ಬೆಳಗಾವಿ,:ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ ಕೆಎಲ್‌ಇ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜನರಿಗೆ ವರದಾನವಾಗಿ ಪರಿಣಮಿಸಿದೆ. ಕ್ಯಾನ್ಸರ ಚಿಕಿತ್ಸೆ ಎಂದರೆ ದುಬಾರಿ, ಈ ಭಾಗದ ಜನರು ಚಿಕಿತ್ಸೆ ಪಡೆಯುವದೆಂದರೆ ಗಗನ ಕುಸುಮ. ಜನರ ಬವಣೆಯನ್ನು ಕಣ್ಣಾರೆ ಕಂಡು ಕೈಗೆಟಕುವ ದರದಲ್ಲಿ ನೀಡಲು ಡಾ. ಪ್ರಭಾಕರ ಕೋರೆ ಅವರು ಪಣ ತೊಟ್ಟರು. ಅದರಂತೆ ಬೆಳಗಾವಿಯಲ್ಲಿ ಪ್ರತ್ಯೇಕವಾದ ಸುಮಾರು 300 ಹಾಸಿಗೆಗಳ ಸೌಲಭ್ಯವುಳ್ಳ 1 ಲಕ್ಷ 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕ್ಯಾನ್ಸರ ಆಸ್ಪತ್ರೆ ತೆರೆದರು. ಅವರು ಬಯಸಿದಂತೆ ಈ ಭಾಗದ ಜನರಿಗೆ ಕ್ಯಾನ್ಸರ ಸಂಬಂಧಿತ ಖಾಯಿಲೆಗಳಿಗೆ ವಿಶ್ವ ಗುಣಮಟ್ಟದ ಸಮಗ್ರ ಚಿಕಿತ್ಸೆಯನ್ನು ನೀಡುವ ಮಹದಾಸೆ ಇಂದು ಪೂರ್ಣಗೊಳ್ಳುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೃಹತ ಕ್ಯಾನ್ಸರ ಆಸ್ಪತ್ರೆ ಇಂದು ತಲೆ ಎತ್ತಿ ನಿಂತಿದೆ.
ಈ ವಿಷಯವನ್ನು ತಿಳಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಇದೇ ದಿ. 03 ಜನೇವರಿ 2025 ರಂದು ಮಧ್ಯಾಹ್ನ 4 ಗಂಟೆಗೆ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಜನಸೇವೆಗೆ ಅರ್ಪಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕೇಂದ್ರದ ಗ್ರಾಹಕ ಸೇವೆ, ಆಹಾರ ಮತ್ತು ನಾಗರೀಕ ಪೂರೈಕೆ, ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ, ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಾಲ್ಯಾಭಿವೃದ್ದಿ ಸಚಿವರಾದ ಶರಣಪ್ರಕಾಶ ಪಾಟೀಲ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಸಂಸದರಾದ ಜಗದೀಶ ಶೆಟ್ಟರ, ಶಾಸಕರಾದ ರಾಜು ಸೇಟ್, ಅಭಯ ಪಾಟೀಲ ಮತ್ತು ಕಾಹೇರನ ಉಪಕುಲಪತಿ ಡಾ. ನಿತಿನ ಗಂಗಾಣೆ, ದಾನಿಗಳಾದ ಡಾ. ಸಂಪತಕುಮಾರ ಶಿವಣಗಿ ಹಾಗೂ ಡಾ. ಉದಯಾ ಶಿವಣಗಿ ಅವರು ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ವಹಿಸಲಿದ್ದಾರೆ ಎಂದು ತಿಳಿಸಿದರು.
ಕ್ಯಾನ್ಸರ ಆಸ್ಪತ್ರೆ ನಿರ್ಮಾಣಕ್ಕೆ ಸಹಯಾರ್ತವಾಗಿ ದಾನ ನೀಡಿದ ಡಾ. ಸಂಪತಕುಮಾರ ಎಸ್ ಶಿವಾನಗಿ ಹಾಗೂ ಡಾ. ಉದಯಾ ಶಿವಾನಗಿ ಅವರ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ. ಕ್ಯಾನ್ಸರ ಸಂಬಂಧಿತ ಖಾಯಿಲೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಹಾಗೂ ಎಲ್ಲ ಪ್ರಕ್ರಿಯೆಗಳನ್ನು ಮಾಡಬೇಕೆನ್ನುವ ಕನಸು ಈಗ ನನಸಾಗಿದೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಿಂಬಾಗದಲ್ಲಿ ಸುಸಜ್ಜಿತವಾದ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಕ್ಯಾನ್ಸರ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ಹೊಂದಿದೆ.
