ಎಡೆಯೂರು ಸಿದ್ಧಲಿಂಗೇಶ್ವರರು ಲಿಂಗಾಯತ ಧರ್ಮವು ಗೃಹಸ್ಥರ ಸಾಂಸಾರಿಕ ಜಂಜಡದಲ್ಲಿ ಕಳೆದುಹೋಗಬಾರದೆಂದು ಮಠ ವ್ಯವಸ್ಥೆಯ ಮೂಲಕ ಸಾಂಸ್ಥೀಕರಣ ಗೊಳಿಸಿ, ಈ ಧರ್ಮ ಜಾಗೃತಿಗೆ ೭೦೧ ವಿರಕ್ತರನ್ನು ನೇಮಕ ಮಾಡಿ, ಲಿಂಗಾಯತ ಮಠ ಪರಂಪರೆಗೆ ನಾಂದಿ ಹಾಡಿದರು.
ಹಾಗೆ ನೋಡಿದರೆ ೧೨ನೇ ಶತಮಾನದಲ್ಲಿಯೇ ಬಸವಣ್ಣನವರ ಕಾಲದಲ್ಲಿ ವಿರಕ್ತರು ಇದ್ದರು. ಈ ಕುರಿತು ವಚನಗಳಲ್ಲಿ ಸಾಕಷ್ಟು ಪ್ರಸ್ತಾಪ ಬರುತ್ತದೆ. ಆಗ ಗುರು-ಜಂಗಮ-ವಿರಕ್ತ ಪರಿಕಲ್ಪನೆಯೇ ಬೇರೆಯಾಗಿದ್ದವು. ಆಧುನಿಕ ಕಾಲದಲ್ಲಿ ಇವುಗಳ ಸ್ವರೂಪವೇ ಬೇರೆಯಾಗಿದೆ ಎಂಬುದನ್ನು ಗಮನಿಸಬೇಕು.
ಹುಬ್ಬಳ್ಳಿ ಮೂರುಸಾವಿರಮಠದಿಂದ ೧೯೬೦ರಲ್ಲಿ “ವೀರಶೈವ ಸದಾಚಾರ  ಸಂಗ್ರಹ” ಎಂಬ ಕೃತಿ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳಲ್ಲಿ ಪ್ರಕಟವಾಗಿದೆ. ಅದರಲ್ಲಿ ಭಕ್ತವರ್ಗವೇ ಬೇರೆ ಮಾಹೇಶ್ವರ ವರ್ಗವೇ ಬೇರೆ. ಮಾಹೇಶ್ವರ ವರ್ಗದಲ್ಲಿ ಜನಿಸಿದವರು ಮಾತ್ರ ಜಂಗಮಸ್ಥಲಕ್ಕೆ ಸಲ್ಲುತ್ತಾರೆಂದು ಬರೆದಿದ್ದಾರೆ. ಅಂದರೆ ಜಾತಿಯಿಂದ ಜಂಗಮ ವರ್ಗದಲ್ಲಿ ಹುಟ್ಟಿದವರಿಗೆ ಮಾತ್ರ ಈ ಜಂಗಮಸ್ಥಲ ಮೀಸಲಾಗಿದೆ ಎಂದು ಅಲ್ಲಿ ಪ್ರತಿಪಾದಿಸಲಾಗಿದೆ. ಇನ್ನೂ ವಿಶೇಷವೆಂದರೆ ಗುರುಸ್ಥಲದ ಮಠಗಳಿಗೂ ವಿರಕ್ತ ಮಠಗಳಿಗೂ ಈ ಮಾಹೇಶ್ವರ ವರ್ಗದವರೇ ಮಠಾಧೀಶರಾಗಬೇಕೆಂಬ ಅಲಿಖಿತ ಸಂವಿಧಾನವನ್ನು ಈ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.
12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಜಂಗಮ ತತ್ವವನ್ನು ಕುರಿತು ತುಂಬ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಲಿಂಗಾಯತರಲ್ಲದವರೂ ಕೂಡ ಜಂಗಮಸ್ಥಲಕ್ಕೆ ಏರಬಹುದೆಂದು ಶರಣರು ಪ್ರತಿಪಾದಿಸಿದ್ದಾರೆ.
ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು
ಭಕ್ತನ ಮಾಡಿದ ಬಳಿಕ ಆ ಭಕ್ತ ಹೋಗಿ ಜಂಗಮನಾಗಿ
ಗುರುವಿನ ಮಠಕ್ಕೆ ಬಂದಡೆ ಆ ಜಂಗಮವೆನ್ನ ಶಿಷ್ಯನೆಂದು
ಗುರುವಿನ ಮನದಲ್ಲಿ ಹೊಳೆದಡೆ ಪಂಚ ಮಹಾಪಾತಕ
ಈ ಜಂಗಮಕ್ಕೆ ಎನ್ನ ಗುರುವೆಂದು ಮನದಲ್ಲಿ ಭಯಭೀತಿ
ಹೊಳೆದಡೆ ರೌರವ ನರಕ.
ಇಂತೀ ಭೇದವ ಕೂಡ ಕೂಡಲಚನ್ನಸಂಗಯ್ಯನಲ್ಲಿ
ನಿಮ್ಮ ಶರಣರೇ ಬಲ್ಲರು.
