ಬೆಳಗಾವಿ: ಶತಮಾನ ಕಂಡ ಐತಿಹಾಸಿಕ ಹಿಂಡಲಗಾ ಕಾರಾಗೃಹ ತನ್ನ ಒಡಲೊಳಗೆ ಅನೇಕ ಕಹಿ ಮತ್ತು ಸಹಿ ಘಟನೆಗಳನ್ನು ಇಟ್ಟುಕೊಂಡಿದೆ. ಹಲವು ವೀರ ನಾಯಕರನ್ನು ತನ್ನ ನಾಲ್ಕು ಗೋಡೆಯೊಳಗೆ ಬಂಧಿಸಿಟ್ಟಿದ್ದ ಹಿಂಡಲಗಾ ಕೇಂದ್ರ ಕಾರಾಗೃಹವನ್ನು 1923 ರಲ್ಲಿ ಬ್ರಿಟಿಷರು ನಿರ್ಮಿಸಿದ್ದಾರೆ. ಸುಮಾರು 99 ಎಕರೆಗಳ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಕಾರಾಗೃಹ ಬೆಳಗಾವಿ ನಗರದಿಂದ ಅನತಿ ದೂರದಲ್ಲಿದ್ದು (ಸುಮಾರು 6 ಕೀ.ಮೀ.) 1162 ಕೈದಿಗಳನ್ನು ಇರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ರಾಜ್ಯದಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸುವ ವ್ಯವಸ್ಥೆಯನ್ನು ಹೊಂದಿರುವ ಏಕೈಕ ಜೈಲು.

ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಸುರಕ್ಷಿತ ಹಾಗೂ ಸಕಲ ಸೌಲಭ್ಯಗಳನ್ನು ಹೊಂದಿರುವ ಕಾರಾಗೃಹ ಎಂದು ಪ್ರಸಿದ್ದಗೊಂಡಿರುವ ಕಾರಾಗೃಹದಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸುವ ಸೌಲಭ್ಯವನ್ನು ಹೊಂದಿದೆ. ಒಂದೇ ಬಾರಿಗೆ ಮೂರು ಆರೋಪಿತರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವ ವ್ಯವಸ್ಥೆಯನ್ನು ಒಳಗೊಂಡಿರುವ ಜೈಲು ರಾಜ್ಯದಲ್ಲಿ ಇದೊಂದೆ. ಕುಖ್ಯಾತ ಅಪರಾಧಿಗಳು, ಧರಡೆಕೋರರು, ಸಿಮಿ ಕಾರ‍್ಯಕರ್ತರು ಸೇರಿದಂತೆ ಅನೇಕ ಅಪರಾಧಿಗಳನ್ನು ತನ್ನ ನಾಲ್ಕು ಗೋಡೆಗಳ ಮದ್ಯೆ ಬಂಧಿಸಿಟ್ಟಕೊಂಡಿದ್ದ ಜೈಲು ಶತಮಾನದ ಸಂಭ್ರಮದಲ್ಲಿದೆ.
ಐತಿಹಾಸಿಕ ಪ್ರಾಮುಖ್ಯತೆ ಪಡೆದ ಹಿಂಡಲಗಾ ಕಾರಾಗೃಹ (ಜೈಲು) ಸ್ವಾತಂತ್ರ‍್ಯ ಚಳವಳಿಯ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ ನೆಹರೂ ಅವರಂತಹ ಪ್ರಮುಖ ರಾಷ್ಟ್ರೀಯ ನಾಯಕರನ್ನು ಬಂಧಿಸಿಟ್ಟುಕೊಂಡ ಜೈಲಿದು. ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಇದು, ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಮುಖ ಮಿಲಿಟರಿ ಸ್ಥಾಪನೆಯ ನೆಲೆಯಾಗಿತ್ತು. ಸ್ವಾತಂತ್ರ‍್ಯ ಹೋರಾಟದಲ್ಲಿ ತೊಡಗಿದ ಪ್ರಮುಖರನ್ನು ಬಂಧಿಸಿಡುವ ಕಾರ‍್ಯಕ್ಕೆ ತೊಂದರೆಯಾದಾಗ ಬ್ರಿಟಿಷ ಅಧಿಕಾರಿಗಳು 1923ರಲ್ಲಿ ಹಿಂಡಲಗಾ ಜೈಲು ಸ್ಥಾಪನೆಗೆ ಮುಂದಾದರು. ಒಟ್ಟು 1,162 ಕೈದಿಗಳಿಗೆ ಸ್ಥಳಾವಕಾಶವಿರುವ ಕಾರಾಗೃಹದಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸುವ 3 ಘಟಕಗಳನ್ನು ಹೊಂದಿದೆ.
