ಬೆಳಗಾವಿ : ಬೆಂಗಳೂರು – ಬೆಳಗಾವಿ – ಬೆಂಗಳೂರು ಹಾಗೂ ನವದೆಹಲಿ – ಬೆಳಗಾವಿ – ನವದೆಹಲಿ ನಡುವೆ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೋ ಸಂಸ್ಥೆ ಸಪ್ತಾಹದಲ್ಲಿ ಕೇವಲ ಆಯ್ದ ದಿನಗಳಲ್ಲಿ ಮಾತ್ರ ಸೇವೆಯನ್ನು ಒದಗಿಸುತ್ತಿದ್ದು, ಇದನ್ನು ಮಾರ್ಪಡಿಸಿ ಈ ಮೊದಲಿನಂತೆಯೇ ದಿನನಿತ್ಯದ ಸೇವೆಯನ್ನು ಒದಗಿಸುವಂತೆ ಸಂಸದ ಜಗದೀಶ ಶೆಟ್ಟರ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರನ್ನು ನವ ದೆಹಲಿಯ ನೂತನ ಸಂಸತ್ ಭವನದಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿದರು.
ಇಂಡಿಗೋ ಸಂಸ್ಥೆ ಜೂನ್ 16 ರಿಂದ ಬೆಂಗಳೂರು-ಬೆಳಗಾವಿ ನಡುವೆ ವಿಮಾನಯಾನ ಸೇವೆಯನ್ನು ಕೇವಲ ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರಗಳಂದು ಬೆಳಗ್ಗೆ ಹಾಗೂ ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಸಂಜೆ ಮಾತ್ರ ಒದಗಿಸುತ್ತಿದೆ.
ಅಲ್ಲದೇ ನವದೆಹಲಿ-ಬೆಳಗಾವಿ ನಡುವೆ ಕೇವಲ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಸೇವೆ ಕಲ್ಪಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ಅನಾನುಕೂಲತೆಯಾಗುತ್ತಿದೆ. ಆದ್ದರಿಂದ ಪ್ರಸ್ತಾಪಿತ ಮಾರ್ಗದಲ್ಲಿ ಈ ಮೊದಲಿನಂತೆ ದಿನ ನಿತ್ಯದ ಸೇವೆಯನ್ನು ಒದಗಿಸುವಂತೆ ಇಂಡಿಗೋ ಸಂಸ್ಥೆಗೆ ಸೂಚಿಸುವಂತೆ ಕೋರಿದರು.
ಬೆಳಗಾವಿ ಬಹು ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ನಗರ. ಈ ಹಿನ್ನಲೆಯಲ್ಲಿ ಈಗಿರುವ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸುವ ಬಗ್ಗೆಯೂ ಸೇರಿದಂತೆ, ಬೆಳಗಾವಿಯಿಂದ ಚೆನ್ನೈ, ಪುಣೆ ಮತ್ತು ಅಹಮದಾಬಾದ್ ನಗರಗಳಿಗೂ ನೂತನ ವಿಮಾಣ ಸೇವೆ ಒದಗಿಸುವ ಕುರಿತು ಸಹ ಚರ್ಚಿಸಿ, ಮುಂದಿನ ತುರ್ತು ಕ್ರಮ ಜರುಗಿಸಲು ಅವರು ಕೋರಿದರು.
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಕೊಳ್ಳುವ ಭರವಸೆಯನ್ನು ನೀಡಿರುವುದಾಗಿ ಅವರು ತಿಳಿಸಿದ್ದಾರೆ.