ಚನ್ನಬಸವಣ್ಣನವರ ಈ ವಚನದ ಅಭಿಪ್ರಾಯದಂತೆ ಸಾಧನೆಯಿಂದ ಯಾರೂ ಬೇಕಾದವರೂ ಜಂಗಮಸ್ಥಲಕ್ಕೆ ಏರಬಲ್ಲರು. ಅಮುಗೆ ರಾಯಮ್ಮನಂತೂ ತನ್ನ ಅನೇಕ ವಚನಗಳಲ್ಲಿ ವಿರಕ್ತರ ನಿಜಸ್ವರೂಪವನ್ನು ತಿಳಿಸುವ ಪ್ರಯತ್ನ ಮಾಡಿದ್ದಾಳೆ. “ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತರೆನ್ನಬಹುದೆ? ಕಾವಿಯ ಹೊದ್ದು ತಿರುಗುವ ಜೀವಗಳ್ಳರು ವಿರಕ್ತರೆ? ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ವಿರಕ್ತರೆಂದಡೆ ಅಘೋರನರಕ ತಪ್ಪದು ಅಮುಗೇಶ್ವರಲಿಂಗವೆ” (ಅಮುಗೆ ರಾಯಮ್ಮನ ವಚನ ೯೭) ಎಂದು ಪ್ರತಿಕ್ರಿಯಿಸುತ್ತಾಳೆ. ಹೊನ್ನ, ಹೆಣ್ಣು, ಮಣ್ಣ ಬಿಟ್ಟಡೇನು ವಿರಕ್ತನಾಗಬಲ್ಲನೆ? ಆದ್ಯರ ವಚನಂಗಳ ಹತ್ತು ಸಾವಿರವ ಲೆಕ್ಕವಿಲ್ಲದೆ ಓದಿದಡೇನು ನಿತ್ಯರಾಗವಲ್ಲರೆ? ಮಂಡೆಯ ಬೋಳಿಸಿಕೊಂಡು ಅಂದಚಂದಕೆ ತಿರುಗುವ ಜಗಭಂಡರ ಮೆಚ್ಚುವನೆ (ಅಮುಗೆ ರಾಯಮ್ಮನ ವಚನ ೧೧೬) ಎಂದು ಮತ್ತೊಂದು ವಚನದಲ್ಲಿ ವೇಷಧಾರಿ ವಿರಕ್ತರನ್ನು ಟೀಕಿಸಿದ್ದಾಳೆ. ರಾಯಮ್ಮ ತನ್ನ ಮತ್ತೊಂದು ವಚನದಲ್ಲಿ ವಿರಕ್ತನ ಸಮಸ್ತ ಲಕ್ಷಣಗಳನ್ನು ತುಂಬ ಅರ್ಥಪೂರ್ಣವಾಗಿ ಹೀಗೆ ವಿವರಿಸುತ್ತಾಳೆ. “ವಿರಕ್ತನಾದವನು ವಾಯು ಬೀಸದ ಉದಕದಂತಿರಬೇಕು, ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು. ದರಿದ್ರಗೆ ನಿಧಾನ ಸೇರಿದಂತಿರಬೇಕು; ರೂಹಿಲ್ಲದ ಮಾರುತನಂತಿರಬೇಕು; ಹಂಡನಗಲಿದ ಮದಗಜ ಹಿಂಡ ಸೇರಿದಂತಿರಬೇಕು; ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು. ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು (ವಚನ ೫೧) ಎಂದು ವಿರಕ್ತರ ಲಕ್ಷಣದ ವ್ಯಾಖ್ಯಾನ ಮಾಡುತ್ತಾಳೆ.
ಅಂಬಿಗರ ಚೌಡಯ್ಯನಂತೂ ವಿರಕ್ತರ ಗುಣದೋಷಗಳನ್ನು ಹಿಗ್ಗಾಮುಗ್ಗಾ ಭಾಷೆ ಪ್ರಯೋಗದ ಮೂಲಕ ಜಾಲಾಡಿಸಿಬಿಟ್ಟಿದ್ದಾನೆ. ಪ್ರಾಯಶಃ ಚೌಡಯ್ಯನಷ್ಟು ನಿಷ್ಠುರವಾಗಿ ಮಾತನಾಡುವ ಶರಣರು ಸಿಗುವುದು ದುರ್ಲಭ. ವೇಷಧಾರಿ ವಿರಕ್ತರನ್ನು ಬಹಳಷ್ಟು ವಚನಕಾರರು ಟೀಕಿಸಿರುವುದನ್ನು ವಚನಗಳಲ್ಲಿ ಕಾಣುತ್ತೇವೆ.
ವಚನಕಾರರ ಕಾಲದಲ್ಲಿಯೇ ಅಲ್ಲಮನಂತಹ ವಿರಕ್ತ ಶಿರೋಮಣಿ ಜಂಗಮ ಶ್ರೇಷ್ಠರು ಇದ್ದರು ಎಂಬುದನ್ನು ಮರೆಯಲಾಗದು. ಶೂನ್ಯಪೀಠದ ಮೊದಲ ಪೀಠಾಧಿಪತಿಯಾದ ಅಲ್ಲಮಪ್ರಭುವನ್ನು ಬಹುತೇಕ ಶರಣರು ವಿರಕ್ತ ನಿರಾಭಾರಿ ಜಂಗಮನೆಂದೇ ಗುರುತಿಸಿದ್ದಾರೆ. ಶಿವಯೋಗಿ ಸಿದ್ಧರಾಮೇಶ್ವರರು ಶೂನ್ಯಪೀಠದ ಮೂರನೆಯ ಅಧಿಪತಿಗಳಾದ ಕಾರಣ ಅವರನ್ನು ಜಂಗಮಸ್ಥಲಕ್ಕೆ ತಂದು ಗೌರವಿಸಿದ ವಚನಗಳೂ ನಮಗೆ ಸಿಗುತ್ತವೆ.
