ಬೆಳಗಾವಿ,: ಮಧುಮೇಹ ಪೀಡಿತಗೊಂಡು ಮೊಣಕಾಲಿನ ಕೆಳಗೆ ರಕ್ತನಾಳದಲ್ಲಿ ಉಂಟಾದ ತೊಂದರೆ (ಡಯಾಬಿಟಿಕ್ ಫೂಟ್ / ಪಿವಿಡಿ ಖಾಯಿಲೆ) ಯಿಂದ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ಗಾಯ ಹಾಗೂ ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಅತ್ಯಾಧುನಿಕ ಮೆರಿಲ್ ಮೆಸನ್ ಇಂಟ್ರಾವ್ಯಾಸ್ಕುಲರ್ ಲಿಥೋಟ್ರಿಪ್ಸಿ ತಂತ್ರಜ್ಞಾನದ ಮೂಲಕ ಯಶಸ್ವಿ ಚಿಕಿತ್ಸಾ ಪ್ರಕ್ರಿಯೆ ನಡೆಸಿ ಕಾಲು ತುಂಡರಿ(ಕತ್ತರಿ)ಸುವದನ್ನು ಉಳಿಸುವಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನ್ಯುರೋ ಹಾಗು ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ವಿಭಾಗದ ತಜ್ಙವೈದ್ಯರು ಯಶಸ್ವಿಯಾಗಿದ್ದಾರೆ.
ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು,
ಗೋಕಾಕ ತಾಲೂಕಿನ 58 ವರ್ಷ ಹಾಗೂ ಬೆಳಗಾವಿಯ ಮೂಲದ 55 ವರ್ಷದ ವ್ಯಕ್ತಿಯು ಟೈಪ್ 2 ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ವ್ಯಕ್ತಿಯ ಕಾಲಿನಲ್ಲಿನ ರಕ್ತ ಸಂಚಾರ ಸ್ಥಗಿತಗೊಂಡು, ತೀವ್ರವಾದ ನೋವು ಹಾಗೂ ಗಾಯಗಳಿಂದ ಬಳಲುತ್ತಿದ್ದರು. ಈ ಹಿಂದೆ ಅವರಿಗೆ ಕಾಲಿನ ಎಂಜಿಯೊಪ್ಲಾಸ್ಟಿ ಮಾಡಿದರೂ ಈ ತೊಂದರೆ ನಿವಾರಣೆಯಾಗಿರಲಿಲ್ಲ.
ಆದ್ದರಿಂದ, ರೋಗಿಯು ತೀವ್ರತರವಾದ ನೋವಿನಿಂದ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿದ್ದರು ಎಂದು ತಿಳಿಸಿದರು.
ನ್ಯುರೋ ವೆಸ್ಕ್ಯುಲರ ಇಂಟರವೆನ್ಶನಲ್ ರೆಡಿಯಾಲಾಜಿ ತಜ್ಞವೈದ್ಯರಾದ ಡಾ. ನವೀನ ಮೂಲಿಮನಿ ಅವರು ಮಾತನಾಡಿ, ಇಲ್ಲಿಯ ವೈದ್ಯರು ರೋಗಿಯನ್ನು ತೀವ್ರತರವಾದ ತಪಾಸಣೆಗೂಳಪಡಿಸಿದಾಗ ಅವರ ಕಾಲಿನಲ್ಲಿ ಕ್ಯಾಲ್ಸಿಫೈಡ್ ರಕ್ತನಾಳಗಳು ಕಂಡು ಬಂದವು. ಕ್ಯಾಲ್ಸಿಫೈಡ್ ರಕ್ತನಾಳಗಳ ಚಿಕಿತ್ಸೆಯು ವೈದ್ಯಕೀಯ ಕ್ಷೇತ್ರದಲ್ಲೇ ತೀವ್ರ ಸವಾಲನ್ನೋಡ್ಡುವ ಪ್ರಕ್ರಿಯೆಯಾದ್ದರಿಂದ ಅತ್ಯಾಧುನಿಕ ನೂತನ ತಂತ್ರಜ್ಞಾನವಾದ ಇಂಟ್ರಾವಾಸ್ಕುಲರ್ ಲಿಥೊಟ್ರಿಪ್ಸಿ (ಐವಿಎಲ್) ಮೂಲಕ ರಕ್ತ ಸಂಚಾರವನ್ನು ಸುಗಮಗೊಳಿಸಲಾಯಿತು ಎಂದು ಹೇಳಿದರು.
