಂದು ಹೇಳಿದರು.

ಬೆಳ್ಳೆರಿಯ ಬಸವಾನಂದ ಸ್ವಾಮೀಜಿ, ಆಶೀರ್ವಚನ ನೀಡಿದರು. ಶಾಸಕ ಆಸಿಫ್‌ ಸೇಟ್‌ ಉಪಸ್ಥಿತರಿದ್ದರು. ಮುರಿಗೆಪ್ಪ ಬಾಳಿ ಸ್ವಾಗತಿಸಿದರು. ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ವಂದಿಸಿದರು. ಮಂಜುನಾಥ ಶರಣಪ್ಪನವರ ನಿರೂಪಿಸಿದರು.