ಜಂಗಮ ಶಬ್ದದ ಅರ್ಥನಿಷ್ಪತ್ತಿಯನ್ನು ಕುರಿತು ಹಿರಿಯ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಅವರು ತುಂಬ ಅರ್ಥಪೂರ್ಣವಾಗಿ ಹೀಗೆ ವಿವರಿಸಿದ್ದಾರೆ : “ಹನ್ನೆರಡನೆಯ ಶತಮಾನದಲ್ಲಿ ಜಂಗಮರು ಸದಾ ಸಂಚರಿಸುತ್ತಿದ್ದ, ಮನೆಯಿಲ್ಲದ, ಆದರೆ ಬದುಕಿನಲ್ಲಿ ನಿರ್ದಿಷ್ಟ ಗುರಿಯಿದ್ದ ವ್ಯಕ್ತಿಗಳನ್ನು ಸೂಚಿಸುತ್ತಿತ್ತು ಎಂಬುದನ್ನು ನೋಡಿದ್ದೇವೆ. ಅಲ್ಲಮಪ್ರಭು ಆ ದೃಷ್ಟಿಯಿಂದ ಒಬ್ಬ ಜಂಗಮ. ಅವನು ಹುಟ್ಟಿನಿಂದ ಶೂದ್ರನಾಗಿದ್ದರೂ, ಕಾಮಲತೆಯ ಅನಿರೀಕ್ಷಿತ ಸಾವಿನ ಬಳಿಕ ಅತಿ ದುಃಖಿತನಾಗಿ, ಅಕಸ್ಮಾತ ದೊರೆತ ಶಿವಲಿಂಗದಿಂದಾಗಿ ಅವನಿಗೆ ಬದುಕಿನಲ್ಲಿ ಒಂದು ಗುರಿ ಕಾಣಿಸಿ, ಶಿವಸಾಕ್ಷಾತ್ಕಾರಕ್ಕಾಗಿ ಅವನು ಎಲ್ಲೆಲ್ಲಿಯೋ ತಿರುಗುತ್ತಾನೆ. ಈ ತಿರುಗಾಟದಲ್ಲಿ ಅವನು ಅನುಭವಿಸಿದ ಹಸಿವು, ಬಾಯಾರಿಕೆ, ಮಾನಸಿಕ ಕ್ಷೋಭೆ, ಕಾಮಲತೆಯ ನೆನಪು, ದೈಹಿಕ ಲೈಂಗಿಕ ಬಯಕೆಗಳು, ಕಾಮಲತೆಯ ಮೇಲಿನ ವ್ಯಾಮೋಹವನ್ನು ದೈವೀ ಪ್ರೇಮವಾಗಿ ಮಾರ್ಪಡಿಸಿಕೊಂಡುದು, ದೈವೀ ಸಾಕ್ಷಾತ್ಕಾರ ಇವೆಲ್ಲ ಅನುಭವಗಳು ಅವನ ವಚನಗಳಲ್ಲಿ ಪಡಿ ಮೂಡಿವೆ. ಅವನ ನಿರಂತರ ಸಂಚಾರ ತೀವ್ರವೈರಾಗ್ಯಗಳು ಅವನನ್ನು ಜಂಗಮನನ್ನಾಗಿ ವಿರಕ್ತನನ್ನಾಗಿ ಮಾರ್ಪಡಿಸಿದುವು. ಹದಿನಾರನೇ ಶತಮಾನದ ತೋಂಟದ ಸಿದ್ಧಲಿಂಗಯತಿಗಳೂ ಕೂಡ ಸಂಚಾರ ಮತ್ತು ವೈರಾಗ್ಯಗಳಿಂದ ಜಂಗಮರೆಂದೂ ವಿರಕ್ತರೆಂದೂ ಕರೆಯಿಸಿಕೊಂಡರು. ಹನ್ನೆರಡನೆಯ ಶತಮಾನದಲ್ಲಿ ಜಂಗಮತ್ವವು ವಿರಕ್ತತ್ವದ ಹಿಂದಿನ ಮಜಲಾಗಿದ್ದರೆ, ಹದಿನೈದು ಹದಿನಾರನೇ ಶತಮಾನಗಳಲ್ಲಿ ಅವೆರಡೂ ಒಂದೇ ಪರಿಗಣಿತವಾದುವೆಂದು ಹೇಳಲು ಆಧಾರಗಳಿವೆ.
ಮೊದಲಿನಿಂದಲೂ ಪಂಚಪೀಠಗಳಿಗೆ ಸೇರಿದ ಗುರುವರ್ಗದಯ್ಯನವರ ಕೈಯಲ್ಲಿ ವಿದ್ಯೆ ಇದ್ದುದರಿಂದ ಅವರು ಗುರುಗಳಿಗಿಂತ ಹಿರಿಯ ಸ್ಥಾನವನ್ನು ಹೇಳುತ್ತಿದ್ದ “ಜಂಗಮ’’ ಪದವನ್ನು ತಮಗೆ ಅನ್ವಯವಾಗುವಂತೆ ಮಾಡಿಕೊಂಡಂತೆ ಕಾಣುತ್ತದೆ. ಈಗ ಇರುವಂತೆ “ಜಂಗಮ’’ ಶಬ್ದವು ಲಿಂಗಾಯತ ಜನಾಂಗದ ಒಂದು ಪುರೋಹಿತ ಉಪಜಾತಿವಾಚಕವಾಗಿದೆ. ಇದು ಆ ಪದದ ಮೂಲ ಪ್ರಾಗತಿಕ ಲಕ್ಷಣವನ್ನು ಕಳಚಿ ಜಾತಿವಾಚಕವಾಗುವಂತೆ ಮಾಡಿದುದಾಗಿದ್ದು ಆ ಶಬ್ದದ ಅರ್ಥ ಪಡೆದ ದುರ್ಗತಿಯನ್ನು ಹೇಳುತ್ತದೆ. “ಜಂಗಮ’’ವು ತನ್ನ ನಡತೆ, ಮನೋಧರ್ಮಗಳಿಂದಾಗಿ ಯಾವನೇ ವ್ಯಕ್ತಿ ಪಡೆಯುತ್ತಿದ್ದ ಸ್ಥಿತಿಯನ್ನು ಹೇಳುತ್ತಿದ್ದು, ಕ್ರಮೇಣ ಜಾತಿವಾಚಕವಾಯಿತು. ಹನ್ನೆರಡನೆಯ ಶತಮಾನದಲ್ಲಿ ಗುರು, ಜಂಗಮ ಬೇರೆ ಬೇರೆ ಆಗಿದ್ದು, ಆಧುನಿಕ ಕಾಲದಲ್ಲಿ ಎರಡೂ ಒಂದೇ ಆಗಿರುವುದು ಲಿಂಗಾಯತ ಸಮಾಜೋಧಾರ್ಮಿಕ ಇತಿಹಾಸದ ದುರಂತಗಳಲ್ಲಿ ಒಂದು.