ಸ್ವಾತಂತ್ರ‍್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಏಪ್ರಿಲ್ 4, 1950 ರಿಂದ ಜುಲೈ 13, 1950 ರ ವರೆಗೆ 100 ದಿನಗಳ ಕಾಲ ಜೈಲಿನಲ್ಲಿಟ್ಟಿದ್ದರು. ಈ ಜೈಲಿನಲ್ಲಿ ಗಲ್ಲಿಗೇರಿದ ಕೊನೆಯ ವ್ಯಕ್ತಿ ಗೋಕಾಕ್‌ನ ಹನುಮಪ್ಪ ಮರಿಯಪ್ಪ ಮಾರಿಹಾಳ. ಈತನನ್ನು ಐದು ಕೊಲೆಗಳ ಅಪರಾಧಿ ಎಂದು ಘೋಷಿಸಿದ ನಂತರ ನವೆಂಬರ್ 9, 1983 ರಂದು ಗಲ್ಲಿಗೇರಿಸಲಾಯಿತು. ಇದಕ್ಕೂ ಮೊದಲು 1976ರಲ್ಲಿ ಆರು ಹಾಗೂ 1978ರಲ್ಲಿ ಐವರು ಆರೋಪಿಗಳನ್ನು ಗಲ್ಲಿಗೇರಿಸಲಾಗಿತ್ತು.
99 ಎಕರೆ ವಿಸ್ತೀರ್ಣವನ್ನು ಹೊಂದಿರುವ ಕಾರಾಗೃಹದಲ್ಲಿ 30 ಎಕರೆಗಳನ್ನು ಕೃಷಿ ಮತ್ತು ಜಾನುವಾರುಗಳಿಗೆ ಮೇಯಿಸಲು ಮೀಸಲಿಡಲಾಗಿದೆ. ಇದು ಹಸಿರು ಸೆರೆಮನೆಯಾಗಿದ್ದು, ವಿಭಾಗಗಳ ನಡುವಿನ ತೆರೆದ ಸ್ಥಳಗಳಲ್ಲಿ ಹೇರಳವಾದ ಮರಗಳು ಮತ್ತು ಸಸ್ಯವರ್ಗವನ್ನು ಹೊಂದಿದೆ. ಈ ಪರಿಸರವನ್ನು ಕಾಪಾಡಿಕೊಳ್ಳಲು ಸಿಬ್ಬಂದಿ ಮತ್ತು ಕೈದಿಗಳಿಂದ ಕಾರ‍್ಯಚಟುವಟಿಕೆಗಳನ್ನು ಮಾಡಿಸಲಾಗುತ್ತದೆ.

