ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿ ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪ ಗುಡ್ಡದಲ್ಲಿ ಬೃಹತ್ ಸಮಾವೇಶ ನಡೆದಿದೆ.
ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಪ್ರತಿಭಟನಾ ವೇದಿಕೆಗೆ ಆಗಮಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕೂಡ ಆಗಮಿಸಿ ಪಂಚಮಸಾಲಿ ಸಮಾವೇಶಕ್ಕೆ ಬೆಂಬಲ ಸೂಚಿಸಿದರು. ಮಾಜಿ ಸಚಿವ ಸಿ. ಸಿ. ಪಾಟೀಲ, ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ, ಸಿದ್ದು ಸವದಿ ಸೇರಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಬಳಿಕ ವಿಜಯೇಂದ್ರ ಅಲ್ಲಿಂದ ಸುವರ್ಣ ವಿಧಾನಸೌಧಕ್ಕೆ ತೆರಳಿದರು. ಇದಕ್ಕೂ ಮೊದಲು ವಿಜಯೇಂದ್ರ ವಿರುದ್ಧ ಯತ್ನಾಳ್ ಬೆಂಬಲಿಗರು ಧಿಕ್ಕಾರದ ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಸಿದ್ದು ಸವದಿ ಧಿಕ್ಕಾರ ಕೂಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸಮಾವೇಶದ ಆರಂಭಕ್ಕೂ ಮೊದಲು ಅಗಲಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರೇಬಾಗೇವಾಡಿಯಲ್ಲಿ ಮುಖಂಡರು ವಶಕ್ಕೆ: ನಿಷೇಧದ ನಡುವೆಯೂ ಟ್ರ್ಯಾಕ್ಟರ್ ಮೂಲಕ ಸಮಾವೇಶಕ್ಕೆ ಬರುತ್ತಿದ್ದ 50ಕ್ಕೂ ಅಧಿಕ ಪಂಚಮಸಾಲಿ ಮುಖಂಡರನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದರು. ಟ್ರ್ಯಾಕ್ಟರ್ ಜಾಥಾಗೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಹೋರಾಟಗಾರರನ್ನು ತಡೆದರು.
ಪಂಚಮಸಾಲಿಗೆ 2A ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೃಹತ ಪ್ರತಿಭಟನೆ