ಹನ್ನೆರಡನೆಯ ಶತಮಾನದಲ್ಲಿ ವಚನಗಳಲ್ಲಿ “ಜಂಗಮ’’ ಶಬ್ದವು ಸಾಮಾನ್ಯವಾಗಿ ನಪುಂಸಕದಲ್ಲಿ ಬಳಕೆಯಾಗುತ್ತದೆ. ಒಮ್ಮೊಮ್ಮೆ “ಜಂಗಮಲಿಂಗ’’ ಎಂಬ ಶಬ್ದವೂ “ಜಂಗಮ’’ ಶಬ್ದದ ಅರ್ಥವನ್ನೇ ಹೇಳುತ್ತದೆ. “ಲಿಂಗ’’ ಶಿವನ ಸ್ಥಾವರ ರೂಪವಾದರೆ “ಜಂಗಮ’’ನು ಶಿವನ ಓಡಾಡುವ ರೂಪ. ಜಂಗಮನೂ ಲಿಂಗವೇ, ಶಿವನೇ. “ಲಿಂಗ’’ ನಪುಂಸಕಲಿಂಗದ ಶಬ್ದವಾದ್ದರಿಂದ “ಜಂಗಮ’’ ಶಬ್ದವೂ ನಪುಂಸಕದಲ್ಲಿ ಬಳಕೆಯಾಗುತ್ತಿತ್ತು. “ಜಂಗಮ’’ ಶಬ್ದವು ಓಡಾಟದಲ್ಲಿ ನಿರತನಾದ ಸನ್ಯಾಸಿ ಎಂಬರ್ಥದಲ್ಲಿ ಉತ್ತರ ಭಾರತದಲ್ಲಿ ಬಳಕೆಯಲ್ಲಿದೆ. “ಜೋಗಿ ಜಂಗಮ’’ ಮಾತು ಕಬೀರ ಇತ್ಯಾದಿ ನಂತರ ಕೀರ್ತನೆಗಳಲ್ಲಿ ಕಾಣಿಸುತ್ತದೆ.” (ಡಾ. ಎಂ. ಚಿದಾನಂದಮೂರ್ತಿ : ಜಂಗಮರು ಐತಿಹಾಸಿಕ ವಿವೇಚನೆ (ಜಂಗಮ-ಶೇಗುಣಸಿ ಶಂಕರ ಸ್ವಾಮಿಗಳ ಅಭಿನಂದನ ಗ್ರಂಥ ಪು. 64)
ಈ ಜಂಗಮ ಪದ ವ್ಯಾಖ್ಯಾನದ ಹಿನ್ನೆಲೆಯಲ್ಲಿ ವಚನಕಾರರ ಆಶಯದ ನಿರಂಜನ ವಿರಕ್ತ ಜಂಗಮ ಪರಂಪರೆಗೆ ಮತ್ತೆ ಪುನರುಜ್ಜೀವನ ಕೊಟ್ಟವರು ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರು. ಅವರು ಲಿಂಗಾಯತ ಮಠ ಪರಂಪರೆಗೆ ಒಂದು ಹೊಸ ರೂಪವನ್ನು ಕೊಟ್ಟರು. ಇದರಿಂದ ಲಿಂಗಾಯತ ಧರ್ಮ ಪ್ರಚಾರ ಪ್ರಸಾರ ಕಾರ್ಯಗಳು ನಿತ್ಯ ನಿರಂತರ ಸಾಗಲು ಸಾಧ್ಯವಾಯಿತು. ಸಿದ್ಧಲಿಂಗರು ಎರಡು ಬಗೆಯ ಮಠಗಳನ್ನು ಅಸ್ತಿತ್ವಕ್ಕೆ ತಂದರು. ೧. ಪುರಾಣ ಚರಂತಿಕೆ ಮಠಗಳು, ೨. ವಿರಕ್ತ ಮಠಗಳು. ಸಿದ್ಧಲಿಂಗೇಶ್ವರರೊಡನೆ ಇದ್ದ ೭೦೧ ವಿರಕ್ತರ ಮೂಲಕವಾಗಿಯೇ ಅವರು ಈ ಬಗೆಯ ವ್ಯವಸ್ಥೆಯನ್ನು ರೂಪಿಸಿದರು. ಈ ೭೦೧ ಗಣಂಗಳು ಸ್ಥಾಪಿಸಿದ ಮಠಗಳು ಒಂದೊಂದು ಬುಡಕಟ್ಟಿನ ಮಠಕ್ಕೆ ಹೊಂದಿದವು. ಈ ಬುಡಕಟ್ಟಿನ ಹೆಸರುಗಳಲ್ಲಿ ಕೆಲವು ಹೆಸರುಗಳು “ಶಿವಪೂಜಾ ಬುಡಕಟ್ಟು, ಕಂಥೆ ಬುಡಕಟ್ಟು,  ಬಿಸಿ ಅಗ್ಗಣಿ ಬುಡಕಟ್ಟು” ಮುಂತಾದ ಹೆಸರುಗಳಿಂದಿವೆ. ಬುಡಕಟ್ಟಿನ ಮಠಗಳ ಸ್ವರೂಪವನ್ನು ಕುರಿತು ನಿರಂಜನ ವಂಶರತ್ನಾಕರ ಹೀಗೆ ಹೇಳುತ್ತದೆ :
“ಬುಡಕಟ್ಟಿನ ಮಠಸ್ಥರಾದ ಆ ಮೂರ್ತಿಗಳಲ್ಲಿ ಸ್ಥಲ ಕೂಡಿ ಶಾಸ್ತ್ರ ಸಂಪಾದನೆಯಂ ಮಾಡಿಕೊಂಡ ಗಣವರರು ಈ ಬುಡಕಟ್ಟಿನ ಚರಮೂರ್ತಿಗಳಿಂದ ಚರಂತಿಗೆ ಪುಸ್ತಕವೆಂದರೆ ಚನ್ನಬಸವ ಪರಾಣ, ಬಸವ ಪುರಾಣ ಮುಂತಾದ ಪುರಾಣಗಳನ್ನು ತಮ್ಮಿಂದ ಷಟ್ಸ್ಥಲ ಜ್ಞಾನೋಪದೇಶವಂ ಪಡೆದು ಷಟ್ ಸ್ಥಲಾಶ್ರಮವಂ ಹೊಂದಿದ ತಮ್ಮಯ ಶಿಷ್ಯೋತ್ತಮನಿಗೆ ಭಕ್ತಗಣವರರ ಮಧ್ಯದಿ ಆ ಪುಸ್ತಕಗಳಂ ಕೊಟ್ಟು ತಮ್ಮ ಸ್ವಯಾಸನವಂ ಕೊಟ್ಟರೆ ಪುರಾಣ ಚರಂತಿಕೆ ಎಂತಲೂ ಪಳ್ಳೀಚರಂತಿಗೆ ಎಂತಲೂ ಈ ಎರಡು ನಾಮಗಳು ಬರುತ್ತವೆ” (ನಿರಂಜನ ವಂಶರತ್ನಾಕರ ಪು. ೪೧).
ಪುರಾಣ ಚರಂತಿಕೆ ಮಠದವರು ಗ್ರಾಮೀಣ ಪ್ರದೇಶಗಳಲ್ಲಿಯ ಜನಸಮೂಹಕ್ಕೆ ಶಿವಶರಣರ ಪುರಾಣಗಳನ್ನು  ಹೇಳುತ್ತ, ಧರ್ಮ, ನೀತಿಗಳನ್ನು ಬೋಧಿಸುತ್ತ ಧರ್ಮೋರ್ದಧಾರ ಕಾರ್ಯಗಳನ್ನು ಮಾಡುವುದು ಅವರ ಕರ್ತವ್ಯವಾಗಿತ್ತು. ಈ ವಿಧದ ಕಾರ್ಯಗಳನ್ನು ಅವರು ಮಾಡುತ್ತಿದ್ದ ಕಾರಣವಾಗಿ ಆ ಕಾಲದಲ್ಲಿ ಅನೇಕ ಪುರಾಣಗಳು ಸೃಷ್ಟಿಯಾದವು ಮತ್ತು ಶರಣ ಸಾಹಿತ್ಯದಲ್ಲಿ ಈ ಪೌರಾಣಿಕ ಸಾಹಿತ್ಯ ಹೆಚ್ಚು ಅಸ್ತಿತ್ವಕ್ಕೆ ಬಂದಿತು.