ಕಾರಾಗೃಹವು ಎದುಬದರಾಗಿ ಎರಡು ಕಟ್ಟಡಗಳನ್ನು ಹೊಂದಿದೆ. ಪುರುಷ ಅಪರಾಧಿಗಳಿಗೆ ಪ್ರತ್ಯೇಕ ಬ್ಯಾರಕ್‌ಗಳನ್ನು ಹೊಂದಿದ್ದರೆ, ಇನ್ನೊಂದು ವಿಚಾರಣಾಧೀನ ಕೈದಿಗಳಿಗೆ ಮೀಸಲಿಡಲಾಗಿದೆ. ಅಪರಾಧಿಗಳು ನುರಿತ ಕೆಲಸಗಳನ್ನು ಮಾಡಲು ಕಾರ‍್ಯವಿಧಾನಕ್ಕಾಗಿ ಪ್ರತ್ಯೇಕ ಸ್ಥಳಾವಕಾಶಗಳನ್ನು ಸ್ಥಾಪಿಸಿದ್ದು, ಅದರಲ್ಲಿ ಪವರ್ ಲೂಮ್, ಹ್ಯಾಂಡ್ಲೂಮ್, ವಾರ್ಪಿಂಗ್ ಮತ್ತು ಟೈಲರಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ. ಅಂಡರ್ ಟ್ರಯಲ್ ವಿಭಾಗದಲ್ಲಿ ಸೆಲ್‌ಗಳು ಮತ್ತು ಬ್ಯಾರಕ್‌ಗಳಿವೆ. ಇದು ಗ್ರಂಥಾಲಯ, ಮರಗೆಲಸ ವಿಭಾಗ, ಟೈಲರಿಂಗ್ ಪ್ರದೇಶ ಮತ್ತು ಹೆಚ್ಚಿನ ಭದ್ರತೆಯ ಕೈದಿಗಳಿಗಾಗಿ ಕೆಲವು ಕೊಠಡಿಗಳನ್ನೂ ಸಹ ಒಳಗೊಂಡಿದೆ.
ಹೆಚ್ಚಿನ ಭದ್ರತೆಯ ಅಗತ್ಯವಿರುವ ಕೈದಿಗಳಿಗೆ ಪ್ರತ್ಯೇಕ ವಿಭಾಗವಿದೆ. ಈ ವಿಭಾಗದಲ್ಲಿ ಮರಣದಂಡನೆ ಕೈದಿಗಳು ತಮ್ಮ ಕೊನೆಯ ದಿನಗಳನ್ನು ಕಳೆಯುತ್ತ ಜೀವನ ಸಾಗಿಸುತ್ತಿದ್ದಾರೆೆ. ಈ ವಿಭಾಗದಿಂದ ಒಂದು ಸಣ್ಣ ಗೇಟ್ ನೇರವಾಗಿ ನೇಣುಗಂಬಕ್ಕೆ ದಾರಿ ಮಾಡಿಕೊಡುತ್ತದೆ.
ಹಿಂಡಲಗಾ ಜೈಲಿನಲ್ಲಿರುವ ಗಲ್ಲು

ಅಸಹಕಾರ ಚಳುವಳಿ ಮತ್ತು ದಂಡಿ ಮೆರವಣಿಗೆಯ ಸಂದರ್ಭದಲ್ಲಿ, ಬೆಳಗಾವಿ ಪ್ರದೇಶ ಮಾತ್ರವಲ್ಲದೆ ಸಮೀಪದ ಪ್ರದೇಶಗಳ ಹಲವಾರು ಸ್ವಾತಂತ್ರ‍್ಯ ಹೋರಾಟಗಾರರನ್ನು ಹಿಂಡಲಗಾ ಜೈಲಿನಲ್ಲಿ ಬಂಧಿಸಿಡಲಾಯಿತು. ಈ ಐತಿಹಾಸಿಕ ತಾಣವು ಕನ್ನಡ ಚಲನಚಿತ್ರ ‘ಮಿಂಚಿನ ಓಟ’ ಮತ್ತು ಹಿಂದಿ ಚಲನಚಿತ್ರ ‘ಮೊಹ್ರಾ’ ದಂತಹ ಹಲವಾರು ಚಲನಚಿತ್ರಗಳ ಚಿತ್ರಿಕರಣಕ್ಕೆ ಸಾಕ್ಷಿಯಾಗಿದೆ.