ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಅಂಗೀಕರಿಸಲು ಬೆಳಗಾವಿಯ ಕನ್ನಡತಿ ಮೇಯರ್ ಅಡ್ಡಗೋಡೆ ಮೇಲೆ ದೀಪ ಇಟ್ಟ ಪ್ರಸಂಗ ನಡೆದಿದೆ. ಬುಧವಾರ ಮಹಾನಗರ ಪಾಲಿಕೆಯ ಸಾಧಾರಣ ಸಭೆ ನಡೆದಿದೆ. ಆದರೆ ಈ ಸಭೆಯಲ್ಲಿ ಕರ್ನಾಟಕದ ಪರ ನಿರ್ಣಯ ಅಂಗೀಕರಿಸಲು ಮೇಯರ್ ಪ್ರೀತಿ ಕಾಮಕಾರ ಅವರು ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕಿದ್ದು, ಸರಕಾರದ ಅಭಿಪ್ರಾಯ ಕೇಳಿದ್ದಾರೆ.
ಸರಕಾರ ಮತ್ತು ನಗರಾಭಿವೃದ್ಧಿ ಇಲಾಖೆಯ ಅನುಮತಿ ಕೋರಿ ಅವರು ರೂಲಿಂಗ್ ಹೊರಡಿಸಿದ್ದಾರೆ. ಮಹಾನಗರ ಪಾಲಿಕೆ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಅವಕಾಶ ಇದೆಯಾ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಸದಸ್ಯರು ಸ್ಪಷ್ಟ ನಿರ್ಣಯ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಇನ್ನು ಕೆಲ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಮೌನ ವಹಿಸಿದ್ದಾರೆ. ಕನ್ನಡಪರ ನಾಮನಿರ್ದೇಶದ ಸದಸ್ಯರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಅಂಗೀಕರಿಸುವಂತೆ ಒತ್ತಾಯಿಸಿದರೆ, ಎಂಇಎಸ್ ಸದಸ್ಯರು ಎಂದಿನಂತೆ ಕರ್ನಾಟಕ ಪರ ನಿರ್ಣಯ ಕೈಗೊಳ್ಳದಂತೆ ಒತ್ತಾಯಿಸಿರುವ ಘಟನೆ ನಡೆದಿದೆ.
2005 ರಲ್ಲಿ ಆಗ ಮೇಯರ್ ಆಗಿದ್ದ ಎಂಇಎಸ್ ನ ವಿಜಯ ಮೋರೆ ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಎಂಬ ವಿವಾದಾತ್ಮಕ ಠರಾವ್ ಅಂಗೀಕರಿಸಿದ್ದರು. ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ಇದನ್ನೇ ಈಗ ದಾಖಲೆಯಾಗಿ ಪರಿಗಣಿಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕನ್ನಡ ಸಂಘಟನೆಗಳು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಅಂಗೀಕರಿಸುವಂತೆ ಒತ್ತಾಯಿಸಿ ಕನ್ನಡಿಗರ ಆಡಳಿತವಿರುವ ಮಹಾನಗರ ಪಾಲಿಕೆ ಮೇಲೆ ತೀವ್ರ ಒತ್ತಡ ಹೇರುತ್ತಿರುವುದನ್ನು ಇಲ್ಲಿ ಗಮನಿಸಬಹುದು.