ಇನ್ನು ಚರಮೂರ್ತಿಗಳ ಮಠ ಅಥವಾ ವಿರಕ್ತಮಠಗಳ ಸ್ವರೂಪ ಹೇಗಿತ್ತು ಎಂದರೆ- ತೋಂಟದ ಸಿದ್ಧಲಿಂಗೇಶ್ವರರ ಎಡೆಯೂರು ಕೇಂದ್ರವಾಗಿಟ್ಟುಕೊಂಡು ಉಳಿದೆಲ್ಲ ಮಠಗಳು ಶಾಖಾಮಠಗಳೆನಿಸಿದ್ದವು. ಈ ಶಾಖಾ ಮಠಗಳಲ್ಲಿ ವಾಸಿಸುವ ವಿರಕ್ತರನ್ನು ಚರಮೂರ್ತಿಗಳು ಎಂದು ಕರೆಯುತ್ತಿದ್ದರು. ಸಮಯಭೇದ ಹುಟ್ಟಿದ ತರುವಾಯವೂ ಐದು ಪೀಠದವರು ತಮ್ಮ ತಮ್ಮ ಶಾಖಾಮಠಗಳಿಗೆ ಮಠಾಧಿಪತಿಗಳನ್ನು ಮಾಡಿದಾಗ, ಅವರನ್ನು ಚರಮೂರ್ತಿಗಳೆಂದೇ ಕರೆಯಲಾಗುತ್ತಿತ್ತು. ಚಿತ್ರದುರ್ಗದ ಜಯದೇವ ಜಗದ್ಗುರುಗಳು ಕೊಲ್ಲಾಪುರದ ಶಾಹು ಮಹಾರಾಜರು ಜಾಗ ಕೊಟ್ಟ ಕಾರಣಕ್ಕಾಗಿ ಕೊಲ್ಲಾಪುರದಲ್ಲಿ ಒಂದು ಮಠವನ್ನು ಸ್ಥಾಪಿಸಿದರು. ಈ ಮಠದ ಉಸ್ತುವಾರಿ ನೋಡಿಕೊಳ್ಳಲು ಗುರುಶಾಂತ ಸ್ವಾಮಿಗಳನ್ನು ನೇಮಿಸಿದರು. ಅವರು ಪತ್ರ ಬರೆಯಬೇಕಾದರೆ “ಶ್ರೀಮನ್ಮಹರಾಜ ನಿರಂಜನ ಜಗದ್ಗುರು ಚಿನ್ಮೂಲಾದ್ರಿ ಮುರುಘರಾಜೇಂದ್ರ ಬೃಹನ್ಮಠದ ಶಾಖಾ ಚರಮೂರ್ತಿಗಳಾದ ಗುರುಶಾಂತ ಸ್ವಾಮಿಗಳು” ಎಂದೇ ಬರೆದುಕೊಳ್ಳುತ್ತಿದ್ದರು. ಹೀಗೆ ಚರಮೂರ್ತಿಗಳು ಮೂಲಪೀಠದ ಗುರುಗಳ ಆಜ್ಞೆಯಂತೆ ಶಾಖಾಮಠಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತ ಹೋಗುತ್ತಿದ್ದರು.
ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದ ಹಿಂದಿನ ಶ್ರೀಗಳಾಗಿದ್ದ ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮಿಗಳು ಗದುಗಿನ ತೋಂಟದಾರ್ಯಮಠದ ಶಾಖಾಮಠ ಶಿರೋಳ ತೋಂಟದಾರ್ಯಮಠದ ಸ್ವಾಮಿಗಳಾಗಿದ್ದರು. ಆದರೆ ಅವರು ಅಲ್ಲಿ ಚರಮೂರ್ತಿಗಳಾದ ಕಾರಣ, ಅಲ್ಲಿ ತಮಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲವೆಂದು ತಿಳಿದು ಗದುಗಿನ ಜಗದ್ಗುರು ತೋಂಟದ ಸಿದ್ಧಲಿಂಗ ಸ್ವಾಮಿಗಳ ಗಮನಕ್ಕೆ ತಂದು, ತಮಗೆ ಬೇರೆ ಮಠ ದೊರೆತರೆ, ಅಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದು ಎಂದು ಹೇಳುತ್ತಾರೆ. ತದನಂತರ ಅವರು ಚಿಂಚಣಿ ಮಠಕ್ಕೆ ಬಂದು, ಕನ್ನಡ ಪರ ಗ್ರಂಥ ಪ್ರಕಟಣೆಯಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿ, ಗಡಿಭಾಗದ ಕನ್ನಡ ಸ್ವಾಮೀಜಿ ಎಂದೇ ಖ್ಯಾತರಾಗುತ್ತಾರೆ ಎಂಬುದನ್ನು ಗಮನಿಸಬೇಕು.
