ಬೆಳಗಾವಿ,:ಬೆಳಗಾವಿ-ಕಿತ್ತೂರು- ಧಾರವಾಡ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಹಕಾರ ನೀಡುತ್ತಿಲ್ಲ.ಈ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾಧೀನಪಡಿಸಿಕೊಳ್ಳಲು ಅವರು ಯಾವುದೇ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಯೋಜನೆಗೆ ಬೆಳಗಾವಿ ಜಿಲ್ಲೆಯಲ್ಲಿ 1200 ಎಕರೆ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮಾಡಿಕೊಳ್ಳಲಾಗಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ 45 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆಗಬೇಕು. ಈ ಬಗ್ಗೆ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ಈ ಸಮಸ್ಯೆ ಪರಿಹರಿಸಲು ಸರ್ವ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಒಂದು ವೇಳೆ ಅವರು ಸಹಕರಿಸದಿದ್ದರೆ ನಮ್ಮ ಬಳಿಯೂ ಪರ್ಯಾಯ ಮಾರ್ಗಗಳಿವೆ ಎಂದು ಹೇಳಿದರು.
ಬೆಳಗಾವಿ- ಕಿತ್ತೂರು- ಧಾರವಾಡ ನೇರ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ 937 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ 100 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಧಾರವಾಡ ಜಿಲ್ಲೆಯಲ್ಲಿ ಅಡೆತಡೆ ಎದುರಾಗಿದ್ದು ಈ ಮಾರ್ಗ ನಿರ್ಮಾಣವಾದರೆ ಬೆಳಗಾವಿ-ಧಾರವಾಡ ನಡುವೆ ಒಂದು ಗಂಟೆಗೂ ಹೆಚ್ಚು ಸಮಯ ಉಳಿತಾಯವಾಗಲಿದೆ. ಮಾತ್ರವಲ್ಲ ಉಭಯ ನಗರಗಳ ನಡುವೆ ರೈಲ್ವೆ ಸಂಪರ್ಕ ಹೆಚ್ಚಳವಾಗುತ್ತದೆ. ಸಚಿವ ಲಾಡ್ ಅವರೊಂದಿಗೆ ಈ ಬಗ್ಗೆ ಹಲವು ಸಲ ಮಾತನಾಡಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ಮಾತನಾಡಿದ್ದಾರೆ. ಆದರೆ ಎಷ್ಟೇ ಸಂಪರ್ಕ ಮಾಡಿದರು ಸಂತೋಷ ಲಾಡ್ ಸ್ಪಂದನೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯಕ್ಕಾಗಿ ಅಭಿವೃದ್ಧಿ ಕೆಲಸಗಳನ್ನು ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಸಂತೋಷ ಲಾಡ್ ರಾಜಕೀಯದಲ್ಲಿ ಇನ್ನೂ ಬೆಳೆಯುತ್ತಿರುವವರಷ್ಟೇ. ಅವರು ಯಾಕೆ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ಜೊತೆಗೂ ಮಾತುಕತೆ ನಡೆಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಜಿಲ್ಲಾಧಿಕಾರಿ ಭೇಟಿಯಾದಾಗ ನನ್ನದೇ ಭಾಷೆಯಲ್ಲಿ ಮಾತನಾಡಿದ್ದೇನೆ. ಯೋಜನೆಗೆ ಏಕೆ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಬೇಕು. ಯಾವುದೇ ಕಾರಣಕ್ಕೂ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಹರಿಯಾ ಣ, ಛತ್ತೀಸಗಡ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಗಳಲ್ಲಿ ರೈಲ್ವೆ ಯೋಜನೆಗಳಿಗೆ ಆಯಾ ರಾಜ್ಯ ಸರ್ಕಾರಗಳು ಉತ್ತಮವಾಗಿ ಸಹಕರಿಸುತ್ತೇವೆ. ಕರ್ನಾಟಕ ಸರಕಾರವನ್ನು ನೋಡಿ. ಅಭಿವೃದ್ಧಿ ಕೆಲಸಕ್ಕೆ ಇವರು ಸಹಕರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬೆಳಗಾವಿ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ನೀಡಲಾಗಿದೆ. 2014 ರಿಂದ ಕೇಂದ್ರ ಸರಕಾರ ರಾಜ್ಯಕ್ಕೆ 2009 ರೈಲ್ವೆ ಯೋಜನೆಗಳಿಗಾಗಿ ಬಿಡುಗಡೆಗೊಳಿಸಿದೆ. ಲೋಕಾಪುರ-ರಾಮದುರ್ಗ- ಸವದತ್ತಿ-ಧಾರವಾಡ ರೈಲ್ವೆ ಯೋಜನೆಗೆ ಸಂಬಂಧಿಸಿ ಮರು ಸಮೀಕ್ಷೆಗೆ ಆದೇಶವಾಗಿದೆ. ದಾಂಡೇಲಿ-ಅಳ್ನಾವರ ಮಾರ್ಗದಲ್ಲಿ ರೈಲ್ವೆ ಸೇವೆಯನ್ನು ಒಂದು ತಿಂಗಳಲ್ಲಿ ಆರಂಭಿಸಲಾಗುತ್ತದೆ. ಇಡೀ ದೇಶದಲ್ಲಿ ರೈಲ್ವೆ ನಿಲ್ದಾಣಗಳ ಚಿತ್ರಣ ಬದಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಗದೀಶ ಶೆಟ್ಟರ, ರಾಜ್ಯಸಭಾ ಈರಣ್ಣ ಕಡಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.