ಕ್ಯಾನ್ಸರ ಚಿಕಿತ್ಸೆಗಾಗಿ ಬೇರೆ ಬೇರೆ ನಗರಗಳಿಗೆ ಅಲೆಯವದನ್ನು ತಪ್ಪಿಸಿ ಬಹುವಿಧ ಕ್ಯಾನ್ಸರಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿರುವ ಇಲ್ಲಿ ಕ್ಯಾನ್ಸರ ಸಂಬಂಧಿತ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯಿಂದ ಹಿಡಿದು, ಕೀಮೋಥೆರಪಿ, ರೆಡಿಯೋಥೆರಪಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ. ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸದಸ್ಯರ ಇಚ್ಚೆಯಂತೆ ಆಸ್ಪತ್ರೆಯು ಜನಸೇವೆಗೆ ತೆರೆದುಕೊಂಡಿದೆ.
ರೊಬೊಟಿಕ್ ಶಸ್ತ್ರಚಿಕಿತ್ಸೆ: ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಶಸ್ತ್ರಚಿಕಿತ್ಸೆಗಾಗಿ ರೋಬೊಟಿಕ್ ಅಳವಡಿಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ರೋಗಿಗಳನ್ನು ಗುಣಮುಖಗೊಳಿಸುವಲ್ಲಿ ಸಹಕಾರಿಯಾಗಿದೆ. ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರೊಬೊಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರನ ಶಸ್ತ್ರಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಎಂದು ಕಂಡು ಬಂದಿದೆ.
ತೀವ್ರ ನಿಗಾ ಘಟಕ: 300 ಹಾಸಿಗೆಗಳ ಆಸ್ಪತ್ರೆಯಲ್ಲಿ ಗಂಭೀರ ಪರಿಸ್ಥಿಯಲ್ಲಿ ಚಿಕಿತ್ಸೆ ನೀಡಲು ಅಗತ್ಯವಿರುವ ತೀವ್ರ ನಿಗಾ ಘಟಕವನ್ನು ತೆರೆಯಲಾಗಿದ್ದು, ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಒಳಗೊಂಡಿದೆ. 35 ಹಾಸಿಗೆಗಳ ತೀವ್ರ ನಿಗಾ ಘಟಕವಿದ್ದು, ಅತ್ಯಾಧುನಿಕವಾದ 5 ಶಸ್ತçಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಲಾಗಿದೆ.
ರೆಡಿಯೇಶನ್ ಥೆರಪಿ: ರೆಡಿಯೇಶನ ಚಿಕಿತ್ಸೆಯ ಆವಿಷ್ಕಾರವು ಕ್ಯಾನ್ಸರ ಚಿಕಿತ್ಸೆಯಲ್ಲಿ ವಿಶ್ವವನ್ನೇ ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು. ಇಂದು, ಕ್ಯಾನ್ಸರ್ ರೋಗಿಗಳಲ್ಲಿ ನಾಲ್ಕನೇ ಮೂರು ಭಾಗದಷ್ಟು ಜನರು ಕೆಲವು ರೀತಿಯ ರೇಡಿಯೊಥೆರಪಿಯಿಂದ ಗುಣಮುಖರಾಗುತ್ತಿದ್ದಾರೆ. ರೆಡಿಯೇಶನ್ ಆಂಕೊಲಾಜಿ ವಿಭಾಗವು ರೇಡಿಯಂ ಮತ್ತು ಕೋಬಾಲ್ಟ್ ಚಿಕಿತ್ಸೆಯಿಂದ ಹೆಚ್ಚಿನ ಶಕ್ತಿಯ ಎಕ್ಸ್-ರೇ ಲೀನಿಯರ್ ವೇಗವರ್ಧಕ ಚಿಕಿತ್ಸೆಯವರೆಗೆ ಬಹಳ ದೂರ ಸಾಗಿದೆ.
ಚಿಕ್ಕಮಕ್ಕಳ, ಮೆಡಿಕಲ್ ಆಂಕೊಲಾಜಿ, ಇಂಟರ್ವೆನ್ಷನಲ್ ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಫಿಜಿಯೋಥೆರಪಿ ವಿಭಾಗಗಳು ರೋಗಿಗಳ ಆರೈಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿವೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ಸರಕಾರಗಳ ಯೋಜನೆಗಳಡಿಯಲ್ಲಿಯೂ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಡಾ. ಎಂ ವಿ ಜಾಲಿ, ತಜ್ಞವೈದ್ಯರಾದ ಡಾ. ಕುಮಾರ ವಿಂಚುರಕರ, ಡಾ. ಇಮ್ತಿಯಾಜ, ಡಾ.ರಾಜೇಂದ್ರ ಮೆಟಗುಡಮಠ, ಡಾ. ರೋಹನ ಭಿಸೆ, ಡಾ. ಅಭಿಲಾಷಾ ಸಂಪಗಾರ ಸೇರದಂತೆ ಮುಂತಾದವರು ಉಪಸ್ಥಿತರಿದ್ದರು.