ಈ ವಿರಕ್ತ ಸ್ವಾಮಿಗಳ ಕಾರ್ಯಸ್ವರೂಪವನ್ನು ಕುರಿತು ನಿರಂಜನ ವಂಶ ರತ್ನಾಕರ ಹೀಗೆ ಪ್ರತಿಪಾದಿಸುತ್ತದೆ : “ಪ್ರಭು ಚನ್ನಬಸವರಾಜೇಂದ್ರರು….ಸಿದ್ಧರಾಮೇಶಂಗೆ ನಿರೂಪಿಸಿದ ಗುಹೇಶ್ವರ ವಚನ, ಕರಣಹಸಿಗೆ, ಮಿಶ್ರಾರ್ಪಣ, ಸಿದ್ಧರಾಮೇಶ್ವರರ ಮಂತ್ರಗೋಪ್ಯ, ಅಕ್ಕಗಳ ಸೃಷ್ಟಿಯ ವಚನ, ಹಿರಿಯ ಮಂತ್ರಗೋಪ್ಯ, ಶೂನ್ಯಸಂಪಾದನೆಗಳನ್ನು ಸಂಗ್ರಹಿಸಿ….ಶಿವಮಂತ್ರ ಗುರುಪ್ರಸಾದ ಅಂಗಲಿಂಗ ಸಾಮರಸ್ಯ ಮುಂತಾಗಿ ಅಂಗತತ್ವ 25, ಲಿಂಗತತ್ವ 11 ಕೂಡಿ 36 ತತ್ವಂಗಳಂ ತಿಳಿದಾತನು….ಆ ಶಿಷ್ಯೋತ್ತಮನಿಗೆ ಶಿವಾನುಭವ ಶಾಸ್ತ್ರವಂ ಶ್ರವಣಗೊಳಿಸಬೇಕು. ಆವೇಳೆಯಲಿ… ಎರಡನೆಯವರು ಅಲ್ಲಿ ಇರಕೂಡದು. ಆಮೇಲೆ ಸಕಲ ಭಕ್ತಗಣದ ಸಾಕ್ಷಿಯಾಗಿ ಶಿಷ್ಯೋತ್ತಮನಲ್ಲಿ ಸಾಮರಸ್ಯವಂ ಮಾಡುತ್ತ ನಡೆಯುವವನೆ ವಿರಕ್ತ….ಈ ಶಿವಾನುಭವ ಚರಮೂರ್ತಿಯು ತಮ್ಮ ಶಿಷ್ಯರಾದ ಬ್ರಹ್ಮಚಾರಿಗಳಾದ ಮರಿಗಳು ಗುರು ಉಪದೇಶವಂ ಪಡೆದರೂ ಆ ಮರಿಗಳು ಕರಣಹಸಿಗೆ ಮುಂತಾದ ಶಿವಾನುಭವ ಶಾಸ್ತ್ರದ ನುಡಿಕಟ್ಟುಗಳು ನೂರೊಂದು ಸ್ಥಲದ ವಿಚಾರಗಳು ಗುರುಗಳಿಂದ ಆ ಶಾಸ್ತ್ರವಂ ಸಂಪಾದನವ ಮಾಡಿಕೊಳ್ಳದವರಿಗೆ ಆ ಶಾಸ್ತ್ರದ ನುಡಿಗಳಂ ಹೇಳಕೂಡದು. ಈ ಐದು ಶಾಸ್ತ್ರ ಬಾರದೆ ನಿರಕ್ಷರಿಗಳಿಗೆ ಶಿವಾನುಭವ ಚರಂತಿಗೆಯಂ ಕೊಡಕೂಡದು” ಎಂದು ಹೇಳಲಾಗಿದೆ. ವಿರಕ್ತರ ನಿರಂಜನ ಪಟ್ಟಾಧಿಕಾರ ಸಮಾರಂಭದಲ್ಲಿ ಬಸವಣ್ಣನವರ ಷಟ್ಸ್ಥಲ ವಚನಗಳ ಕಟ್ಟುಗಳು, ಶೂನ್ಯಸಂಪಾದನೆ, ಮಿಶ್ರಾರ್ಪಣ, ಮಂತ್ರಗೋಪ್ಯ, ಕರಣಹಸಿಗೆ ಮೊದಲಾದ ಶರಣ ಸಾಹಿತ್ಯ ಕಟ್ಟುಗಳನ್ನು ನೀಡಿ, ಇದೇ ನಿನ್ನ ನಿಜವಾದ ಆಸ್ತಿ, ಇವುಗಳ ಅಧ್ಯಯನ ಅನುಸಂಧಾನ ಮಾಡುವುದೇ ನಿನ್ನ ಜೀವನದ ಪರಮ ಗುರಿ ಎಂದು ಹೇಳಿ ಕೊಡುತ್ತಾರೆ. 
ಆದರೆ ಪ್ರಸ್ತುತ ವರ್ತಮಾನ ಕಾಲದಲ್ಲಿ ಈ ಬಗೆಯ ಮಠಗಳು ನಮಗೆ ನೋಡಲು ಸಿಗುವುದಿಲ್ಲ. ಈಗ ವಿರಕ್ತ ಮಠ ಪರಂಪರೆ ಮಾತ್ರ ಉಳಿದುಕೊಂಡಿವೆ. ಸಮಯಭೇದ ಹುಟ್ಟುವ ಪೂರ್ವದಲ್ಲಿ ಪ್ರಾಯಶಃ ಈ ಬುಡಕಟ್ಟಿನ ಮಠಗಳು ಅಸ್ತಿತ್ವದಲ್ಲಿದ್ದವು.
ಸಿದ್ಧಲಿಂಗೇಶ್ವರರು ಮಾಡಿದ ಕ್ರಾಂತಿಯ ಫಲಿತಗಳನ್ನು ಡಾ. ಫ.ಗು.ಹಳಕಟ್ಟಿ ಅವರು ಹೀಗೆ ದಾಖಲಿಸುತ್ತಾರೆ : “ತೋಂಟದಾರ್ಯರು ಲಿಂಗಾಯತ ಸಮಾಜದಲ್ಲಿ  ಮಹತ್ತರವಾದ ಕ್ರಾಂತಿಯುಂಟು ಮಾಡಿದರು. ಇವರ ಪ್ರಯತ್ನಗಳ ಮೂಲಕ ಆಗ ಗ್ರಾಮ, ಪಟ್ಟಣ, ಪ್ರಾಂತಗಳಲ್ಲೆಲ್ಲ ಲಿಂಗಾಯತ ಧರ್ಮವು ಬಲಪಟ್ಟಿತು. ತೋಂಟದಾರ್ಯರು ಮೊದಲು ವಚನ ಗ್ರಂಥಗಳನ್ನು ಸರಿಪಡಿಸಿದರು. ಸ್ವತಃ ವಚನಕಾರರಾದರು. ವಿದ್ವಾಂಸರನ್ನು