ಈ ಚಿಕಿತ್ಸಾ ಪ್ರಕ್ರಿಯೆ ನೆರವೇರಿಸಲು ಮೆರಿಲ್ ಮೆಸನ್ ಲಿಥೋಟ್ರಪ್ಸಿ ಸಾಧನ ಬಳಸಲಾಗಿದೆ. ಈ ಅತ್ಯಾಧುನಿಕ ಉಪಕರಣವು ವಿಶೇಷ ಲಿಥೊಟ್ರಿಪ್ಸಿ ಬಲೂನ್ ಕ್ಯಾತೆಟರ್ ಮೂಲಕ ರಕ್ತನಾಳಗಳಲ್ಲಿನ ಗಟ್ಟಿಯಾದ ಕ್ಯಾಲ್ಸಿಯಂ ಅಂಶವನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಒಡೆಯುತ್ತದೆ. ಈ ಪ್ರಕ್ರಿಯೆಯಿಂದ ರಕ್ತನಾಳಗಳಲ್ಲಿನ ಸಂಚಾರ ಸುಧಾರಿತಗೊಂಡು, ಗಾಯಗಳನ್ನು ಕಡಿಮೆ ಮಾಡುತ್ತದೆ. ಅತ್ಯಂತ ಕಡಿಮೆ ನೋವಿನ ಹಾಗು ಪರಿಣಾಮಕಾರಿಯಾದ ಈ ವಿಧಾನವು ಶೀಘ್ರ ಚೇತರಿಕೆ ಹಾಗೂ ಕಾಲುಗಳನ್ನು ಉಳಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಡಾ. ಅಭಿನಂದನ ರೂಗೆ ಅವರು ಮಾತನಾಡಿ, ಕ್ಯಾಲ್ಸಿಫೈಡ್ ರಕ್ತನಾಳಗಳ ಚಿಕಿತ್ಸಾ ಪ್ರಕ್ರಿಯೆಯಲ್ಲಿ ನಮ್ಮ ದೇಶದಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಪ್ರಪ್ರಥಮ ಆಸ್ಪತ್ರೆ ಇದಾಗಿದ್ದು, ಗುಣಮಟ್ಟದ ಚಿಕಿತ್ಸೆ ನೀಡುವ ಬದ್ದತೆಯನ್ನು ಎತ್ತಿಹಿಡಿಯುತ್ತದೆ. ಇದರಿಂದಾಗಿ ಈ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಸುಲಭವಾಗಿ ದೊರೆಯುತ್ತಿವೆ. ರಕ್ತನಾಳಗಳ ಚಿಕಿತ್ಸೆಯಲ್ಲಿ ಆಸ್ಪತ್ರೆಯ ನ್ಯುರೋ ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ವಿಭಾಗವು ರಾಜ್ಯದಲ್ಲಿ ಸದಾ ಮುಂಚೊಣಿಯಲ್ಲಿದೆ ಎಂದ ಅವರು, ಚಿಕಿತ್ಸಾ ಪ್ರಕ್ರಿಯೆಗಳ ಕುರಿತು ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು.
ಈ ಚಿಕಿತ್ಸಾ ಪ್ರಕ್ರಿಯೆಯನ್ನು ನ್ಯುರೋ ಹಾಗು ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ತಜ್ಞವೈದ್ಯರಾದ ಡಾ. ಅಭಿನಂದನ್ ರೂಗೆ, ಡಾ. ಅಭಿಮಾನ್ ಬಾಲೋಜಿ ಅವರು ಯಶಸ್ವಿಯಾಗಿ ನೆರವೇರಿಸಿದರು.ಡಾ. ನವೀನ‌ ಮೂಲಿಮನಿ, ಡಾ. ಈರಣ್ಣ ಎಂ. ಹಿತ್ತಲಮನಿ, ಡಾ. ಬಸವರಾಜ್ ಬಿರಾದಾರ್ ಅವರು ಚಿಕಿತ್ಸಾ ಪ್ರಕ್ರಿಯೆಗೆ ಸಹಕರಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ನ್ಯುರೋ ಹಾಗು ವೆಸ್ಕುಲರ ಇಂಟರವೆನಶ್ನಲ್ ರೆಡಿಯಾಲಾಜಿ ತಜ್ಞವೈದ್ಯರಾದ ಡಾ. ಅಭಿನಂದನ್ ರೂಗೆ, ಡಾ. ಅಭಿಮಾನ್ ಬಾಲೋಜಿ, ಡಾ. ನವೀನ್ ಮೂಲಿಮನಿ, ಡಾ. ಈರಣ್ಣ ಎಂ. ಹಿತ್ತಲಮನಿ, ಡಾ. ಬಸವರಾಜ್ ಬಿರಾದಾರ್ ಅವರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