ತಮ್ಮಲ್ಲಿ ಬರಮಾಡಿಕೊಂಡರು. ದೇಶಪರ್ಯಟನ ಮಾಡಿದರು. ಜನಾಂಗದ ಸ್ಥಿತಿಯನ್ನು ಚೆನ್ನಾಗಿ ತಿಳಿದರು. ಸಮಾಜಕ್ಕೋಸ್ಕರ ಒಂದು ಕಟ್ಟನ್ನು ಮಾಡಿದರು. ಇದರ ಮೂಲಕ ಸಮಾಜದ ಶಿಥಿಲತೆಯನ್ನು ದೂರ ಮಾಡಿದರು. ಇದಕ್ಕೋಸ್ಕರ ಹೊಸ ಬಗೆಯ ಮಠಗಳನ್ನು ಸ್ಥಾಪಿಸಿದರು. ಈ ವ್ಯವಸ್ಥೆಯನ್ನು ಬರೇ ವಿಜಯನಗರದ ರಾಜ್ಯದಲ್ಲಷ್ಟೇ ಅಲ್ಲ, ಮುಸಲ್ಮಾನರ ಆಳ್ವಿಕೆಗೆ ಒಳಪಟ್ಟ ಉತ್ತರ ದೇಶದಲ್ಲಿಯೂ ಕೂಡ ಮಾಡಿದರು. ಆದುದರಿಂದಲೇ ಪರಧರ್ಮೀಯರ ಧಾರ್ಮಿಕ ಉಪಟಳಗಳು ದೇಶದಲ್ಲಿ ಏನೂ ನಡೆಯದೆ ಧರ್ಮವು ಇಲ್ಲಿ ಸ್ಥಿರತರವಾಗಿ ಉಳಿಯಲು ಕಾರಣವಾಯಿತು. ತೋಂಟದಾರ್ಯರು ಮಾಡಿದ ಅನೇಕ ಕಟ್ಟುಗಳಲ್ಲಿ ವಚನ ಶಾಸ್ತ್ರದ ಮರ್ಮಗಳನ್ನು ಗುಪ್ತವಾಗಿ ಇಡಬೇಕೆಂದು ಅವರು ಮಾಡಿದ ನಿರ್ಬಂಧವು ಮಾತ್ರ ಯೋಗ್ಯವಾಯಿತೆಂದು ನಾವು ಅನ್ನಲಾರೆವು. ಅವರು ಕರಣಹಸಿಗೆ, ೩೬ ತತ್ವಗಳು, ಆಯಾ ಸ್ಥಲಗಳ ಪರಸ್ಪರ ಸಂಬಂಧ ನೂರೊಂದು ಸ್ಥಲಗಳ ಜ್ಞಾನ ಇವುಗಳ ನುಡಿಕಟ್ಟುಗಳನ್ನು ಬಹಿರಂಗಗೊಳಿಸಬಾರದೆಂದು ಅವರು ಗೊತ್ತು ಪಡಿಸಿದರು. ಈ ವೃತ್ತಿಯು ಮಠಾಧಿಕಾರಿಗಳಲ್ಲಿ ಈಗಲೂ ನಡೆಯುತ್ತ ಬಂದಿದೆ. ನಾವು ವಚನ ಗ್ರಂಥಗಳನ್ನು ಸಂಶೋಧಿಸುವ ಕಾರ್ಯದಲ್ಲಿ ಮತ್ತು ಅವುಗಳ ಸಂಬಂಧವಾಗಿ ನಾವು ಕೇಳಿದ ಶಂಕೆಗಳಿಗೆ ಉತ್ತರ ಕೊಡುವಲ್ಲಿ ಉಪದೇಶ ಹೊಂದಿದ ಮಠಾಧಿಕಾರಿಗಳಿಂದ ಯಾವ ವಿವರಣೆಗಳೂ ನಮಗೆ ದೊರೆತಿಲ್ಲ. ಈಗಲೂ ದೊರೆಯುವುದಿಲ್ಲ. ಆದರೆ ಈಚೆಗೆ ವಚನ ಶಾಸ್ತ್ರದ ಅರಿವು ಜನರಲ್ಲಿ ಹೆಚ್ಚಿದ ಹಾಗೆ ಮತ್ತು ಅವುಗಳ ಪ್ರಶಂಸೆಯು ದೇಶದಲ್ಲಿ ನಡೆದ ಹಾಗೆ ಈ ಬಗೆಯಾಗಿ ಮುಚ್ಚುಮರೆ ಮಾಡುವ ವೃತ್ತಿಯು ಈಗ ಕ್ರಮೇಣ ಕಡಿಮೆಯಾಗಹತ್ತಿದೆ. ಆದರೆ ಬಸವೇಶ್ವರ ಕಾಲದಲ್ಲಿ ಷಟ್ಸ್ಥಲ ಶಾಸ್ತ್ರವನ್ನು ಗುಪ್ತವಾಗಿ ಇಡುವ ಪದ್ಧತಿಯು ಇದ್ದಿಲ್ಲವೆಂದು ನಮಗೆ ತೋರುತ್ತದೆ”. (ಡಾ. ಫ.ಗು.ಹಳಕಟ್ಟಿ : ಶ್ರೀ ತೋಂಟದ ಸಿದ್ಧಲಿಂಗೇಶ್ವರರ ಚರಿತ್ರೆ ಶಿವಾನುಭವ ಪತ್ರಿಕೆ ಸಂಪುಟ 12 ಸಂಚಿಕೆ 7 ಏಪ್ರಿಲ್ 1938 ಪು. 368-369)
ಹದಿನೈದನೆಯ ಶತಮಾನದ ಹೊತ್ತಿಗೆ ಮಹಮ್ಮದೀಯರ ಆಳ್ವಿಕೆ ಜೋರಾದ ಸಂದರ್ಭದಲ್ಲಿ ತಮ್ಮ ಧರ್ಮ ತತ್ವಗಳು ಸಂರಕ್ಷಿಸಲ್ಪಡಲಿ ಎನ್ನುವ ಕಾರಣಕ್ಕೆ ತೋಂಟದ ಸಿದ್ಧಲಿಂಗೇಶ್ವರರು ಅವುಗಳನ್ನು ಗುಪ್ತವಾಗಿ ಇಡಿ ಎಂದು ಹೇಳಿರಬಹುದು. ಆದರೆ ಆಧುನಿಕ ಕಾಲದಲ್ಲಿಯೂ ಈ ಪದ್ಧತಿ ಮುಂದುವರಿದುಕೊಂಡು ಬಂದ ಪರಿಯನ್ನು ಡಾ. ಹಳಕಟ್ಟಿಯವರು ಇಲ್ಲಿ ವಿವರಿಸಿರುವುದು ಗಮನಿಸುವ ಅಂಶ.  
ಸಿದ್ಧಲಿಂಗೇಶ್ವರರು 701 ವಿರಕ್ತರ ತಂಡವನ್ನು ಕಟ್ಟಿದ ತರುವಾಯ ಇನ್ನಷ್ಟು ಸಾಧಕರು ಈ ತಂಡದಲ್ಲಿ ಸೇರಿಕೊಂಡು ೩೦೦೦ ಜನ ವಿರಕ್ತರಾದರೆಂದು ನಿರಂಜನ ವಂಶ ರತ್ನಾಕರ ಹೇಳುತ್ತದೆ. ಈ ಎಲ್ಲ ವಿರಕ್ತರಿಗೆ ಒಂದೊಂದು ಮಠಗಳನ್ನು ನಿರ್ಮಿಸುತ್ತ ಹೋದರು. ಒಂದು ಮಠಕ್ಕೆ ಒಬ್ಬ ಅಧಿಪತಿಯಿದ್ದು ಅವನಿಗೆ ಸಹಾಯಕನಾಗಿ ಒಬ್ಬ ಅಥವಾ ಅನೇಕ ಚರಂತಿಗಳು ಇರುತ್ತಾರೆ. ಇವರೆಲ್ಲರೂ ಜ್ಞಾನಿಗಳು. ಇವರು ಮಠದಲ್ಲಿ ಇದ್ದುಕೊಂಡು ಧರ್ಮ ಪ್ರಚಾರ ಮಾಡುವರು. ಇಂಥ ಪ್ರಚಾರ ಕಾರ್ಯ ಮಾಡುವ ಸಂದರ್ಭಗಳಲ್ಲಿ ಪರಮತೀಯರು ಮಠದ ಮೇಲೆ ದಾಳಿಯನ್ನು ಮಾಡಿ ನಾಶ ಪಡಿಸುವ ಕಠಿಣ ಪ್ರಸಂಗಗಳು ಆ ಕಾಲಕ್ಕೆ ನಡೆಯುತ್ತಿದ್ದವು. ಆಗ ಮಠಾಧಿಕಾರಿಗಳು ಕೆಲ ಸೈನಿಕರನ್ನು ಮಠದಲ್ಲಿ ಇಟ್ಟುಕೊಳ್ಳುತ್ತಿದ್ದರು. ಈ ಸೈನಿಕರಿಗೆ ಮಠಪತ್ತಿ (ಪತ್ತಿ=ಸೈನಿಕ)ಗಳೆಂಬ ಹೆಸರು. ಈ ಮಠಪತ್ತಿಗಳ ನೇತೃತ್ವದಲ್ಲಿ ಗಣಾಚಾರಿಗಳು ಹೋರಾಟಕ್ಕೆ ಸನ್ನದ್ಧರಾಗುತ್ತಿದ್ದರು.  ಧರ್ಮ ಸಂರಕ್ಷಣೆಗಾಗಿ ಗಣಾಚಾರ ತತ್ವವನ್ನು ಅಳವಡಿಸಿಕೊಳ್ಳಬೇಕೆಂದು ಪಂಚಾಚಾರ ತತ್ವದಲ್ಲಿ ಹೇಳಲಾಗಿದೆ. ಈ ಗಣಾಚಾರ ತತ್ವವನ್ನು ಅಳವಡಿಸಿಕೊಂಡವರೆ ಗಣಾಚಾರಿಗಳು.
ಹೀಗೆ ಮಠಾಧಿಪತಿಗಳಾದವರು ಕೇವಲ ತಮ್ಮ ಮಠ ಸಂರಕ್ಷಣೆ ಮಾತ್ರ ಮಾಡದೆ, ಲಿಂಗಾಯತರ ಆತ್ಮರಕ್ಷಣೆಗಾಗಿಯೂ ಮುಂದಾಗುತ್ತಿದ್ದರು. ಎಲ್ಲಿಯಾದರೂ ಪರವಾದಿಗಳು ಪರಮತೀಯರು   ಲಿಂಗಾಯತರಿಗೆ ಹಿಂಸೆ ಕೊಡುತ್ತಿದ್ದರೆ ತಕ್ಷಣ ಸ್ವಾಮಿಗಳು ತಮ್ಮ ಶಿಷ್ಯ ಬಳಗವನ್ನು ಕರೆದುಕೊಂಡು ಆ ಜಾಗೆಗೆ ಹೋಗಿ ಶತ್ರುಗಳನ್ನು ಸದೆಬಡೆಯುತ್ತಿದ್ದರು.
ಮಠಗಳು ಬೆಳೆದಂತೆ, ಒಂದೇ ಮಠಕ್ಕೆ ಸ್ಥಿರಪಟ್ಟ, ಚರಪಟ್ಟ ಎಂದು ಇಬ್ಬರು ಮಠಾಧೀಶರನ್ನು ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಸ್ಥಿರಪಟ್ಟಕ್ಕೆ ಬಂದವರು ಮಠದಲ್ಲಿಯೇ ಉಳಿದುಕೊಂಡು ಬಂದ ಭಕ್ತರಿಗೆ ಮಾರ್ಗದರ್ಶನ ಮಾಡಿದರೆ, ಚರಪಟ್ಟದವರು ಊರೂರು ಸುತ್ತುತ್ತ ಮಠಕ್ಕೆ ಬೇಕಾದ ಆರ್ಥಿಕ ಬಲವನ್ನು ತಂದುಕೊಡುವುದಲ್ಲದೆ ಭಕ್ತರ ಮನೆಗಳಿಗೆ ಹೋಗಿ ಧರ್ಮಬೋಧೆಯನ್ನು ಮಾಡುತ್ತಿದ್ದರು. ಆದರೆ ಒಮ್ಮೊಮ್ಮೆ ಈ ವಿಷಯದಲ್ಲಿ ಜಗಳಗಳಾಗಿ ಮಠದ ವ್ಯವಸ್ಥೆ ಶಿಥಿಲವಾಗತೊಡಗಿತು. ಹೀಗಾಗಿ ಈ ಪರಂಪರೆ ಕೆಲವು ಕಾಲದ ನಿಂತು ಹೋಯಿತು.
ಸಿದ್ಧಲಿಂಗೇಶ್ವರರು ತಮ್ಮ ತರುವಾಯ ಬೋಳಬಸವೇಶ್ವರರಿಗೆ ತಮ್ಮ ಅಧಿಕಾರ ಬಿಟ್ಟುಕೊಟ್ಟರು. ತದನಂತರ ಕಟ್ಟಿಗೆಹಳ್ಳಿ ಸಿದ್ಧಲಿಂಗ ಸ್ವಾಮಿಗಳ ತನಕ ಈ ಪರಂಪರೆ ಏಕಛತ್ರಾಧಿಪತಿಯಡಿಯಲ್ಲಿ ಮುಂದುವರೆದಿತ್ತು. ತದನಂತರ ಐದು ಸಮಯಭೇದ ಉಂಟಾಗಿ, ಈ ಶೂನ್ಯಪೀಠ ಐದು ಕವಲುಗಳಾಗಿ ಒಡೆದು ಹೋಯಿತು.

*ಪ್ರಕಾಶ ಗಿರಿಮಲ್ಲನವರ*
ಬೆಳಗಾವಿ
ಮೊ: 9902130041